ಬೆಂಗಳೂರು,ನ.೪- ದೀಪಾವಳಿ ಸಂದರ್ಭ, ಪಟಾಕಿಯಿಂದ ಉಂಟಾಗುವ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ಆಧಾರಿಸಿ ಪಟಾಕಿ ನಿಷೇಧಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ರವರು ತಿಳಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸುವ ಬಗ್ಗೆ ಸರ್ಕಾರ ಸದ್ಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.
ಪಟಾಕಿ ಹೊಗೆಯಿಂದ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಕೊರೊನಾ ಸೋಂಕು ಸಹ ಹೆಚ್ಚಾಗುತ್ತದೆ. ಹಾಗಾಗಿಯೇ ಈ ಬಗ್ಗೆ ವರದಿ ನೀಡಲು ತಜ್ಷರ ಸಮಿತಿ ರಚಿಸಿದ್ದೇವೆ ಇಂದು ಇಲ್ಲವೆ ನಾಳೆ ಸಮಿತಿ ವರದಿ ನೀಡಲಿದೆ ಎಂದರು. ಈ ಸಮಿತಿ ವರದಿ ಬಂದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪಟಾಕಿ ಹೊಡೆಯುವುದನ್ನು ನಿಷೇಧಿಸಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜಾಸ್ಥಾನ ಸೇರಿದಂತೆ ಕೆಲ ರಾಜ್ಯಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲು ಕೈಗೊಂಡಿರುವ ತೀರ್ಮಾನವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲೂ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.