ಪಕ್ಷದೊಳಗಿನ ಶೀತಲ ಸಮರ ; ಕೊರೊನಾ ನಿಯಂತ್ರಣ ವಿಫಲ

0
129
Tap to know MORE!

ಕರ್ನಾಟಕದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರು. ಸೋಂಕು ನಿಯಂತ್ರಣಕ್ಕೆ ಸರ್ಕಾರ ಸತತ ಪ್ರಯತ್ನಪಟ್ಟರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ನಡುವೆ ಲಾಕ್‌ಡೌನ್ ಪರಿಣಾಮವಾಗಿ ಹಲವಾರು ಸಮಸ್ಯೆಗಳು ಸರಕಾರದ ಮುಂದಿದೆ.

ಕೊರೊನಾದ ಜೊತೆಗೆ ಆರ್ಥಿಕ ನಷ್ಟವನ್ನು ನಿಭಾಯಿಸುವುದು ಕೂಡಾ ಸವಾಲಿನ ಪ್ರಶ್ನೆಯಾಗಿದೆ. ಈ ನಡುವೆ ಕೊರೊನಾ ನಿಯಂತ್ರಣಕ್ಕೆ ಸಿಎಂ ಬಿಎಸ್‌ವೈ ಅವರ ಜೊತೆಗಿರಬೇಕಾದ ಸಚಿವರ ನಡುವಿನ ಶೀತಲ ಸಮರ, ಗೊಂದಲದ ಹೇಳಿಕೆಗಳು, ಕೋರೊನಾ ಚಿಕಿತ್ಸೆಯ ಉಪಕರಣಗಳ ಖರೀದಿಯಲ್ಲಿ ಆಗಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ಆರೋಪ ಬಿಎಸ್‌ವೈ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಈ ನಡುವೆ ಬಿಎಸ್‌ವೈ ಸರ್ಕಾರದ ವಿಫಲತೆಯನ್ನು ಬಿಜೆಪಿ ಹೈಕಮಾಂಡ್‌ ಕೂಡಾ ತರಾಟೆಗೆ ತೆಗೆದುಕೊಂಡಿದೆ.

ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಕೊರೊನಾ ಪರಿಸ್ಥಿತಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಕೊರೊನಾ ನಿರ್ವಹಣೆ ಮಾಡಲು ಸಿಎಂಗೆ ದೊಡ್ಡ ಅಡ್ಡಗಾಲಾಗಿರುವುದು ಸಚಿವರ ನಡುವಿನ ಶೀತಲ ಸಮರ. ಆರಂಭದಲ್ಲೇ ಈ ಗೊಂದಲ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಯಿತು. ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ನಡುವೆ ಆರಂಭವಾಗಿದ್ದ ಕೊರೊನಾ ಉಸ್ತುವಾರಿ ಗೊಂದಲ ಬಳಿಕ ಸುಧಾಕರ್‌ ಮತ್ತು ಆರ್. ಅಶೋಕ್‌ ವರೆಗೂ ತಲುಪಿತು. ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದಾಗ ಅದರ ಹೆಗ್ಗಳಿಕೆಯನ್ನು ಪಡೆಯಲು ಸಚಿವರುಗಳು ತುದಿಕಾಲಲ್ಲಿ ನಿಂತಿದ್ದರು. ಆದರೆ ಯಾವಾಗ ನಿಯಂತ್ರಣ ತಪ್ಪಿ ಹೋಯಿತೋ ಇವಾಗ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಸದ್ಯ ಬೆಂಗಳೂರಿನ ಹೊಣೆಯನ್ನು ಸಿಎಂ ಎಂಟು ಮಂದಿಗೆ ನೀಡಿದ್ದಾರೆ. ಆದರೆ ಸೋಂಕು ನಿಯಂತ್ರಣ ಮೀರಿ ಹೋಗುತ್ತಿದೆ. ಈ ನಡುವೆ ಸಂಪುಟದ ಸಚಿವರ ನಡುವಿನ ಶೀತಲ ಸಮರವನ್ನು ಸರಿಪಡಿಸುವುದು ಸಿಎಂಗೆ ದೊಡ್ಡ ತಲೆನೋವಾಗಿದೆ.

ಸೋಂಕಿನ ನಿರ್ವಹಣೆಯ ವಿಫಲತೆ ಆರೋಪದ ನಡುವೆ ಸಿಎಂ ಬಿಎಸ್‌ವೈ ಅವರಿಗೆ ತಲೆನೋವಾಗಿ ಪರಿಣಮಿಸಿರುವುದು ಸರ್ಕಾರದ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪ. ಕೊರೊನಾ ಉಪಕರಣಗಳ ಖರೀದಿಯಲ್ಲಿ ಆಗಿದೆ ಎನ್ನಲಾಗಿರುವ ಭಾರೀ ಭ್ರಷ್ಟಾಚಾರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವೆಂಟಿಲೇಟರ್‌,ಪಿಪಿಇ ಕಿಟ್‌ ಸೇರಿದಂತೆ ಇತರ ಉಪಕರಣಗಳ ಖರೀದಿಯಲ್ಲಿ ಭಾರೀ ಗೋಲ್‌ಮಾಲ್‌ ನಡೆದಿದೆ. ಕಾಂಗ್ರೆಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ವಿರುದ್ಧ ಕೆಂಗಣ್ಣು ಇಟ್ಟಿದೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ಆರೋಪವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್‌ ಯೋಜನೆ ರೂಪಿಸುತ್ತಿದೆ. ಇದು ಸರಕಾರಕ್ಕೆ ಕಂಟಕವಾಗಲಿದೆ. ಕೊರೊನಾದಂತಹ ಸಂಕಷ್ಟದ ಅವಧಿಯಲ್ಲೂ ಬಿಜೆಪಿ ಸರ್ಕಾರ ಹಗರಣದಲ್ಲಿ ಭಾಗಿಯಾಗಿದೆ ಎಂಬ ಆರೋಪ ಸರ್ಕಾರ ಹಾಗೂ ಪಕ್ಷದ ವಿರುದ್ಧವಾದ ಜನಾಭಿಪ್ರಾಯ ಮೂಡಲು ಕಾರಣವಾಗುತ್ತದೆ.

​ಸೋಂಕು ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಸರ್ಕಾರ ಪೂರ್ತಿ ಎಡವಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ. ಆರಂಭದ ದಿನಗಳಲ್ಲೇ ಗೊಂದಲದ ಹೆಜ್ಜೆಗಳು, ತಪ್ಪು ನಡೆಗಳು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣವಾಗಿಸಿದೆ. ಇನ್ನು ಲಾಕ್‌ಡೌನ್‌ ಬೇಕು ಬೇಡ ಎಂಬ ಗೊಂದಲದ ಚರ್ಚೆಗಳೂ ಹಾಗೂ ನಿರ್ಧಾರಗಳು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ಅಂತ್ಯಸಂಸ್ಕಾರದಲ್ಲಿ ನಡೆಯುವ ಅನಾಹುತಗಳು, ಖಾಸಗಿ ಆಸ್ಪತ್ರೆಯ ದುಬಾರಿ ದರ ಇವೆಲ್ಲವೂ ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಹಾಗೂ ಜನಾಕ್ರೋಶ ರೂಪಿತವಾಗಲು ಕಾರಣವಾಗುತ್ತಿದೆ.

LEAVE A REPLY

Please enter your comment!
Please enter your name here