ಪಾಟ್ನಾ : ಬಿಹಾರದ ಪಾಟ್ನಾದ ಗ್ರಾಮವೊಂದರಲ್ಲಿ ನಡೆದ ಮದುವೆಯೊಂದು ಈಗ ಕೊರೊನಾ ಸೋಂಕಿನ ಸರಪಳಿಯನ್ನೇ ಸೃಷ್ಟಿಸಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಪಾಟ್ನಾದ ಪಾಲಿಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತ್ತೀಚಿಗೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ನೂರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢ ಪಟ್ಟಿದೆ. ಆಘಾತಕಾರಿ ವಿಷಯವೇನೆಂದರೆ 30 ವರ್ಷದ ಮದುಮಗನೂ ಮದುವೆಯಾದ ಎರಡೇ ದಿನಕ್ಕೆ ಸಾವನಪ್ಪಿದ್ದಾನೆ.
ವರನು ಗುರುಗ್ರಾಮದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಮೇ ಕೊನೆಯ ವಾರದಲ್ಲಿ ಮದುವೆಗೆಂದೇ ಊರಿಗೆ ಬಂದಿದ್ದರು. ಇದಾದ ಕೆಲವೇ ದಿನಕ್ಕೆ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು ಮದುವೆಯ ದಿನವೂ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಮದುವೆ ಮುಂದೂಡದೆ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಪ್ಯಾರಸಿಟಮಾಲ್ ಮಾತ್ರೆ ಸೇವಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎರಡು ದಿನದ ಬಳಿಕ ಆರೋಗ್ಯ ಸ್ಥಿತಿ ಗಂಭೀರಗೊಂಡ ಪರಿಣಾಮ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದರು. ಈ ವಿಷಯ ಜಿಲ್ಲಾಧಿಕಾರಿಗಳಿಗೆ ತಿಳಿದು ವೈದ್ಯಕೀಯ ತಂಡವು ಮದುವೆಯಲ್ಲಿ ಪಾಲ್ಗೊಂಡವರನ್ನು ತಪಾಸಣೆಗೆ ಒಳಪಡಿಸಿದಾಗ 100ಕ್ಕೂ ಅಧಿಕ ವರದಿ ಪಾಸಿಟಿವ್ ಬಂದಿದೆ. ಪಾಲಿಗಂಜ್ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದ್ದು, ಇಡೀ ಗ್ರಾಮದಲ್ಲಿ ಆತಂಕವನ್ನು ಸೃಷ್ಟಿಸಿದೆ.