ಬೆಂಗಳೂರು : ಹೆಲ್ಮೆಟ್ ಹಾಕದಿದ್ದರೇ ದಂಡ ಹಾಕ್ತೀರಿ, ಮಾಸ್ಕ್ ಹಾಕದಿದ್ದರೇ ದಂಡ ಹಾಕ್ತೀರಿ, ಹೀಗೆ ರಸ್ತೆ ಗುಂಡಿ ಸರಿ ಮಾಡದಿರೋ ಬಿಬಿಎಂಪಿ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬುದಾಗಿ ಸಾರ್ವಜನಿಕರು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುತ್ತಾ ಪ್ರಶ್ನಿಸುತ್ತಿದ್ದರು. ಕೊನೆಗೂ ಈಗ ಸಾರ್ವಜನಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದ ಉಂಟಾಗುವ ಅಪಘಾತಗಳಿಗೆ ಬಿಬಿಎಂಪಿ ಪರಿಹಾರ ನೀಡಲು ಮುಂದಾಗಿದೆ!
ರಾಜ್ಯ ಹೈಕೋರ್ಟ್ ಚಾಟಿ ಏಟಿನಿಂದ ಎಚ್ಚೆತ್ತುಕೊಂಡಿರುವಂತ ಬಿಬಿಎಂಪಿ, ರಸ್ತೆ ಗುಂಡಿಗಳಿಂದ ಅಪಘಾತಗೊಂಡು, ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದ್ದು, ನಗರದಲ್ಲಿ ಫುಟ್ಪಾತ್ಗಳ ಎಡವಟ್ಟಿನಿಂದ, ರಸ್ತೆ ಗುಂಡಿಗಳಿಂದ ಆಗುವ ಅಪಘಾತ, ಗಾಯಗೊಂಡವರಿಗೆ, ಸಾವಿಗೀಡಾದ ಕುಟುಂಬದವರಿಗೆ ಪರಿಹಾರ ಸಿಗಲಿದೆ.
ಇದನ್ನೂ ಓದಿ: ಸುಳ್ಳು ಅತ್ಯಾಚಾರದ ಆರೋಪ : ಯುವತಿಗೆ ₹15 ಲಕ್ಷ ದಂಡ ವಿಧಿಸಿದ ಹೈಕೋರ್ಟ್!
ಪರಿಹಾರ ಪಡೆಯುವುದು ಹೇಗೆ?
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅಪಘಾತಗೊಂಡು ಸಂತ್ರಸ್ತರಾದವರು, ಪೊಲೀಸರ ದೂರಿನ ಪ್ರತಿಯೊಂದಿಗೆ ಬಿಬಿಎಂಪಿ ವಲಯ ಆಯುಕ್ತರಿಗೆ, ಅಪಘಾತಗೊಂಡ 30 ದಿನಗಳೊಳಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೆ ಸಲ್ಲಿಸಲಾಗುವಂತ ಅರ್ಜಿಯನ್ನು ಸಾಕ್ಷಿಗಳು, ಪ್ರತ್ಯಕ್ಷ ದರ್ಶಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಆದರಿಸಿ, ಪರಿಹಾರ ನೀಡಲಾಗುತ್ತದೆ.
ಎಷ್ಟು ಪರಿಹಾರ ಸಿಗಲಿದೆ?
ನಗರದಲ್ಲಿ ಹಾಳಾದ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಬಿದ್ದು ಗಾಯ ಅಥವಾ ಸಾವು ಸಂಭವಿಸಿದ ಸಂದರ್ಭದಲ್ಲಿ ಒಂದೊಂದು ರೀತಿಯ ಪರಿಹಾರವನ್ನು ನೀಡಲು ಬಿಬಿಎಂಪಿ ನಿರ್ಧರಿಸಿದೆ.
- ರಸ್ತೆ ಗುಂಡಿಯಿಂದ ಬಿದ್ದು ಅಪಘಾತಗೊಂಡರೇ ಗರಿಷ್ಠ ₹15 ಸಾವಿರ
- ಮೃತಪಟ್ಟರೆ ₹3 ಲಕ್ಷದವರೆಗೆ ಪರಿಹಾರ
- ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದರೇ ₹5 ಸಾವಿರ
- ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ₹10 ಸಾವಿರ ಪರಿಹಾರ
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ರಸ್ತೆ ಗುಂಡಿಗಳಿಂದಾಗಿ ಅಪಘಾತಗೊಂಡು ಸಂತ್ರಸ್ತರಾದವರು ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಒಂದು ವೇಳೆ 30 ದಿನಗಳ ಕಾಲಾವಕಾಶದೊಳಗೆ ನೀವು ಅರ್ಜಿ ಸಲ್ಲಿಸದೇ ಹೋದಲ್ಲಿ, ನಿಮ್ಮ ಅರ್ಜಿಯು ತಿರಸ್ಕಾರವಾಗಲಿದೆ. ಅಲ್ಲದೇ ರಸ್ತೆ ಗುಣಮಟ್ಟದ ಬಗ್ಗೆ ಎಚ್ಚರಿಕೆಯ ನಾಮಫಲಕ ಹಾಕಿದ್ದೂ, ನೀವು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ಅಪಘಾತಕ್ಕೆ ಈಡಾಗಿ, ಸಂತ್ರಸ್ತರಾದ್ರೂ ಪರಿಹಾರದ ಹಣ ಸಿಗೋದಿಲ್ಲ.