ಪತ್ತನಾಜೆ

0
180
Tap to know MORE!
ಗೆಜ್ಜೆ ಬಿಚ್ಚುವುದು:
ತುಳುನಾಡಿನಾದ್ಯಂತ ಜೊತೆಗೆ ಮಲೆನಾಡಿನಲ್ಲೂ ಆರಾಧನಾ ನೆಲೆಯು ನಡೆಯುವ ಹಾಗೂ ದೇವಸ್ಥಾನಗಳಲ್ಲಿ ನಡೆಸಿಕೊಂಡು ಬರುತ್ತಿರುವ ನೂರಾರು ಯಕ್ಷಗಾನ ಮೇಳಗಳು ತಮ್ಮ ತಿರುಗಾಟದ ಆಟಗಳನ್ನು ನಿಲ್ಲಿಸುತ್ತವೆ. ಇದಕ್ಕೆ ಗೆಜ್ಜೆ ಬಿಚ್ಚುವುದು ಎಂದು ಕರೆಯುತ್ತಾರೆ. ತಿರುಗಾಟ ಮುಗಿಸುವ ಕಡೆಯ ದಿನ ಆಟ ಆಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟದ ಮುಕ್ತಾಯ ಮಾಡುತ್ತಾರೆ. ಮತ್ತೆ ಮುಂದೆ ಬರುವ ದೀಪಾವಳಿಯ ಸಂದರ್ಭದಲ್ಲಿ ದೇವಸ್ಥಾನಗಳ ಮೇಳಗಳ ಕಲಾವಿದರು ದೇವರ ಎದುರು ನಾಟ್ಯ ಪ್ರದರ್ಶನ ಮಾಡಿ ಆಟದ ಸೇವೆಯನ್ನು ಆರಂಭಿಸುತ್ತಾರೆ. ಪತ್ತನಾಜೆ ಬತ್ತುಂಡು ಜತ್ತಿ ಆಟೊ ಉಂತ್‍ಂಡ್ (ಪತ್ತನಾಜೆ ಬಂದಿತು ತಿರುಗಾಟಕ್ಕೆ ಹೊರಟ ಮೇಳ ನಿಂತಿತು) ಎಂಬ ಮಾತು ಯಕ್ಷಗಾನ ಬಗೆಗೆ ಚಾಲ್ತಿಯಲ್ಲಿದೆ.
ಮಳೆಗಾಲಕ್ಕೆ ನಾಂದಿ
“ಪತ್ತನಾಜೆತಾನಿ ಪತ್ತ್ ಪನಿ ಬರ್ಸೊ ಬರೊಡು” ಪತ್ತನಾಜೆ ಹತ್ತು ಹನಿ ಮಳೆ ಬರಬೇಕು ಎಂಬ ನಂಬಿಕೆ ಇದೆ. ಪತ್ತನಾಜೆಯ ಮೊದಲು ಬಿಸುವಿನ ಸಮಯವಾಗುವಂತೆ ಅಲ್ಲಲ್ಲಿ ಜಾತ್ರೆ ಕೋಲ ನಡೆಯುತ್ತವೆ. ಅ ಊರಿನವರ ನಂಬಿಕೆಯ ಕಟ್ಟಿನಂತೆ ತಮ್ಮ ಗ್ರಾಮ, ಸೀಮೆ ಜಾತ್ರೆ, ಕೋಲದಂದು ನಾಲ್ಕು ಹನಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ತಂಪುಗಾಳಿ, ಸಿಡಿಲು, ಮಿಂಚುಗಳ ಮಳೆ ಬರುತ್ತದೆ. ಇದು ಒಂದು ದೃಢವಾದ ನಂಬಿಕೆ ಮೇಲೆ ನಿಂತಿದೆ.
ಪರಿಣಾಮ :
ಭೂತಾರಾಧನೆಯ ಭೂತ ಕಟ್ಟುವ ಜನಾಂಗಗಳಾದ, ಅಜಲ, ಪರವ, ಪಂಬದ, ನಲಿಕೆಯವರಿಗೆ ಪತ್ತನಾಜೆಯವರೆಗೆ ಪಾತ್ರಿಗಳಾಗಿರುತ್ತರೆ. ನಂತರ ದಿನಗಳಲ್ಲಿ ಅವರ ಕೌಶಲ್ಯಕ್ಕೆ ತಕ್ಕಂತಹ ಅಥವಾ ಪರ್ಯಾಯ ಕೆಲಸಗಳನ್ನು ಅವರು ಆರಿಸಿಕೊಳ್ಳಬೇಕಾಗುತ್ತದೆ. ಅವರಂತೆ ಇಲ್ಲಿನ ಯಕ್ಷಗಾನ ಪಾತ್ರಧಾರಿಗಳು, ಜಾತ್ರೆಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳೆಲ್ಲ ಉದ್ಯೋಗದ ಇತರ ಆಯ್ಕೆಗಳನ್ನು ನೋಡಿಕೊಳ್ಳಬೇಕು. ಹೀಗೆ ಪತ್ತನಾಜೆ ಸಾಮಾಜಿಕ ಕಟ್ಟಲೆ, ಧಾರ್ಮಿಕ ವಿಧಿಗಳ ಜೊತೆ ಜೊತೆಗೆ ತುಳುವರ ಆರ್ಥಿಕತೆ, ಉದ್ಯೋಗದ ಮೇಲು ಪರಿಣಾಮವನ್ನು ಉಂಟುಮಾಡುತ್ತದೆ. ಪರೋಕ್ಷವಾಗಿ ಅವಲಂಬಿತವಾಗಿರುವ ಪೆಂಡಾಲ್ ಹಾಕುವವರು, ಧ್ವನಿ, ಬೆಳಕು, ಚೆಂಡೆ-ವಾದ್ಯ  ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ.
ಪತ್ತನಾಜೆಯ ಬಗೆಗಿನ ಮಾತುಗಳು ಮತ್ತು ನಂಬಿಕೆಗಳು.
*`ತುಳುನಾಡಿನಲ್ಲಿ   ಎರ್ಮಾಳು ಜಪ್ಪು ಖಂಡೇವು ಅಡೆಪು’ ಎಂಬ ಗಾದೆಯಂತೆ ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ಆ ಸೀಮೆಯ ಉತ್ಸವಗಳು ಆರಂಭಗೊಂಡು ಮೇ ತಿಂಗಳಿನ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವುನಲ್ಲಿ  ನಡೆಯುವ ಮೀನು ಹಿಡಿಯುವ ಖಂಡೇವು ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ. ಒದರಂತೆ ಅಲಲ್ಲಿ ಆ ಸೀಮೆ ಅಥವಾ ಊರಿನ ಕಟ್ಟು ಕಟ್ಟಲೆಗಳ ಜನಪದ ಮಾತು ಗಾದೆಗಳಿವೆ. ಈ ಆಡು ಮಾತು ಪ್ರಾದೇಶಿಕವಾಗಿ ಚಾಲ್ತಿಯಲ್ಲಿದೆ.
*ಪತ್ತನಾಜೆ ಬತ್ತ್Oಡ್  ಜತ್ತಿ ಆಟೊ ಉಂತ್Oಡ್ (ಪತ್ತನಾಜ್ ಬಂದಿತು (ತಿರುಗಾಟಕ್ಕೆ) ಹೊರಟ ಆಟ (ಯಕ್ಷಗಾನ ಮೇಳ) ನಿಂತಿತು
* ಪತ್ತನಾಜೆದಾನಿ ಪತ್ತ್ ಪನಿ ಬರ್ಸೊ ಬರೋಡು ಇಜ್ಜಂಡ್ ಊರುಗು ಗಂಡಾಂತರ ಉಂಡು’ ಎಂಬುದು ತುಳುವರ ನಂಬಿಕೆಯಾಗಿತ್ತು.
*ಮನೆಯಿಂದ ಯಾರಾದರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರೆ ಅವರು ಪತ್ತನಾಜೆಯ ದಿನ ಮನೆಗೆ ಬರುತ್ತಾರೆ ಎಂಬ ಮಾತು ತುಳುವನಾಡಿನಲ್ಲಿ ಚಾಲ್ತಿಯಲ್ಲಿದೆ. ದೂರದುರಿಗೆ ಹೋಗುವವರನ್ನು ನೀನು ಯಾವಾಗ ಮತ್ತೆ ಬರುತ್ತೀಯಾ? ಎಂದು ಕೇಳಿದರೆ ಪತ್ತನಾಜೆಗೆ ಬರುತ್ತೇನೆ ಎನ್ನುವ ಪ್ರತ್ಯುತ್ತರ ಸಾಮಾನ್ಯವಾಗಿರುತಿತ್ತು.
*ಪತ್ತನಾಜೆಯಂದು ದೇವರು ಮನೆಗೆ ಬಂದು ಮನೆಯ ಹಿರಿ ಮಗನನ್ನು ತೂಗುತ್ತಾರೆ ಅಂತೆ, ಅವರು ತೂಗುವಾಗ ಹೆಚ್ಚು ತೂಕ ಇರಲು ಅವನಿಗೆ ಹಲಸಿನ ಗುಜ್ಜೆಯ ಪದಾರ್ಥ ಮಾಡಿಕೊಡಬೇಕಂತೆ.
*ಪತ್ತನಾಜೆ ಬರುವ ಹೊತ್ತಿಗೆ ಜೇನು ನೋಣಗಳು ಜೇನು ತುಪ್ಪ ಖಾಲಿ ಮಾಡುತ್ತವೆ ಅದಕ್ಕಾಗಿ ಪತ್ತನಾಜೆ ಮೊದಲೆ ಜೇನು ತೆಗೆಯಬೇಕು.
*ಪತ್ತನಾಜೆಯ ನಂತರ ಯಕ್ಷಗಾನ ಆಟ ಆಡ ಇಲ್ಲ, ಆಡಲೇ ಬೇಕೆಂದಾದರೆ ಒಂದು ಕಾಲಿಗೆ ಗೆಜ್ಜೆ ಕಟ್ಟಬೇಕಂತೆ ಎಂಬ ಜನಪದೀಯ ನಂಬಿಕೆಯಿದೆ.
ಪತ್ತನಾಜೆ ಒಂದು ಪ್ರಕೃತಿಯನ್ನು ಆರಾಧಿಸುವ ಒಂದು ಬಗೆಯ ವಿಶೇಷ ದಿನ. ಪ್ರಕೃತಿಯೊಂದಿಗೆ ಲೀನವಾಗಿರುವ ದೈವ, ದೇವರು, ಗುರುಕಾರ್ಣವೆರುಗಳ ಅರಾಧನೆ  ಮಾಡಿಕೊಂಡು ಬರುತ್ತಿರುವುದು ಮೆಚ್ಚುವಂತಹುದು.  ದೇವರ ಬಲಿ, ಭೂತ ಕೋಲ, ತುಳುನಾಡಿನ ಜನಪದ ನಲಿಕೆ, ಯಕ್ಷಗಾನಗಳಿಗೆಲ್ಲ ವಿರಾಮ ನೀಡುವ ದಿನವಾಗಿದೆ. ಇದು ಬರಿ ದಿನದ ಗಡುವಾಗದೆ ಮಾನಸಿಕ, ದೈಹಿಕವಾಗಿ ತುಳುವ ವ್ಯಕ್ತಿಯೊಬ್ಬನನ್ನು ಋತುಮಾನಕ್ಕೆ ಅನುಸಾರವಾಗಿ ಮುಂದೆ ಬರುವ ಕೃಷಿಕೆಲಸಗಳಿಗೆ ಒಗ್ಗಿಸಿಕೊಳ್ಳುವ ವಿಶೇಷ ಆಚರಣೆ. ಈ ಮಳೆ, ನೆಲ, ಕಾಲದ ಆಚರಣೆಯನ್ನು ಉಳಿಸಿ ಬೆಳೆಸುವುದು ಈ ಭಾಗದ ಪ್ರತಿಯೊಬ್ಬನ ಕರ್ತವ್ಯವಾಗಿದೆ.
ಭರತೇಶ ಅಲಸಂಡೆಮಜಲು

LEAVE A REPLY

Please enter your comment!
Please enter your name here