ನೆನಪಿನಂಗಳದ ಸುಳಿಯಲ್ಲಿ…..

0
186
Tap to know MORE!

ಮನಸಲ್ಲೇ ಏನೇನೋ ಆಲೋಚನೆಗಳು, ಆ ಆಲೋಚನೆಗಳ ಸುಳಿಯಲ್ಲಿ ಧನ್ಯ ತನ್ನ ಕೈಗಳಿಂದ ಹೂವಿನ ಗಿಡದ ಬುಡದಲ್ಲಿ ಬೆಳೆದು ನಿಂತ ಬೇಡದ ಕಾಡು ಗಿಡಗಳನ್ನು ಕೀಳುತ್ತಾ ಇರುವ ವೇಳೆಯಲ್ಲಿ ಆಕೆಯ ಮನಸ್ಸು ಏನೇನೋ ಚಿಂತಿಸುತ್ತಾ, ತನ್ನ ಹಿರಿಯರ ಕಾಲದ ಕೆಲವು ಸನ್ನಿವೇಶಗಳನ್ನು ಮೆಲುಕು ಹಾಕತೊಡಗಿತು. ಅಂದು ಮನೆ ಮಂದಿಯೆಲ್ಲ ಒಂದೇ ಸಾಬೂನಿನಿಂದ ಸ್ನಾನ ಮಾಡುತಿದ್ದ ಕಾಲವದು. ಶ್ರೀಮಂತರಿಗೆ ಮಾತ್ರ ಆಗ ಸಕ್ಕರೆ ಕಾಯಿಲೆ. ನಾವು ಶಾಲೆಗೆ ಹೋಗುತ್ತಾ ಇದ್ದಾಗ 5 ಪೈಸೆಗೆ ಮಿಠಾಯಿ ಸಿಗುತ್ತಿದ್ದ ಕಾಲ, ಹತ್ತು ಪೈಸೆಯ ಚಿಕ್ಕಿಯನ್ನೆ ಹೆಚ್ಚಾಗಿ ತಿನ್ನುತ್ತಿದ್ದೆವು. ಹೀಗೆ ಆಲೋಚನೆಗಳ ಸರಮಾಲೆಯ ವೇಳೆ..

ಗೇಟ್ ನ ಶಬ್ದ ಕೇಳಿಸಿತು. ಒಮ್ಮೆ ಆಕೆ ದೃಷ್ಟಿಯನ್ನು ಅತ್ತ ಹಾಯಿಸಿದಳು. ತನ್ನ ಗಂಡ ಬಂದಿದ್ದರು. ಯಾವತ್ತೂ ಮನೆಯೊಳಗೆ ಹೆಜ್ಜೆ ಇಡಬೇಕಾದರೆ ಚಾ ಆಗಿದ? ಎಂಬ ಪ್ರಶ್ನೆ. ಆದ್ರೆ ಈಗ ಸಮಯ ಬದಲಾಗಿದೆ. ಕೋರೋನ ವ್ಯಾಪಿಸಿದ ಕಾರಣ ಸ್ನಾನಕ್ಕೆ ಬಾತ್ ರೂಮ್ ನಲ್ಲಿ ಬಾತ್ ಟವೆಲ್ ಇಟ್ಟಿದ್ದಿಯಾ ಎಂಬ ಪ್ರಶ್ನೆ !! ಹ, ಇಟ್ಟಿರುತೇನೆ ಎಂದು ಆಕೆ ಉತ್ತರಿಸಿದಳು. ಇತ್ತೀಚೆಗೆ ಮನೆಗೆ ಏನೋ ಒಂದು ರೀತಿಯ ಸೂತಕದ ಛಾಯೆ, ನಮ್ಮ ಸಂಪ್ರದಾಯದಲ್ಲಿ ಶವ ಸಂಸ್ಕಾರ ಮಾಡಿ ಮನೆಗೆ ಬಂದಾಗ ಹಿಂದಿನ ಬಾಗಿಲಿನಿಂದ ಸ್ನಾನದ ಕೊಠಡಿಗೆ ತೆರಳಬೇಕು. ಯಾರನ್ನೂ, ಯಾವುದನ್ನೂ ಸ್ಪರ್ಶ ಮಾಡುವ ಹಾಗಿಲ್ಲ. ಮನೆಯ ಸದಸ್ಯರ ಬಟ್ಟೆ ಬರೆ ಎಲ್ಲವನ್ನೂ ಸ್ನಾನ ಗ್ರಹಕ್ಕೆ ಮುಂಚಿತವಾಗಿ ಇಟ್ಟು ಬರುತ್ತಿದ್ದರು. ಇಂದು ಅದೇ ಸ್ಥಿತಿ ನಮಗೆ ಒದಗಿ ಬಂದಿರುವುದು ವಿಪರ್ಯಾಸ. ಒಂದು ಬಾರಿ ಮನಸ್ಸು ಏನೇನೋ ಗಂಭೀರವಾಗಿ ಚಿಂತೆಗೀಡು ಮಾಡಿತ್ತು ಅಂದಿನ ಸನ್ನಿವೇಶ….

ಲೇಖಕರ ಮತ್ತೊಂದು ಬರಹ : ತೇಜೋವಧೆ

ಹಾಗೆ ಆಕೆ ಅಡುಗೆ ಮನೆಯಲ್ಲಿ ಹೆಜ್ಜೆ ಇಡಬೇಕಾದ ಸಂದರ್ಭದಲ್ಲಿ ಚಹ ತಯಾರಿಗೆ ಈಗ ಚಹ ಪುಡಿ, ಸಕ್ಕರೆ, ಹಾಲಿನ ಜೊತೆಗೆ ಪುದೀನಾ ಸೊಪ್ಪು, ಶುಂಠಿ ಹಾಕೋದು ವಾಡಿಕೆಯಾಗಿದೆ. ನಾನು ತಯಾರು ಮಾಡಿದರೆ ಅವರಿಗೆ ಸರಿ ಆಗುವುದಿಲ್ಲ, ಗಂಡನಿಗೆ ಆಕೆ ಒಂದು ಬಾರಿ ಕೇಳಿದಳು, ಚಹ ಮಾಡ್ಲಿಯಾ? ಎಂದು. ಬೇಡ, ಬೇಡ.. ನಾನೇ ಮಾಡುತ್ತೇನೆ ಎಂದು ಉತ್ತರಿಸಿದಾಗ ಆಕೆ, ಹಾಗಾದ್ರೆ ನಾನು ಸ್ವಲ್ಪ ಗಿಡದ ಬುಡದಲ್ಲಿ ಬೆಳೆದು ನಿಂತ ಬೇಡದ ಕಾಡು ಗಿಡಗಳನ್ನು ಕಿತ್ತು ಬರುತ್ತೇನೆ ಎಂದು ತನ್ನ ಪಾಡಿಗೆ ಗಾರ್ಡನ್ ಕಡೆ ಹೆಜ್ಜೆ ಹಾಕಿದಳು. ಅದಾಗಲೇ ಒಂದೆರಡು ಮಳೆ ಹನಿ ಬೀಳಲು ಶುರುವಾಯಿತು. ತುಂತುರು ಮಳೆ ಹನಿ ಬೀಳಲು ಪ್ರಾರಂಭವಾದಾಗ ಆಕೆಗೆ ತನ್ನ ಬಾಲ್ಯದ ನೆನಪುಗಳು ಮರುಕಳಿಸಿದವು. ಚಿಕ್ಕವಳಿದ್ದಾಗ ಶಾಲೆಗೆ ಹೋಗುವಾಗ ಬೆಳಗ್ಗೆ ಜೋರಾದ ಮಳೆ, ಆಮೇಲೆ ದಿನವಿಡೀ ಚಿಟಿ ಪಿಟಿ ಮಳೆ, ರೈನ್ ಕೋಟ್ ಧರಿಸಿ ಮಳೆಯಲ್ಲಿ ನೆನೆದು ಮನೆಗೆ ಬಂದು ಅಮ್ಮ ಬೈದ ದಿನಗಳು, ಆದೆ ರೀತಿ ಯಾರೋ ಯಾರೋ ಒಬ್ಬರು ಫೇಸ್ ಬುಕ್ ತರ ಊರ ವಿಷಯಗಳನ್ನೆಲ್ಲ ಮನೆಗೆ ತರುತ್ತಿದ್ದರು. ಹಾಗೆ ಮನೆಯಲ್ಲಿ ಸಂಗ್ರಹಿಸಿದ ವಿಷಯಗಳನ್ನೇಲ್ಲ ಊರಿಗೆ ಹಂಚುತ್ತಿದ್ದರು. ಆದಿತ್ಯವಾರದಂದು ನಾಲ್ಕು ಗಂಟೆಗೆ ಡೀ. ಡೀ. ಚಾನಲ್ ನಲ್ಲಿ ಪ್ರಸಾರವಾಗುವ ಚಲನಚಿತ್ರ ನೋಡೋದೆ ಒಂದು ಖುಷಿ. ಹಾಗೆ ಎಷ್ಟೊಂದು ಕಥೆ, ಕಾದಂಬರಿ ಓದುತ್ತಿದ್ದೆವು. ಉಷಾ ನವರತ್ನಂ, ತ್ರಿವೇಣಿ, ಮೊದಲಾದವರು ಬರೆದ ಕಾದಂಬರಿ. ಅದರಲ್ಲೂ ಪತ್ತೇದಾರಿ ಕಾದಂಬರಿ ಆಕೆಗೆ ಪಂಚ ಪ್ರಾಣ, ವಾರಕ್ಕೊಮ್ಮೆ ನೆರೆಮನೆ ಚಿತ್ರಕ್ಕ ಮನೆಗೆ ಹೋಗಿ ದೂರದರ್ಶನದ ರಾಮಾಯಣ, ಮಹಾಭಾರತ ನೋಡೋದೇ ಒಂದು ರೀತಿಯ ಗಮ್ಮತ್ತು. ಜ್ವರ, ಶೀತ, ಕೆಮ್ಮು ಬಂದರೆ ಅಮ್ಮ ಮಾಡಿ ಕೊಟ್ಟ ತುಳಸಿ, ಒಣ ಶುಂಠಿ, ಕರಿ ಮೆಣಸಿನ ಕಷಾಯನೇ ಅಮೃತವಾಗಿತ್ತು. ಅದರಲ್ಲೇ ಜ್ವರ ಶೀತ ಕೆಮ್ಮು ಮಾಯವಾಗುತಿತ್ತು.

ಆಕೆಯ ಅಜ್ಜ ಕೆಳ ಜಾತಿಯ ಜನರಿಗೆ ಅಂಗಳದ ಒಳಗೆ ಚಪ್ಪಲಿ ಧರಿಸಿ ಬರಲು ಬಿಡುತ್ತಿರಲಿಲ್ಲ. ಅಂಗಳಕ್ಕೆ ಬರಬೇಕಿದ್ದರೆ ಅವರು ಚಪ್ಪಲಿ ತೆಂಗಿನ ಬುಡದಲ್ಲಿ ಇಟ್ಟು ಅಲ್ಲೇ ಬಕೆಟ್ ನಲ್ಲಿ ಇಟ್ಟ ನೀರನ್ನು ಕಾಲಿಗೆ ಹಾಕಿ ಅಂಗಳಕ್ಕೆ ಕಾಲಿಡುತಿದ್ದರು. ಮನೆಯ ಒಳಗಡೆಯಂತೂ ಅವರಿಗೆ ಪ್ರವೇಶ ನಿಷಿದ್ದವಾಗಿತ್ತು. ಒಂದು ದಿನ ಮಾದ್ವಿ ಎನ್ನುವ ನೆರೆಮನೆಯ ಮಹಿಳೆ ಚಪ್ಪಲಿ ಅಂಗಳಕ್ಕೆ ಹಾಕಿ ಬಂದಾಗ, ಧನ್ಯ ಎದುರಲ್ಲೇ ಆಕೆಯ ಅಜ್ಜ ಮದ್ವಿಗೆ ಬಯ್ದಿದ್ದರು. ವಿಷು ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿ ಚೇಚಿ ನೈಯಪ್ಪ ಮಾಡುತಿದ್ದರು. ಬಾಳೆ ಹಣ್ಣಿನ ಪಳಂ ಪುರಿ ಮಾಡಿ, ಅಜ್ಜನಿಗೆ ತಿಳಿಯದ ಹಾಗೆ ಅಡಗಿಸಿ ನಮಗೆ ಮಕ್ಕಳಿಗೆ ತಿನ್ನಲು ಕೊಡುತ್ತಿದ್ದರು. ಕಾಲ ಈಗ ಸಂಪೂರ್ಣ ಬದಲಾಗಿದೆ…..

ಅಷ್ಟರಲ್ಲೇ ತನ್ನ ಗಂಡ ಕರೆಯೋ ದ್ವನಿ ಕೇಳಿಸಿತು. ಧನ್ಯ ಚಹಾ ರೆಡಿ. ಧನ್ಯ ಚಹಾ ತರುತ್ತಿರಬೇಕಾದ್ರೆ ಅಣಕ ಮಾಡುತ್ತಾ “ನಿನ್ನ ಅಪ್ಪನ ಮನೆಯಲ್ಲೂ ನೀನು ಇಂತಹ ಚಹಾ ಕುಡಿದಿರಲ್ಲ ನೋಡು, ನಾನು ಮಾಡಿದ ಚಹಾ ಸೂಪರ್ ಇದೆ, ಇದನ್ನು ಕುಡಿಯಲು ಪುಣ್ಯ ಮಾಡಿರಬೇಕು, ಎಂದಾಗ ಧನ್ಯ ಮುಗುಳ್ನಗುತ್ತಾ ಹೌದ್, ಚಹಾ ಸೂಪರ್… ನರೇಂದ್ರ ಮೋದಿ ಚಹಾ ಮಾರಿ ದೇಶದ ಪ್ರಧಾನಿ ಆದ್ರೂ. ನೀವು ಚಹಾ ಮಾಡಿ ದೇಶದ ಪ್ರಧಾನಿ ಆಗ್ತೀರಿ” ಎಂದು ನಕ್ಕು ಬಿಟ್ಟಳು.

ಕಥೆ ಬರಹ: ಶ್ರೀಮತಿ ರೇಖಾ ಸುದೇಶ್ ರಾವ್

LEAVE A REPLY

Please enter your comment!
Please enter your name here