ಇತ್ತೀಚೆಗೆ ರಾಜಕಾರಣಿಗಳು, ಸಿನಿಮಾ ರಂಗದವರಿಗೆಲ್ಲಾ ಕೊರೋನಾ ಸೋಂಕು ವರದಿಯಾಗುತ್ತಿರುವುದರ ಮಧ್ಯೆ ಇಂದು ಪುತ್ತಿಗೆ ಶ್ರೀಗಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೊರೋನಾ ಮುಂದೆ ಎಲ್ಲರೂ ಸಮಾನರೆಂಬಂತೆ, ಇದೀಗ ಮಠಾಧೀಶರನ್ನೂ ಈ ಸೋಂಕು ಬಿಟ್ಟಿಲ್ಲ. ಉಡುಪಿಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳಿಗೆ ಕೊರೊನಾ ಸೋಂಕು ತಗುಲಿರುವುದನ್ನು ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಸ್ವಾಮೀಜಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಿದೆ.
ಬೆಂಗಳೂರಿಗೆ ಹೋಗಿ ಬಂದಿದ್ದ ಶ್ರೀಗಳು
ಪುತ್ತಿಗೆ ಶ್ರೀಗಳು 15 ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಆಗಮಿಸಿದ ಶ್ರೀಗಳಿಗೆ, ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅವರ ವರದಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.