ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ, ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುತ್ತವೆ ಎಂಬ ನಿರ್ಧಾರದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೃಢವಾಗಿದೆ.
“ಪರೀಕ್ಷೆ ಇಲ್ಲದೆ, ವಿಶ್ವವಿದ್ಯಾಲಯಗಳು ಪದವಿ ಹೇಗೆ ನೀಡಲು ಸಾಧ್ಯ ಆದ್ದರಿಂದ ಯುಜಿಸಿ ನಿಲುವು ತುಂಬಾ ಸ್ಪಷ್ಟವಾಗಿದೆ, ವಿಶ್ವವಿದ್ಯಾನಿಲಯಗಳು ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗುತ್ತದೆ, ಅವರು ಅದನ್ನು ಆನ್ಲೈನ್ ಮೋಡ್, ಆಫ್ಲೈನ್ ಅಥವಾ ಬ್ಲೆಂಡೆಡ್ ಮೋಡ್ ಮೂಲಕ ಮಾಡುವುದು ಅವರಿಗೆ ಬಿಟ್ಟದ್ದು” ಎಂದು ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟ್ವರ್ಧನ್ ಅವರು ತಿಳಿಸಿದರು.
ಇದನ್ನೂ ಓದಿ : ಪದವಿ ಪರೀಕ್ಷೆಗೆ ಕೇಂದ್ರದ ಗ್ರೀನ್ ಸಿಗ್ನಲ್
ಜುಲೈ 6 ರಂದು, ಯುಜಿಸಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಿತ್ತು, ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮಾಡುವಂತೆ ಮಾರ್ಗಸೂಚಿ ನಿರ್ದೇಶಿಸುತ್ತದೆ. ಈ ನಿರ್ದೇಶನವು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ವಿರೋಧಕ್ಕೆ ಕಾರಣವಾಗಿದೆ, ಮತ್ತು ಈ ವಾರದ ಆರಂಭದಲ್ಲಿ ಇದನ್ನು ಸುಪ್ರೀಂ ಕೋರ್ಟ್ನಲ್ಲಿಯೂ ಪ್ರಶ್ನಿಸಲಾಯಿತು.
ಕೋವಿಡ್-19 ಸಾಂಕ್ರಾಮಿಕದ ಭೀತಿಯಿಂದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಪ್ರಶ್ನಿಸಿ, ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಜುಲೈ 27 ರಂದು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಸೋಮವಾರ ಈ ಮನವಿಯನ್ನು ಆಲಿಸಲಿದೆ.