ಪದವಿ ತರಗತಿಯಲ್ಲಿ ಭಾಷಾಬೋಧನೆ – ಔಚಿತ್ಯ ವಿವೇಚನೆ

0
233
Tap to know MORE!

ಪದವಿ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಯು ಜೀವನವನ್ನು ಸ್ವಚ್ಛವಾಗಿ ಗ್ರಹಿಸಬಲ್ಲ ಹಂತಕ್ಕೆ ಬರುತ್ತಾನೆ. ಮುಂದಿನ ವೃತ್ತಿಪರ ಕೋರ್ಸಿಗೆ, ಸ್ನಾತಕೋತ್ತರ ಪದವಿಗೆ, ಆಡಳಿತಾತ್ಮಕ ಪರೀಕ್ಷೆಗೆ ಅಥವಾ ವೃತ್ತಿ – ವ್ಯಾಪಾರಕ್ಕೆ ತನ್ನನ್ನು ತೆರೆದುಕೊಳ್ಳುವ ಹಂತ. ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎಂ., ಬಿ.ಸಿ.ಎ., ಮುಂತಾದ ವಿಷಯಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗೆ ಎರಡು ಭಾಷಾ ಪಠ್ಯವಿದೆ. ಇಲ್ಲಿ ಇಂಗ್ಲೀಷ್ ಕಡ್ಡಾಯ, ಇನ್ನೊಂದು ಕನ್ನಡ, ಹಿಂದಿ ಅಥವಾ ಇತರ ಯಾವುದೇ ದೇಶಿಯ ಭಾಷಾ ಪಠ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.
ಶಿಕ್ಷಣವೆಂದರೆ ವೃತ್ತಿ ಎಂಬ ಮನೋಭಾವ ಬಲಗೊಂಡಿರುವ ಇಂದಿನ ದಿನಮಾನಗಳಲ್ಲಿ ಭಾಷಾಪಠ್ಯ ಬೋಧನೆಯ ಸ್ಥಿತಿಗತಿಯ ವಿವೇಚನೆ ತೀರ ಪ್ರಸ್ತುತ. ಶಿಕ್ಷಣ ಪರಿಣತರು ಪದವಿ ವಿದ್ಯಾರ್ಥಿಗಳಿಗೆ ಭಾಷಾಪಠ್ಯವನ್ನು ಅಧ್ಯಯನ ವಿಷಯವಾಗಿ ಇಡುವುದಕ್ಕೆ  ಬಹುದೊಡ್ಡ ಆಶಯವಿದೆ. ಪರೀಕ್ಷೆಯ ಕೊಠಡಿಯ ಆಚೆಗೂ ವಿದ್ಯಾರ್ಥಿಯ ಬುದ್ಧಿ-ಭಾವ ಸಮೃದ್ಧಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿದೆ. ಹಾಗಾದರೆ ಈ ಆಶಯ ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತಿವೆ?
ಸಾಧಾರಣವಾಗಿ ನಮ್ಮ ವಿದ್ಯಾರ್ಥಿ ಹಾಗೂ ಹೆತ್ತವರ ವಲಯದಲ್ಲಿ ಲ್ಯಾಂಗ್ವೇಜ್ ಕ್ಲಾಸ್ ಎಂದರೆ ಒಂದು ಬಗೆಯ ತಾತ್ಸಾರ, ನಮ್ಮ ಪ್ರಮುಖ ಅಧ್ಯಯನದ ವ್ಯಾಪ್ತಿಗೆ ಸೇರುವುದಿಲ್ಲ ಎಂಬ ಭಾವನೆ. ಪರೀಕ್ಷೆ ಸಮಯದಲ್ಲಿ ಒಂದಿಷ್ಟು ಓದಿ ಪಾಸಾಗಿಬಿಡಬಹುದು ಎಂಬ ನಿರ್ಲಕ್ಷ್ಯ ಧೋರಣೆ. ಓದಲು – ಬರೆಯಲು ಬರುತ್ತದೆ ಇನ್ನೇನು ಬೇಕು ಎಂಬ ಅಸಡ್ಡೆ. ಈ ರೀತಿ ಮನೋಭಾವ ಮೂಡಲು ನಮ್ಮ ಶಿಕ್ಷಣ ವ್ಯವಸ್ಥೆ ಮೊದಲ ಕಾರಣವಾದರೆ ಭಾಷಾಬೋಧಕನ ಮಿತಿ ಎರಡನೆ ಕಾರಣ.
ಪದವಿಯಲ್ಲಿ ಭಾಷಾ ತರಗತಿ ಎಂಬುದಕ್ಕಿಂತಲೂ ಸಾಹಿತ್ಯ ತರಗತಿ ಎಂಬುದು ಹೆಚ್ಚು ಸೂಕ್ತ. ಒಂದು ವೇಳೆ ಭಾಷೆ ಎಂದು ಕರೆದರೂ ಇಲ್ಲ ಭಾಷೆ ಎಂದರೆ ಸಂವಹನ ಎಂಬ ಸೀಮಿತ ಅರ್ಥವಲ್ಲ. ಭಾಷೆ ಎಂಬುದಕ್ಕೆ ಸ್ವಭಾವ, ಗುಣ, ಚಾರಿತ್ರ್ಯ ಎಂಬ ಅರ್ಥಗ್ರಹಿಕೆಯೂ ಇದೆ. ಕತೆ, ಕಾದಂಬರಿ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬರುವ ಪಾತ್ರÀ, ಘಟನಾವಳಿಗಳು, ವರ್ತನೆ, ಪರಿಣಾಮಗಳು ಮನಸ್ಸಿಗೆ ಸಾತ್ವಿಕ ರಂಜನೆಯನ್ನು ನೀಡುವುದರೊಂದಿಗೆ ಓದುಗನ ಕಲ್ಪನಾ ಸಾಮಥ್ರ್ಯವನ್ನು ಬೆಳೆಸುವ, ತನ್ನ ಸ್ವಭಾವವನ್ನು ಅವಲೋಕನ ಮಾಡುವ, ತನ್ನಲ್ಲೂ ಸಾಹಿತ್ಯ ರಚನಾ ಗುಣವನ್ನು ರೂಪಿಸುವ ಶಕ್ತಿ ಹೊಂದಿವೆ. ಬರೆಯುವ, ಮಾತನಾಡುವ ಭಾಷೆಯೂ ಸಮೃದ್ಧವಾಗುತ್ತದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ಇಂದಿನ ದಿನಗಳಲ್ಲಿ ಋಣಾತ್ಮಕವೂ, ಏಕಮುಖವೂ ಆದ ರಂಜನೆಗಳು ಉಂಟು ಮಾಡುತ್ತಿರುವ ವಿಕಾರಗಳು ನಮ್ಮೆದುರು ರಾರಾಜಿಸುತ್ತಿವೆ.
ಬದುಕೆಂದರೆ ಸಮಸ್ಯೆ – ಸವಾಲುಗಳೇ ಇಲ್ಲದ ಸರಳ ರೇಖಾತ್ಮಕವಾದುದು ಎಂದೇ ಹೊಸ ತಲೆಮಾರು ಭಾವಿಸಿದಂತಿದೆ. ಚಿಕ್ಕ ಪುಟ್ಟ ಸೋಲು-ಅವಮಾನಗಳಿಗೂ ಮಾನಸಿಕವಾಗಿ ಕುಗ್ಗಿಹೋಗುವ ಎಳೆಯರನ್ನು ಕಾಣುತ್ತೇವೆ. ಹಾಗಾದರೆ ಇವರಿಗೆ ನಿದರ್ಶನಗಳೊಂದಿಗೆ ತಿಳುವಳಿಕೆ ನೀಡುವುದಕ್ಕೆ ಸಾಹಿತ್ಯ ಪಠ್ಯವಲ್ಲದೆ ಬೇರೆಲ್ಲಿ ಸಾಧ್ಯ? ಸಾಧಕನೋರ್ವನ ಸಾಧನೆ ಹಾಗೂ ಆತನಿಗೆ ಸಿಕ್ಕಿದ ಕೀರ್ತಿ ಗೌರವ ನಮಗೆ ಮುಖ್ಯವಾಗುವುದಿದೆ. ಆದರೆ ಆತನ ಸಾಧನೆಯ ಹೆಜ್ಜೆಗಳು ಅದೆಷ್ಟು ಜಟಿಲವಾಗಿತ್ತು ಎಂಬ ಸತ್ಯ ಆತ್ಮಚರಿತ್ರೆ ಎಂಬ ಸಾಹಿತ್ಯ ಪ್ರಕಾರದ ಅಧ್ಯಯನದಿಂದ ಗೋಚರವಾಗುತ್ತದೆ. ಜೀವನಾನುಭವ ತುಂಬಿಕೊಳ್ಳಲು ಸಾವಿರ ವರ್ಷಗಳ ಜೀವನ ನಮಗಿಲ್ಲ. ಜಗತ್ತಿನ ನಾಡಿ ನಾಡಿಗಳನ್ನು ಸಂಚರಿಸುವುದು ಅಸಾಧ್ಯ. ಆದರೆ ಸಾಹಿತ್ಯ ಕೃತಿ ನಮ್ಮ ಅನುಭವದ ದಡವನ್ನು ವಿಸ್ತರಿಸಬಹುದು.

ಬಹುಶಿಸ್ತುಗಳ ಆಗರ

ಪದವಿ ಹಂತದಲ್ಲಿ ವಿದ್ಯಾರ್ಥಿಯು ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಧ್ಯಯನ ನಿರತನಾಗಿರುತ್ತಾನೆ. ವಿಜ್ಞಾನದ ವಿದ್ಯಾರ್ಥಿಯು ವಾಣಿಜ್ಯದಿಂದ, ವಾಣಿಜ್ಯದ ವಿದ್ಯಾರ್ಥಿಯು ಕಲಾ ವಿಷಯಗಳಿಂದ ದೂರವಾಗುತ್ತಾನೆ. ಒಂದು ವಿಷಯದಲ್ಲಿ ಹಿಡಿತ ಸಾಧಿಸಲು ಈ ಅಧ್ಯಯನ ವಿಭಾಗ ಅಗತ್ಯ. ಆದರೆ ತನ್ನ ಬದುಕಿನ ಭಾಗವಾಗಿರುವ ಇತರ ಅಂಶಗಳ ತಿಳುವಳಿಕೆಯಿಂದ ವಂಚಿತನಾಗುವುದಿದೆ. ಇಂತಹ ಅಪಾಯದಿಂದ ಭಾಷಾಪಠ್ಯ ವಿದ್ಯಾರ್ಥಿಯನ್ನು ಪಾರು ಮಾಡಬಲ್ಲದು. ಉದಾಹರಣೆಗೆ ಚಿತ್ತಾಲರ ಛೇದ ಕಾದಂಬರಿಯಲ್ಲಿ ಮನಶಾಸ್ತ್ರದ ಸೂಕ್ಷ್ಮಗಳನ್ನು, ಕಾರಂತ ಚೋಮನದುಡಿ ಕಾದಂಬರಿಯು ಸಮಾಜಶಾಸ್ತ್ರದ ಆಯಾಮಗಳನ್ನು, ಕಾರ್ನಾಡರ ತುಘಲಕ್ ನಾಟಕ ಚರಿತ್ರೆ – ಮನಶಾಸ್ತ್ರಗಳ ಸಂಗತಿಯನ್ನು, ಬಿ.ಜಿ.ಎಲ್. ಸ್ವಾಮಿಯವರು ಹಸಿರು ಹೊನ್ನು ಸಸ್ಯವಿಜ್ಞಾನದ ಸ್ವಾರಸ್ಯವನ್ನು ಒದಗಿಸಬಲ್ಲದು. ವಿವಿಧ ಜ್ಞಾನಶಾಖೆಗಳ ಕೊಂಡಿಯಾಗಿ ಭಾಷಾಪಠ್ಯ ಕೆಲಸ ಮಾಡುತ್ತದೆ.

ವಿದ್ಯೆಗೆ ವಿವೇಕದ ಸ್ಪರ್ಶ

ಸತ್ಪ್ರಜೆಗಳನ್ನೆ ರೂಪಿಸಬೇಕಾದ, ವಿವೇಕ ಮೂಡಿಸಬೇಕಾದ ಶಿಕ್ಷಣವು ವ್ಯವಸ್ಥೆ ಕೇವಲ ವೃತ್ತಿಗೆ ತಯಾರು ಮಾಡುವ ಯಂತ್ರಗಳನ್ನು ನಿರ್ಮಿಸುವ ಪರಿಪಾಠ ಬೆಳೆದಿರುವುದರಿಂದಲೇ ಸಮಾಜದ್ರೋಹಿ ಕೆಲಸಗಳನ್ನು ವಿದ್ಯಾವಂತರೂ ಕಾಣಿಸಿಕೊಳ್ಳುತ್ತಿದ್ದಾರೆ. ಕಿಡ್ನಿ ಕತ್ತರಿಸುವ ದಂಧೆಯಲ್ಲಿ ತೊಡಗುವ ವೈದ್ಯ , ಬಾಂಬು ಇಡುವ ಇಂಜಿನಿಯರ್, ದೌರ್ಜನ್ಯ ಮಾಡುವ ಶಿಕ್ಷಕರು ಅಲ್ಲಲ್ಲಿ ಸುದ್ದಿಯಾಗುವುದಿದೆ. ಭಾಷಾ – ಸಾಹಿತ್ಯವನ್ನು ಗಂಭೀರವಾಗಿ ಓದಿದವ ಹಾದಿ ತಪ್ಪುವುದು ಅಸಾಧ್ಯ.
ನಾವಿಂದು ಸುಶಿಕ್ಷಿತ ಆಧುನಿಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಆದರೆ ನಮ್ಮ ಮೌಢ್ಯತೆಯ ಹಸಿವು ಇನ್ನೂ ನೀಗಿಲ್ಲ. ಭಕ್ತಿ – ನಂಬಿಕೆಗಿಂತ ದುಬಾರಿ ಆಚರಣೆ – ಆಲಯ ನಿರ್ಮಾಣವೇ ಮೇಳೈಸುತ್ತಿವೆ. ಜಾತಿ ಮತ್ತೆ ಸಾಂಸ್ಥಿಕ ಶಕ್ತಿ ಪಡೆದು ಮರುಜೀವಗೊಳ್ಳುತ್ತಿವೆ. ಇಂತಹ ಸಂಗತಿಗಳನ್ನು ಮೀರಿನಿಲ್ಲಲು ಕನ್ನಡ ಸಾಹಿತ್ಯದ ವಚನ ಅಧ್ಯಯನ ಭದ್ರ ಮೆಟ್ಟಿಲುಗಳಂತಿವೆ.
ಸುತ್ತಲಿನ ಸಮಾಜವನ್ನು ಅರಿವಿನ ಕಣ್ಣಿನಿಂದ, ಕರುಣೆಯ ದೃಷ್ಟಿಯಿಂದ ನೋಡಲು ಭಾಷಾ – ಸಾಹಿತ್ಯದ ಅಧ್ಯಯನ ಬಹುದೊಡ್ಡ ಕೊಡುಗೆ ನೀಡಬಹುದು. ಕೇವಲ ಕಾನೂನುಗಳಿಂದ – ಶಿಕ್ಷೆಯಿಂದ ಸಮಾಜವನ್ನು ಸ್ವಾಸ್ಥಗೊಳಿಸುತ್ತೇವೆ ಎಂಬುದು ಭ್ರಮೆಯಷ್ಟೆ. ಭವಿಷ್ಯದಲ್ಲಿ ವಿದ್ಯಾರ್ಥಿಯು ಯಾವುದೇ ವೃತ್ತಿಯಲ್ಲಿ ತೊಡಗಿಕೊಂಡರೂ ತರಗತಿಯಲ್ಲಿ ರೂಢಿಸಿದ ಸಾಹಿತ್ಯಾಭಿರುಚಿಯನ್ನು ಮುಂದುವರಿಸಿದರೆ ವೃತ್ತಿಯ ಏಕತಾನತೆಯಿಂದ ಬಿಡುಗಡೆಗೊಳ್ಳಬಹುದು. ಒಂದು ವೇಳೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾದರೆ ಅದು ಆತನಿಗೆ ಅಪಾರ ಆನಂದವನ್ನು, ಸಾಮಾಜಿಕ ಗೌರವವನ್ನು ತರಬಲ್ಲುದು. ಪಿ. ಲಂಕೇಶ್‍ರನ್ನು ಇಂಗ್ಲೀಷ್ ಪ್ರಾಧ್ಯಾಪಕ ಎಂಬ ಕಾರಣಕ್ಕಾಗಿ ನಾವು ಅವರನ್ನು ಗುರುತಿಸುತ್ತಿಲ್ಲ. ತೇಜಸ್ವಿಯವರ ಬಗ್ಗೆ ನಮಗಿರುವ ಗೌರವ ಕ್ವಾಂಟಮ್ ಮೆಕ್ಯಾನಿಸಮ್ ಓದಿದವರು ಎಂಬ ಕಾರಣಕ್ಕಾಗಿ ಅಲ್ಲ. ದುಂಡಿರಾಜ್ ಬ್ಯಾಂಕ್ ಮ್ಯಾನೇಜರ್ ಎಂಬ ಕಾರಣಕ್ಕಾಗಿಯೂ ಅಲ್ಲ. ಆದುದರಿಂದ ಅಕ್ಷರ ಪೋಣಿಸುವ ಕೆಲಸ ಮೌಲ್ಯತೀತವಾದುದು.
ಆದರೆ ಇಷ್ಟೆಲ್ಲಾ ಮಹತ್ವವಿರುವ ಬೋಧನೆಗೆ ಪದವಿ ಶಿಕ್ಷಣದಲ್ಲಿ ಎಂತಹ ಸ್ಥಾನಮಾನವಿದೆ ಎಂಬುದನ್ನು ವಿವೇಚಿಸಬೇಕಾಗಿದೆ.

ಎಲ್ಲಾ ಪದವಿ ತರಗತಿಗೂ ಭಾಷಾ ಪಠ್ಯ

ಕನ್ನಡ ಭಾಷಾ ಪಠ್ಯವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಪದವಿಯ ಮೂರು ವರ್ಷಗಳಿಗೆ ಭಾಷಾ – ಸಾಹಿತ್ಯವನ್ನು ಅಧ್ಯಯನ ಮಾಡುವವರು ಕೇವಲ ಕನ್ನಡವನ್ನು ಐಚ್ಛಿಕವಾಗಿ ತೆಗೆದುಕೊಂಡ ಕಲಾವಿಭಾಗದ ವಿದ್ಯಾರ್ಥಿಗಳು ಮಾತ್ರ. ಉಳಿದಂತೆ ಬಿ.ಎ, ಬಿ.ಕಾಂ., ಬಿ.ಎಸ್ಸಿಯವರು ಎರಡು ವರ್ಷ, ಬಿ.ಬಿ.ಎಂ., ಬಿ.ಸಿ.ಎಯವರು ಒಂದು ವರ್ಷ ಓದುತ್ತಾರೆ. ಇದು ಕೂಡ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಸಮಾನವಾಗಿಲ್ಲ. ಭಾಷಾಪಠ್ಯದ ಮಹತ್ವವನ್ನು ಮನಗಂಡು ಪದವಿಯ ಎಲ್ಲಾ ಸೆಮಿಸ್ಟರ್‍ಗೆ ಭಾಷಾಪಠ್ಯ ಕಡ್ಡಾಯವಾಗಿ ಅಳವಡಿಸಬೇಕು. ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಇಂದು ಕೂಡ ವಿದ್ಯಾರ್ಥಿಯ ಶೇಕಡಾವಾರು ಅಂಕ ಲೆಕ್ಕ ಮಾಡುವಾಗ ಭಾಷಾ ಪತ್ರಿಕೆಯ ಅಂಕಗಳನ್ನು ಪರಿಗಣಿಸುತ್ತಿಲ್ಲ. ಹಾಗಾದರೆ ವಿದ್ಯಾರ್ಥಿಗೆ ಈ ಪಾಠದ ಕುರಿತು ಗಂಭೀರತೆ ಬರುವುದಾದರೂ ಹೇಗೆ?

ಭಾಷಾ ಬೋಧಕನ ಸಾಮಥ್ರ್ಯ ವೃದ್ಧಿ

ಭಾಷಾ ಪಠ್ಯದ ಮಹತ್ವ ಕಾಪಾಡುವಲ್ಲಿ ಅಧ್ಯಾಪಕರ ಪಾತ್ರ ಹಿರಿದು. ಯು.ಜಿ.ಸಿ. ನಿಗದಿ ಪಡಿಸಿದ ನೆಟ್, ಸ್ಲೆಟ್, ಪಿ.ಎಚ್.ಡಿ. ಎಂಬುದು ತಾಂತ್ರಿಕ ಮಾನದಂಡ ಮಾತ್ರ. ಅಪಾರವಾದ ಓದಿನ ಮೂಲಕ ಭಾಷಾ ಬೋಧಕ ಜ್ಞಾನ ಸಮೃದ್ಧಿಯನ್ನು, ಭಾಷಾ ಸಂಪತ್ತನ್ನು ತನ್ನದಾಗಿಸಬೇಕು. ವಿದ್ಯಾರ್ಥಿಗಳ ಮನಸ್ಸನ್ನು ಸೆಳೆಯಬಲ್ಲ ಬೋಧನಾ ಕೌಶಲ್ಯವನ್ನು ಭಾಷಾ ಬೋಧಕ ಶಿಕ್ಷಕ ಕರಗತಮಾಡಿಕೊಳ್ಳಬೇಕು. ವಿವಿಧ ಕಾವ್ಯಭಾಗ, ನಾಟಕ ಪ್ರಕಾರಗಳ ಪಾಠವಾಗುವಾಗ ಕನಿಷ್ಠ ಕಲಾ ಪ್ರತಿಭೆಯನ್ನಾದರೂ ಹೊಂದಿರಬೇಕು.
ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ತನ್ನ ಬೋಧನೆಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಭಾಷಾ ಹಿಂದೆ ಉಳಿಯಬಾರದು. ಒಟ್ಟಿನಲ್ಲಿ ಭಾಷಾ ಬೋಧನೆಯೆಂಬುದು ಒಂದು ಬಗೆಯ ಕಲೆಗಾರಿಕೆ. ಇವೆಲ್ಲವೂ ಸಾಧ್ಯವಾದರೆ ತನ್ನ ಹಾಗೂ ಭಾಷಾ ವಿಷಯದ ಅಸ್ತಿತ್ವ ಉಳಿಯುತ್ತದೆ. ಇಲ್ಲದೇ ಇದ್ದರೆ ವ್ಯಕ್ತಿಗೊಂದು ವೃತ್ತಿಯಾಗಿ ಮಾತ್ರ ಉಳಿಯುತ್ತದೆ.

ಭಾಷಾಬೋಧಕ ಇಂತಹ ಸರ್ವಾಂಶಗಳನ್ನೂ ಕರಗತ ಮಾಡಿಕೊಳ್ಳಬೇಕು. ಗಟ್ಟಿಕಾಳು ಇರುವ ಸ್ವಾರಸ್ಯಕರ ವಿಷಯಗಳನ್ನು ಪಠ್ಯವಾಗಿಸಬೇಕು. ಭಾಷಾ ಪಠ್ಯದ ವ್ಯಕ್ತಿಗತ ಮತ್ತು ಸಾಮಾಜಿಕ ಅಗತ್ಯದ ಅರಿವು ಮೂಡಿ ಮೂರು ವರ್ಷವೂ ವಿದ್ಯಾರ್ಥಿ ಭಾಷಾಪಠ್ಯವನ್ನು ಅಧ್ಯಯನ ಮಾಡುವಂತಾಗಬೇಕು. -ಡಾ. ಯೋಗೀಶ ಕೈರೋಡಿ

LEAVE A REPLY

Please enter your comment!
Please enter your name here