ಪದವಿ ಪರೀಕ್ಷೆಗಳನ್ನು ನಡೆಸಲು ಮಾರ್ಗಸೂಚಿಗಳನ್ನು ಪ್ರಕಟಿಸಿದ ಕೇಂದ್ರ ಸಚಿವಾಲಯ

0
225
Tap to know MORE!

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ, ಉಚ್ಚ ನ್ಯಾಯಾಲಯದ ಆದೇಶದನ್ವಯ, ಪರೀಕ್ಷೆಗಳನ್ನು ನಡೆಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಪ್ರಕಟಿಸಿದೆ.

ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆ, ಯಾವುದೇ ರಾಜ್ಯದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಆಗಸ್ಟ್ 28 ರಂದು ತೀರ್ಪು ನೀಡಿತ್ತು.

ಕಂಟೈನ್‌ಮೆಂಟ್ ವಲಯಗಳಿಗೆ ಪ್ರತ್ಯೇಕ ವ್ಯವಸ್ಥೆ
● ಕಂಟೈನ್‌ಮೆಂಟ್ ವಲಯಗಳ ಹೊರಗೆ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸಲು ಅವಕಾಶ
● ಕಂಟೈನ್‌ಮೆಂಟ್ ವಲಯಗಳಿಂದ ಯಾವುದೇ ಸಿಬ್ಬಂದಿ ಮತ್ತು ಪರೀಕ್ಷಕರನ್ನು ಕೇಂದ್ರಗಳಿಗೆ ಅನುಮತಿಸಲಾಗುವುದಿಲ್ಲ.
● ಈ ವಲಯದಲ್ಲಿರುವ ಶಿಕ್ಷಣ ಸಂಸ್ಥೆಗಳು, ಪರೀಕ್ಷೆಯನ್ನು ಮುಂದೂಡಿ, ಬೇರೆ ದಿನಾಂಕದಂದು ಮತ್ತು ಇತರ ವಿಧಾನಗಳ ಮೂಲಕ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ.

ರೋಗ ಲಕ್ಷಣ ಇರುವ ವಿದ್ಯಾರ್ಥಿಗಳು – ಸಿಬ್ಬಂದಿಗಳಿಗೆ
● ಪರೀಕ್ಷಾ ಕೇಂದ್ರದೊಳಗೆ ಸೋಂಕಿನ ಲಕ್ಷಣ ರಹಿತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಮಾತ್ರ ಅನುಮತಿಸಲಾಗುತ್ತದೆ.
● ಯಾವುದೇ ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದರೆ, ಅವರನ್ನು ನೇರವಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು ಮತ್ತು ಅವರನ್ನು ದೈಹಿಕವಾಗಿ ಸದೃಢ ಎಂದು ಘೋಷಿಸಿದ ಬಳಿಕ, ಮುಂದಿನ ದಿನಾಂಕದಂದು ಪರೀಕ್ಷೆಗೆ ಸಂಸ್ಥೆ ವ್ಯವಸ್ಥೆ ಮಾಡಬೇಕು.
● ಒಂದು ವೇಳೆ, ವಿದ್ಯಾರ್ಥಿಯಲ್ಲಿ ರೋಗಲಕ್ಷಣ ಇದ್ದರೂ, ಅವನು ಅಥವಾ ಅವಳು ಪರೀಕ್ಷೆಯನ್ನು ಬರೆಯುತ್ತೇವೆ ಎಂದು ಒತ್ತಾಯಿಸಿದರೆ, ಪರೀಕ್ಷಾ ಅಧಿಕಾರಿಗಳ ಸೂಕ್ತ ಅನುಮತಿಯೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ಅಭ್ಯರ್ಥಿಗೆ ಅವಕಾಶ ನೀಡಬಹುದು.

ಸ್ಯಾನಿಟೈಜ್ – ಸ್ವಚ್ಛತೆಗೆ ಆದ್ಯತೆ
● ಪ್ರತಿದಿನ ಪರೀಕ್ಷೆ ಮುಗಿದ ಬಳಿಕ ಕೊಠಡಿಗಳನ್ನು ಸ್ವಚ್ಛ ಗೊಳಿಸಬೇಕು
● ಒಬ್ಬ ವಿದ್ಯಾರ್ಥಿ ಪಾಸಿಟಿವ್ ಎಂದು ದೃಢಪಟ್ಟರೆ, ಇಡೀ ಕ್ಯಾಂಪಸ್ ಸೋಂಕು ರಹಿತ (ಸ್ಯಾನಿಟೈಜ್) ಮಾಡಬೇಕು.

ದುರ್ಬಲ ವ್ಯಕ್ತಿಗಳಿಗೆ
● ಹಿರಿಯ ಸಿಬ್ಬಂದಿಗಳು, ಗರ್ಭಿಣಿಯರು ಮತ್ತು ಅನಾರೋಗ್ಯ ಸಿಬ್ಬಂದಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿಸಬಾರದು. ಅಂತಹ ನಿಯೋಜನೆಯನ್ನು ತಪ್ಪಿಸಲು ಸಾಧ್ಯವಾಗದಿದ್ದರೆ, ಅಂತಹ ಜನರಿಗೆ ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿರದ ಕಾರ್ಯಗಳನ್ನು ನೀಡಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದ್ಯತೆ
● ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ವಿದ್ಯಾರ್ಥಿಗಳ ದಟ್ಟಣೆ ಆಗದಂತೆ ಜಾಗೃತೆ ವಹಿಸಬೇಕು.
● ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಬೇಕು.
● ಜನಸಂದಣಿಯನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯ ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು ಸಹ ಶಿಫಾರಸು ಮಾಡಲಾಗಿದೆ.
● ನೋಂದಣಿಗಾಗಿ ವಿದ್ಯಾರ್ಥಿಗಳನ್ನು ಪ್ರತ್ಯೇಕ ‘ಬ್ಯಾಚ್’‌ಗಳಲ್ಲಿ ಕರೆದೊಯ್ಯಲಾಗುತ್ತದೆ. ಅದೇ ರೀತಿ, ಪರೀಕ್ಷಾ ಕೊಠಡಿಗಳ ಒಳಗೆ ಬ್ಯಾಚ್‌ಗಳಲ್ಲಿ ಕಳುಹಿಸಲಾಗುತ್ತದೆ.
● ಪರೀಕ್ಷಾ ಕೇಂದ್ರಗಳಲ್ಲಿ ಸಮರ್ಪಕ ಸಂಖ್ಯೆಯ ಕೊಠಡಿಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇದರಿಂದಾಗಿ ಸರಿಯಾದ ಸಾಮಾಜಿಕ ಅಂತರ ಕಾಯ್ದುಕೊಂಡು, ಆಸನ ವ್ಯವಸ್ಥೆ ಮಾಡಬಹುದಾಗಿದೆ.
● ಮುಖಗವಚ ಅಥವಾ ಮಾಸ್ಕ್ ಇಲ್ಲದೆ ಯಾವುದೇ ವಿದ್ಯಾರ್ಥಿಯನ್ನೂ ಪರೀಕ್ಷಾ ಕೇಂದ್ರದೊಳಗೆ ಅನುಮತಿಸಬಾರದು. ಎಲ್ಲಾ ಸಮಯದಲ್ಲೂ ಮಾಸ್ಕ್‌ಗಳನ್ನು ಧರಿಸಬೇಕು.

ವೈಯುಕ್ತಿಕವಾಗಿ ಯಾರೊಂದಿಗೂ ಸಂಪರ್ಕಕ್ಕೆ ಬಾರದಂತೆ ಎಚ್ಚರ
● ಆನ್‌ಲೈನ್ ಅರ್ಜಿಗಳು, ಡಿಜಿಟಲ್ ಸಹಿಗಳಂತಹ ಸಂಪರ್ಕ-ಕಡಿಮೆ ಪ್ರಕ್ರಿಯೆಗಳನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ.
● ವೈಯಕ್ತಿಕವಾಗಿ ಯಾವುದೇ ವಸ್ತುಗಳನ್ನು ಇತರರೊಂದಿಗೆ ಹಂಚುವುದನ್ನು ಅನುಮತಿಸಬಾರದು.
● ಯಾವುದೇ ಪತ್ರಿಕೆಗಳಿಗೆ ಲಾಲಾರಸವನ್ನು ಬಳಸುವುದನ್ನು ಸಹ ಅನುಮತಿಸಬಾರದು.

LEAVE A REPLY

Please enter your comment!
Please enter your name here