ಪತ್ತನಾಜೆ

0
171
Tap to know MORE!

ಪತ್ತನಾಜೆ ಶಬ್ಧದ ಅರ್ಥ

ಪತ್ತನಾಜೆಯು ಎರಡು ಶಬ‍್ಧಗಳಿಂದಾಗಿದೆ. ಪತ್ತ್+ನ್+ಅ(ಆ)ಜೆ ಇದರಲ್ಲಿ ಷಷ್ಟಿ ವಿಭಕ್ತಿ ಪ್ರತ್ಯಯವಿದ್ದು ಉತ್ತರ ಮತ್ತು ಪೂರ್ವಗಳು ಸಂಬಂಧವನ್ನು, ನಂಟನ್ನು ಬೆಸೆಯುತ್ತದೆ. ಪತ್ತ್ ಅಂದರೆ ಸಂಖ್ಯೆ ಹತ್ತು ಇದು ಬೇಷ ತಿಂಗೊಲ ಪತ್ತ್ ಪತ್ತುನಾನಿ(ಬೇಷ ತಿಂಗಳ ಹತ್ತನೆಯ ದಿನ) ಅಜೆ ಅಂದರೆ ಹೆಜ್ಜೆ ಎಂದು ಹೇಳಬಹುದು.

  • ಪತ್ತನಾಜೆ – ಬೇಷ ಪತ್ತುತ್(ಪತ್ತು ಅಂದರೆ ಹಿಡಿಯುತ್ತದು) ಪತ್ತ್‌ನೆತ ದಿನೊ.
  • ಪತ್ತನಾಜೆ – ಪತ್ತ, ಪತ್ತ್ ಎಂದರೆ ಹಿಡಿದುಕೊಳ್ಳುವುದು, ಹಿಡಿದಿಟ್ಟಿರುವುದು. ಆಜೆ ನೀರಿಗೆ ಸಂಬಂಧ ಪಟ್ಟಂತಹ ಜಲವಾಚಕ ಶಬ್ಧವಾಗಿದೆ ಇದು ಸ್ಥಳನಾಮ ಘಟಕವಾಗಿ ತುಳುನಾಡಿನಲ್ಲಿ ಅಲ್ಲಲ್ಲಿ ಬಳಕೆಯಾಗಿದೆ. ನೀರನ್ನು ಭೂಮಿ ತುಂಬಿರುವ, ನೀರನ್ನು ಹಿಡಿದಿರುವ ಎಂಬ ಅರ್ಥ ಕಲ್ಪಿಸಬಹುದು. ಕಾಲ, ಸಮಯ, ಜಾಗ, ಹವಾಮಾನದ ಗುಣಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕು. ಈ ಎರಡು ಶಬ್ದಗಳನ್ನು ಅದಲು ಬದಲು ಮಾಡಿದಾಗ ಆಜೆ ಪತ್ತ್ ಆಗಬಹುದು. ಇದು ನೀರನ್ನು ಹಿಡಿದಿಡು ಎಂಬ ಅರ್ಥವನ್ನು ಕೊಡಬಹುದು. ಸ್ಥಳನಾಮದ ನೆಲೆಯಲ್ಲಿ ಸಂವಾದಿಯಾಗಿ ಸಂಪಾಜೆ(ಸಂಪು ಆಯಿನ ಅಜೆ), ಅಜಕಲ, ಅಜ್ಜಾವರ ಸುಳ್ಯದ ಪಯಸ್ವಿನಿ ನದಿಯ ದಡದಲ್ಲಿರುವ ಊರು, ಈ ಊರನ್ನು ಪಯಸ್ವಿನಿ ನದಿ ಸುತ್ತುವರಿದು ಹರಿಯುತ್ತದೆ.
  • ಅಜಕ್ಕಲ, ಅಜಮಾರ ಈ ಸಬ‍್ಧಗಳ ಪದಾದಿಯಲ್ಲಿ “ಅಜ” ಕ್ರಿಯಾಪದಗಳಾಗಿವೆ. ಬೋಂಟೆಯಲ್ಲಿ ಹಿಡಿದ ಪ್ರಾಣಿಗಳನ್ನು ತುಂಡು, ತುಂಡು ಮಾಡಿಕೊಂಡು ಪಾಲು ಮಾಡಿಕೊಳ್ಳುವ ಜಾಗಕ್ಕೆ ಅಜಕ್ಕಲ ಎಂದು ಕರೆಯುತ್ತಾರೆ. ಇಲ್ಲಿ ಅಜ ಎಂದರೆ ತುಂಡು ಮಾಡು, ಬೇರ್ಪಡಿಸು, ಗಡಿ ಹಾಕು, ಗಡು ಮಾಡು ಎಂಬ ಪದಾರ್ಥ ಬರುತ್ತದೆ. ಅದೇ ರೀತಿ ಅಜಮಾರೊ ಮಾಂಸವನ್ನು ತುಂಡು ಮಾಡುವ ಮರ ಎಂದು ಆಗುತ್ತದೆ. ಇದನ್ನು ಆಚರಣೆಯ ನೆಲೆಯಲ್ಲಿ ಪ್ರತಿನಿಧಿಕರಿಸುವುದಾದರೆ ಪತ್ತನಾಜೆ ಎಲ್ಲ ಮುಂದೆ ಬರುವ ಕಾರ್ಯಗಳಿಗೆ ಗಡುವಾಗಿದೆ, ಪತ್ತನಾಜೆಯ ದಿನದವರೆಗೆ ಆಡಿದ ಆಟ(ಯಕ್ಷಗಾನ), ಕುಣಿತ, ಆರಾಧನಾ ನಲಿಕೆಗಳು, ದೇವರ ದರ್ಶನ ಬಲಿ ಗಳು ಮುಂದಿನ ದಿನಗಳಲ್ಲಿ ಇಲ್ಲವೆಂದು ಕಡಕ್ಕಾಗಿ ಸಂದೇಶದೊಂದಿಗೆ ಸೀಮಾ ರೇಖೆಯಂತೆ ಗಡಿ, ಗಡು ಹಾಕಿ ಬಿಡುತ್ತದೆ. ಮರುದಿನದಿಂದ ಯಾವುದೆ ವಿಶೇಷ ಕಾರ್ಯಗಳು ನಡೆಯದುದರಿಂದ ಈ ದಿನ ಅಜಕಲ ಮಾಡಿದಂತೆ ಕೊಂಡಿಯನ್ನು ತುಂಡು ಮಾಡುತ್ತದೆ.

ಪತ್ತ‍ನಾಜೆ – ಪತ್ತ್ ಎಂದರೆ ಹತ್ತು, ಆಜೆ ಎಂದರೆ ಹೆಜ್ಜೆ ಎಂದಾಗಿದೆ. ಹತ್ತು ಜನ ಸೇರಿ ನಡೆಸುವಂತಹ ಕ್ರಮವಾಗಿದೆ. ಸಂಖ್ಯಾ ಜಾನಪದದ(Number Folklore) ನೆಲೆಯಲ್ಲಿ ನೋಡುವುದಾದೆ ನಾಲ್ ಬಜ್ಜೆಯಿ ಕೊರ್ಲೆ(ನಾಲ್ಕು ಅಡಿಕೆ ಕೊಡಿ), ರಡ್ಡ್ ಉನ್ಪು ಬಳಸ್‌ಲೆ(ಎರಡು ಅಗುಳು ಊಟ ಹಾಕಿ) ಅಂದರೆ ಬರೀ ನಾಲ್ಕು ಅಡಿಕೆ ಕೊಡಿ ಅಥವಾ ಎರಡು ಅಗುಳು ಕೊಡಿ ಎಂದು ಅಲ್ಲ ಜನಪದೀಯರ ನೆಲೆಯಲ್ಲಿ ಸ್ವಲ್ಪ ಸಾಕು ಎನ್ನುವ ರೀತಿ ಅಗಿರುತ್ತದೆ. ಅದೆ ರೀತಿ ಹತ್ತು ಮನೆಯವರು, ಹತ್ತು ಜನ ಇದ್ದುಕೊಂಡು ಮಾಡುವ ಸಂಬಿಲ, ಕಾರ್ಯ ಎಂದರೂ ತಪ್ಪಗಾದು.
ಪತ್ತನಾಜೆಯಲ್ಲಿ ಪತ್ತ ಪದವು ವಿಶೇಷವಾಗಿ ಬಳಕೆಯಾಗಿದೆ. ಪತ್ತುನ ಅಂದರೆ ಹಿಡಿಯುವುದು, ಪತ್ತಂಗೆಲ್ ಅಂದರೆ ಅಂಟಿಕೊಳ್ಳುವುದು. ಮಗದೊಂದು ಕೋನದಿಂದ ಪತ್ತನಾಜೆ ಪದವನ್ನು ವಿಶ್ಲೇಷಿಸಿದಾಗ ಪೂರ್ವ ಪದವು ಹಿಡಿಯು ಎಂಬ ಅರ್ಥ ಕೊಟ್ಟರೆ ಉತ್ತರಪದ ಬೇರ್ಪಡಿಸು ಎಂಬ ಅರ್ಥದಿಂದ ಕೂಡಿದೆ. ಪತ್ತುನಲ(ಹಿಡಿಯು) ಮತ್ತು ಅಜಪುನಲ(ಬೇರ್ಪಡಿಸು) ಎಂಬ ವೀರೊಧಾಭಾಸದ ಪದ ವಿನ್ಯಾಸ ನೋಡಬಹುದು. ಪತ್ತ್‌ನೆನ್ ಬುಡುಪಾಪುನಾ, ಬೂತ ಪತ್ತುನೆನ್ ಬೂಡುಪಾಪುನ(ಹಿಡಿದ ಬೂತವನ್ನು ಬಿಡಿಸುವುದು) ಎಂಬ ಮಾತು, ಬೈಗುಳ ಪದ ತುಳು ಭಾಷೆಯಲ್ಲಿದೆ.
ಪತ್ತನಾಜೆ ಅದೇಶ ಸಂಧಿಯ ನೆಲೆಯಲ್ಲಿ ನೋಡುವುದಾದರೆ ಪದಿನಾಜಿಯು ಅಗಬಹುದೇನೊ ಎಂಬ ಊಹೆ ಮಾಡಬಹುದು. ಇದು ಕನ್ನಡ ಸಂಧಿ ಎಂಬ ಗೊಂದಲ ಸಹಜವಾದುದು. ಇಲ್ಲಿ ಸಂಧಿಯಾಗುವಾಗ ಸ್ವರದ ಮುಂದೆ ‘ತ’ ಬಂದಾಗ, ಅದೇ ವರ್ಗದ ಮೂರನೇ ವ್ಯಂಜನ ಅಂದರೆ ‘ದ’ ಆದೇಶವಾಗಿ ಬರುತ್ತವೆ. ತುಳುವರಿಗೆ ಪದಿನಾಜಿ ವಿಶೇಷವಾದ ಸಂಖ್ಯೆ, ಕುಲೆಗಳಿಗೆ ಬಡಿಸುವುದು ಎಂಬ ನೆಲೆಯಲ್ಲಿ ಪತ್ತನಾಜೆಯನ್ನು ಗುರು ಹಿರಿಯರನ್ನು ನೆನೆಸುವ ದಿನ ಎಂದು ಗ್ರಹಿಸಬಹುದು ಅದರೆ ಇಲ್ಲಿ ಪತ್ತ ಹದಿನಾರು ಎಂಬ ದಿನ ಅಗಲಿ, ಸಂಖ್ಯೆಯ ಉಲ್ಲೇಖ ಬೇಷ ತಿಂಗಳಲ್ಲಿ ಸಿಗದಕಾರಣ ಈ ಗ್ರಹಿಕೆ ಎಷ್ಟು ಸಮಂಜಸ ಎಂಬುವುದು ನಿಮ್ಮ ಗ್ರಹಿಕೆಗೆ ಬಿಟ್ಟ ವಿಚಾರ.
ಮೇಲಿನ ಚರ್ಚೆಗಳಿಂದ ತಿಳಿದುಬರುವುದೇನೆಂದರೆ ‘ಅಜ’ ಬೇರೆ ಬೇರೆ ಮಾಡುವ, ಗಡು, ಗಡಿ, ಬೇರ್ಪಡಿಸುವ ಅರ್ಥವನ್ನು ಸ್ಪಷ್ಟವಾಗಿ ನೀಡುತ್ತದೆ. ಮಗದೊಂದು ದೃಷ್ಟಿಯಲ್ಲಿ ಭೂಮಿಯಲ್ಲಿ ನೀರು ಹಿಡಿದಿಟ್ಟು ತನ್ನ ಕೊಳಗ ತುಂಬಿಸುವ ಕಾಲಕ್ಕೆ ಸಿದ್ಧವಾಯಿತು ಎಂಬ ಅರ್ಥವನ್ನು ಅಜೆ ಪತ್ತುನ ಎಂಬ ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು. ಆಚರಣೆಯ ನೆಲೆಯಿಂದಲೂ ನೋಡುವುದಾದರೆ ಈ ದಿನದ ನಂತರದ ದಿನಗಳಲ್ಲಿ ಮುಖ್ಯವಾಗಿ ಕುಣಿತ, ನರ್ತನಗಳು ಇರುವುದಿಲ್ಲ. ಅದರೆ ಮದುವೆ, ಪೂಜೆ, ಇತರ ಸಾಂಸ್ಕೃತಿಕ ಕ್ರಮಗಳು ನಡೆಯುತ್ತದೆ. ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಏರುಪೇರುಗಳನ್ನು ಸಮಾನವಾಗಿ ಶಮನಗೊಳಿಸುವುದಕ್ಕೆ ತಯಾರು ಮಾಡುತ್ತದೆ. ಕೆಲವು ತಿಂಗಳುಗಳ ಕಾಲ ದೇವರಿಗೆ, ದೈವಗಳಿಗೆ, ಅದನ್ನು ಅನುಸರಿಸುವರಿಗೆ, ಪಾಲಿಸುವವರಿಗೆ, ಚಾಕರಿಯವರಿಗೆ ವಿಶ್ರಾಂತಿ ಸಿಗುತ್ತದೆ. ಈ ದಿನಗಳಲ್ಲಿ ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯ ಚಾಕರಿ ಮಾಡಿಕೊಂಡು ಬದುಕಲು ಮಾನಸಿಕವಾಗಿ ತಯಾರು ಮಾಡುತ್ತದೆ. ನೈಜತೆ, ಭ್ರಮೆ, ಆಧ್ಯಾತ್ಮವೆಂಬ ನಂಬಿಕೆಗಳನ್ನು ಬೆರಸಿಕೊಂಡು ಭ್ರಾಮಕ ಲೋಕ ನಿರ್ಮಾಣವಾಗುತ್ತದೆ. ಸಮಯ, ದಿನ, ಕಾಲ, ಹವಾಮಾನ, ವ್ಯಕ್ತಿ, ಸಂದರ್ಭ ಮತ್ತು ಸ್ಥಳಗಳನ್ನು ಒಂದಾಗಿಸಿಕೊಂಡು ಸೀಮಾರೇಖೆಗಳನ್ನು ಸಾಂಸ್ಕೃತಿಕವಾಗಿ ನೊಡುವ ಪತ್ತನಾಜೆ ಬೇಷ ಪತ್ತುನ ಪತ್ತೆನಾನಿ(ಬೇಷ ತಿಂಗಳು ಹಿಡಿದು ಹತ್ತನೆಯ ದಿನ) ಬರುತ್ತದೆ ಅದರೆ ಸಾಂಸ್ಕೃತಿಕ ಶಬ್ಧವಾದ ಇದನ್ನು ಹತ್ತನಾವಧಿ ಎಂದು ಕನ್ನಡಕ್ಕೆ ತರ್ಜುವೆ ಮಾಡುವುದು ಸರಿಯಾದ ಕ್ರಮವಲ್ಲ.

ಕ್ರಮಚಾರಣೆ
ಪತ್ತನಾಜೆಯಂದು ತರವಾಡು ಮನೆಯಲ್ಲಿ ಕುಟುಂಬವರೆಲ್ಲ ಸೇರಿ “ಬೂತೊಗು ಕರಿಪುನ” ಎಂಬ ಬೂತ ತಂಬಿಲ ನಡೆಸುತ್ತಾರೆ ಇದು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ನಡೆಯುತ್ತದೆ. “ಕರಿದ್ ಪೊಯಿನಕುಲೆಗ್ ಕರಿಪುನಾ” (ಕಳೆದು ಹೋದವರಿಗೆ ಬಡಿಸುವುದು) ಎಂಬ ಕ್ರಮ ಸಂಜೆ ಏರು ಹೊತ್ತಿನಲ್ಲಿ ನಡೆಸುತ್ತಾರೆ, ಕುಟುಂಬದಲ್ಲಿ ಯಾರಾದರೂ ತೀರಿ ಹೋಗಿ ಕುಲೆಗಳು ಅದವರನ್ನು ಪದಿನಾಜಿ (ಹದಿನಾರು) ಸೇರಿಸುವುದು, ಅವರನ್ನು ಸೇರಿಸಿಕೊಳ್ಳುವ ಕ್ರಮ ಮಾಡುತ್ತಾರೆ. ಗುಳಿಗ ಕಟ್ಟೆ, ಬೈರವ ಕಟ್ಟೆಗಳಲ್ಲಿ ಪತ್ತನಾಜೆ ಬಡಿಸುವ “ಪತ್ತನಾಜೆ ಕರಿಪುನ” ಎಂದು ತಂಬಿಲ ಕಟ್ಟುತ್ತಾರೆ. ಗುಳಿಗ ದೈವ ಜನರಿಗೆ ಬರುವ ರೋಗಳಿಂದ ಕಾಪಾಡುತ್ತಾನೆ. ಬೈರವ ದೈವ ಜಾನುವಾರುಗಳಿಗೆ ಬರುವ ತೊಂದರೆಯನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ತುಳುವರಲ್ಲಿದೆ. ಜೊತೆಗೆ ವನದಲ್ಲಿ ಬಡಿಸುವುದು, ಜಾಗೆತೆಗ್ ಬಳಸುನ (ಜಾಗೆಯ ಶಕ್ತಿಗೆ ಬಡಿಸುವುದು) ಎಂಬ ಕ್ರಮಗಳನ್ನು ಮಾಡುತ್ತಾರೆ.

ಕೋಲ ನೇಮಗಳಿಗೆ ತೆರೆ
ತುಳುನಾಡಿನಲ್ಲಿ ನಡೆಯುವ ದೈವಾರಾಧನೆಯ ಭಾಗವಾದ ನೇಮ,ಕೋಲ, ಮೆಟ್ಟಿ, ಬಂಡಿಗಳಿಗೆ ಪತ್ತನಾಜೆಯು ಒಂದು ಅಡೆಪ್ಪು ತಡೆಯಾಗಿದೆ. ಕುಟುಂಬದ ದೈವ, ಗ್ರಾಮ ದೈವಗಳ ಪರ್ವಗಳನ್ನು ಈ ದಿನಕ್ಕಿಂತ ಮೊದಲು ಮುಗಿಸಬೇಕು ಎಂಬ ಕಟ್ಟುನಿಟ್ಟಿನ ಅಘೋಷಿತ ನಿಯಮಗಳನ್ನು ತುಳುವರು ಹಾಕಿಕೊಂಡಿರುತ್ತಾರೆ. ತುಳುನಾಡಿನ ಯಾರದೋ ಮನೆಗಳಲ್ಲಿ ಪತ್ತನಾಜೆಯು ನಂತರದ ದಿನಗಳಲ್ಲಿ ಭೂತ ಆರಾಧನೆಯ ನಡೆಯುವುದಿಲ್ಲ ಅದೇ ರೀತಿ ಭೂತ ಕಟ್ಟುವವರು ನೇಮ ನಡೆಸಿಕೊಡಲು ಒಪ್ಪಿಕೊಳ್ಳುವುದು ಇಲ್ಲ. ಪತ್ತನಾಜೆಯ ನಂತರ ಭೂತಗಳು ಘಟ್ಟ ಹತ್ತುತ್ತವೆ ಎಂಬ ಮಾತಿದೆ.

ದೇವಸ್ಥಾನಗಲ್ಲಿ ಪತ್ತನಾಜೆ
ಮೇಷ ತಿಂಗಳ ಹತ್ತನೆಯ ದಿನ ಪತ್ತನಾಜೆಯಂದು ದೇವರು ಗರ್ಭ ಗುಡಿಯ ಒಳಗೆ ಹೋಗುವುದು ಇದು ದೇವರು ವಿಶ್ರಾಂತದಲ್ಲಿರುತ್ತಾರೆ ಮತ್ತೆ ದೇವರು ಹೊರಗೆ ಬರುವುದು ದೀಪಾವಳಿಯ ಸಮಯಕ್ಕೆ ಎಂಬ ನಂಬಿಕೆಯಿದೆ. ದೇವಿಗೆ, ದೇವರಿಗೆ ಇಷ್ಟವಾದ ಆಭರಣಗಳು, ಗೆಜ್ಜೆ, ವಿಶ್ವ ಕನ್ನೆಡಿ ಅಲಂಕಾರ, ಎಲ್ಲ ಆ ದೇವಸ್ಥಾನದ ಖಜಾನೆ ಸೇರುತ್ತದೆ. ಅಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೈವಗಳು ಕೂಡ ಗುಡಿಯೊಳಗೆ ಸೇರಿಕೊಳ್ಳುತ್ತದೆ.

(ಮುಂದುವರಿಯುವುದು)

ಭರತೇಶ ಅಲಸಂಡೆಮಜಲು

LEAVE A REPLY

Please enter your comment!
Please enter your name here