ಪಟ್ಟೀಶ್ವರ

0
160
Tap to know MORE!

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ದೇವಸ್ಥಾನಗಳ ಪಾತ್ರ ಹಿರಿದು.ಇವತ್ತಿನ ನನ್ನ ಈ ಪ್ರವಾಸ ಕಥನದ ಸಂಚಿಕೆಯಲ್ಲಿ ತಮಿಳುನಾಡಿನ ಪೇರೂರಿನಲ್ಲಿರುವ “ಪಟ್ಟೀಶ್ವರ” ದೇವಳದ ಕಥೆಯ ಕಿರು ಪರಿಚಯದ ಉಲ್ಲೇಖನ. ಈ ಹೆಸರಿಗೂ ಹಿನ್ನೆಲೆ ಇಂತಿದೆ. ಹಳೇ ತಮಿಳಿನಲ್ಲಿ ಪಟ್ಟಿ ಎಂದರೆ “ಆಕಳು”. ಇಲ್ಲಿ ಶಿವನು ಉದ್ಭವಿಸಿ , ಚೋಳರು ದೇವಸ್ಥಾನವನ್ನು ಕಟ್ಟುವ ಮೊದಲು ಈ ಆಕಳು ಪ್ರತಿದಿನ ತನ್ನ ಹಾಲನ್ನು ಅಭೀಷೇಕದ ರೂಪದಲ್ಲಿ ಸುರಿಯುತ್ತಿತ್ತಂತೆ. ಇದನ್ನು ಗಮನಿಸಿದ ಜನರು ತಮ್ಮ ಅರಸನಿಗೆ ತಿಳಿಸಿದಾಗ, ಈಶ್ವರನ ಗುಡಿಯನ್ನು ನಿರ್ಮಿಸಲು ಆಜ್ಞೆ ನೀಡುತ್ತಾನೆ.ಈ ಮೂಲಕ “ಪಟ್ಟೀಶ್ವರ”ಯೆಂಬ ನಾಮಕರಣವಾಯಿತು. ಇಲ್ಲಿ ಮುಖ್ಯವಾಗಿ ಶಿವ, ಪಾರ್ವತಿ ಹಾಗೂ ಗಣಪತಿ, ಸುಬ್ರಹ್ಮಣ್ಯರ ಗರ್ಭಗುಡಿಯಿದ್ದು, ಗೋಪುರವನ್ನು ಒಂದೇ ಸಮಾನಾಂತರದಲ್ಲಿ ಕಟ್ಟಲಾಗಿದೆ.ಹಾಗೇಯೇ ಕಲ್ಲಿನಿಂದ ಮಾಡಿದ ಸರಪಳಿಯು ಇಲ್ಲಿನ ವಿಶೇಷ.
ಈ ಸ್ಥಳವನ್ನು ಮೊದಲು ಆದಿಪುರಂ, ಧ್ಯಾನ ದಿವಸಪುರಂ ಎಂದು ಕರೆಯುತ್ತಿದ್ದರು.ಹಾಗೇಯೇ ಪೇರೂರು ಎಂಬ ಹೆಸರು ಈಗ ಚಾಲ್ತಿಯಲ್ಲಿದೆ.
ಫಾಲ್ಗುಣಿಯ “ಪೌರ್ಣಮಿ” ದಿನದಂದು ಜಾತ್ರೆ ಹಾಗೂ ತೆಪ್ಪೋತ್ಸವ ನಡೆಯುತ್ತದೆ.ಇಲ್ಲಿ ನಟರಾಜನ ಮೂರ್ತಿಯನ್ನು ಪಾರ್ವತಿಯ ಗರ್ಭಗುಡಿಯ ನೇರಕ್ಕೆ ಪಾದವನ್ನು ಕಾಣುವ ಹಾಗೆ ಇಡಲಾಗಿದೆ. ಅಂದು ಬ್ರಹ್ಮ , ವಿಷ್ಣು, ಪಾರ್ವತಿಯು ಸೇರಿ ,ಶಿವನ ತಾಂಡವ ನೃತ್ಯವನ್ನು ವೀಕ್ಷಿಸುವ ಪ್ರತೀತಿ ಇದೆಯಂತೆ.
ಮೇಲ್ಛಾವಣಿಯಲ್ಲಿ ಮಹಾಲಿಂಗೇಶ್ವರನ ಚಿತ್ರಪಟವಿದ್ದು, ಯಾವುದೇ ಭಾಗದಲ್ಲಿ ನಿಂತರೂ ತನ್ನೆಡೆಗೆ ಲಿಂಗವು ಕಾಣುವ ಹಾಗೆ ಭಾಸವಾಗುತ್ತದೆ.ಆಗಿನ ಕರಕುಶಲತೆಯಲ್ಲೇ 3D ತಾಂತ್ರಿಕತೆಯನ್ನು ಬಳಸಲಾಗಿತ್ತು. ಹಾಗೆಯೇ ಪಾರ್ಶ್ವದಲ್ಲೇ ಸಿಂಹದ ವಿಗ್ರಹವಿದ್ದು ಅದರ ಬಾಯೊಳಗೆ ಸಣ್ಣ ಗೋಲಿಯನ್ನು ಇಡಲಾಗಿತ್ತಂತೆ .ಆ ಗೋಲಿಯನ್ನು ತಿರುವಿದಾಗ, ಅದರ 45 ಡಿಗ್ರಿಯ ನೇರಕ್ಕೆ ಮೇಲ್ಛಾವಣಿಯಲ್ಲಿರುವ ತಾವರೆಯಾಕಾರದ ಕಲ್ಲಿನಿಂದ ಮಾಡಲ್ಪಟ್ಟ ತಾವರೆಯ ಹೂವು ತಿರುಗುತ್ತಿತ್ತಂತೆ.ಇದಕ್ಕೆ ಕಾರಣ ಗೋಲಿಯನ್ನು ತಿರುಗಿಸಿದಾಗ ಉತ್ಪತ್ತಿಯಾಗುವ ತರಂಗಗಳು.ಆದರೆ ಈಗ ಕೇವಲ ವಿಗ್ರಹ ಹಾಗೂ ಆ ಕಮಲವಿದ್ದು, ಅದು ಮೊಘಲರ ದಾಳಿಗೆ ತುತ್ತಾಗಿ ಅದರ ಚಲನೆ ಕಾಣದಾಗಿದೆ.
ಈ ಊರಿನ ವೈಶಿಷ್ಟ್ಯ ಏನಂದ್ರೆ ಇಲ್ಲಿರುವ “ತಾಳೆ ಮರ”ಕ್ಕೆ 2000 ಸಾವಿರ ವರ್ಷಗಳ ಇತಿಹಾಸವಿದೆ. ಹಾಗೆಯೇ ಇಲ್ಲಿರುವ “ಹುಣಸೆ ಮರ”ದ ಬೀಜವನ್ನು ತಂದು ಬೇರೆಡೆ ಬಿತ್ತಿದರೆ ಗಿಡವೇ ಹುಟ್ಟಲ್ಲಂತೆ.ಇದರ ಪ್ರಯೋಗವನ್ನು ವಿಜ್ಞಾನಿಗಳು ಮಾಡಿ ವಿಫಲಗೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಇಲ್ಲಿಯ ಸಗಣಿಯಲ್ಲಿ ಹುಳಿವೇ ಆಗಲ್ಲ ಮತ್ತು ಈ ಪ್ರದೇಶದಲ್ಲಿ ಕೊನೆಯುಸಿರೆಳೆದವರಿಗೆ ಮರುಜನ್ಮ ಇಲ್ಲವೆನ್ನೋ ಪ್ರತೀತಿಯೂ ಇದೆ. ಇಲ್ಲಿರುವ ನದಿಗೆ ಅಸ್ಥಿಯನ್ನು ಹಾಕಿದ್ರೆ ಅದು ಕಲ್ಲಾಗಿ ಪರಿವರ್ತನೆಯಾಗುತ್ತದಂತೆ.ಹಾಗೆಯೇ‌ ಹೊರ ಪ್ರಾಂಗಣದಲ್ಲಿ ಚಂಡಿಕೇಶ್ವರಿಯ ವಿಗ್ರಹವಿದ್ದು, ದೇವಿಯ ಮೂರ್ತಿ ಕಣ್ಣು ಮುಚ್ಚಿಕೊಂಡಿದೆ ಅರ್ಥಾತ್ ಹೊರದೃಷ್ಠಿಯು ಇಲ್ಲದ ಕಾರಣ, ಆ ಗುಡಿಯ ಗೋಡೆಯನ್ನು ತಟ್ಟುವ ಮೂಲಕ ನಮ್ಮ ಇಷ್ಟಾರ್ಥಗಳನ್ನು ತಿಳಿಸುವ ಪದ್ಧತಿ ‌ಈಗಲೂ ಇದೆ.
ಹೀಗೇ ಹತ್ತು ಹಲವಾರು ವಿಶೇಷತೆಯನ್ನು ಹೊಂದಿರುವ ಈ ಸ್ಥಳಕ್ಕೆ, ಒಮ್ಮೆ ನಿಮಗೂ ಸಮಯ ಸಿಕ್ಕರೆ ಆ ಮಹಾದೇವನ ಕುಟುಂಬವನ್ನು ,ನಿಮ್ಮ ಪರಿವಾರದವರೊಂದಿಗೆ ದರ್ಶಿಸಿ ಎನ್ನುವುದರೊಂದಿಗೆ ಈ ಪ್ರಯಾಣಕ್ಕೆ ಇಲ್ಲೇ ಮಂಗಳ ಹಾಡುತ್ತೇನೆ.

-ಜಪ
ಕುಂದಾಪುರ

LEAVE A REPLY

Please enter your comment!
Please enter your name here