ನ.17 ರಿಂದ ಪದವಿ ತರಗತಿ | ಕಾಲೇಜಿಗೆ ಬರಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ | ಕಾರ್ಯಪಡೆ ರಚನೆಗೆ ಸೂಚನೆ

0
189
Tap to know MORE!

ಉಡುಪಿ ಜಿಲ್ಲೆಯಲ್ಲಿ ನವೆಂಬರ್ 17ರಿಂದ ಅಂತಿಮ ವರ್ಷದ ಪದವಿ ತರಗತಿಗಳನ್ನು ಎಲ್ಲಾ ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸರಕಾರಿ /ಖಾಸಗಿ/ಅನುದಾನಿತ/ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಕೋವಿಡ್ ಮಾರ್ಗಸೂಚಿಯಡಿ ಆರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲೇಜು ಆರಂಭದ ಕನಿಷ್ಠ 3 ದಿನಗಳ ಮುಂಚೆ ಎಲ್ಲಾ ಅಧ್ಯಾಪಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಾಲೇಜುಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್‌ಶೀಲ್ಡ್ ಧರಿಸಬೇಕು. ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಆರಂಭಿಸುವಂತಿಲ್ಲ ಎಂದು ಅವರು ಸೂಚಿಸಿದರು.

ಕಾಲೇಜಿನಲ್ಲಿ ಕೋವಿಡ್ ನಿಯಂತ್ರಣ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಜಾಗೃತಿ ಮೂಡಿಸುವ ಬ್ಯಾನರ್ ಮತ್ತು ಫಲಕಗಳನ್ನು ಅಳವಡಿಸಬೇಕು. ಕೋವಿಡ್ ನಿಯಂತ್ರಣ ಕುರಿತಂತೆ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಚನ ಪಡೆಯಬೇಕು. ಪ್ರತೀ ಕಾಲೇಜಿನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆ ರಚಿಸಬೇಕು. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್ ವೈ., ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡಾ ಹಾಗೂ ಜಿಲ್ಲೆಯ ವಿವಿಧ ಸರಕಾರಿ/ಖಾಸಗಿ/ ಅನುದಾನಿತ/ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here