ಮಂಗಳೂರು : ವಿವಿ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಎಂ.ಕಾಂ ಪಠ್ಯಪುಸ್ತಕ ಲೋಕಾರ್ಪಣೆ

0
157
Tap to know MORE!

ಮಂಗಳೂರು ಡಿ.23: ಬರವಣಿಗೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ನಮ್ಮಲ್ಲಿ ಪರಿಪಕ್ವತೆ, ಇಚ್ಛಾಶಕ್ತಿ ಮತ್ತು ಅವಕಾಶಗಳನ್ನು ಹುಡುಕಿಕೊಳ್ಳದೆ ಅದು ಸಾಧ್ಯವಾಗುವುದಿಲ್ಲ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಎಲೈಟ್‌ ಪ್ರಿಂಟರ್ಸ್‌ ಮತ್ತು ಪಬ್ಲಿಷರ್ಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಇಬ್ರಾಹಿಂ ಬ್ಯಾರಿ ಅವರು ಸಿದ್ಧಪಡಿಸಿದ ಎಂ.ಕಾಂ ಮೊದಲ ಸೆಮಿಸ್ಟರ್‌ನ ʼಬ್ಯುಸಿನೆಸ್‌ ಸ್ಟಾಟಿಸ್ಟಿಕ್ಸ್‌ʼ ಮತ್ತು ಬಿ.ಕಾಂ ಮೊದಲ ಸೆಮಿಸ್ಟರ್‌ನ ʼಕ್ವಾಂಟಿಟೇಟಿವ್‌ ಟೆಕ್ನಿಕ್ಸ್‌ʼ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. “ವಾಣಿಜ್ಯಶಾಸ್ತ್ರದ ಕಠಿಣ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಇಂತಹ ಸ್ಥಳೀಯ ಲೇಖಕರ ಕೊಡುಗೆ ಅಭಿನಂದನೀಯ,” ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿಗೆ ಕುಲಸಚಿವರ ಭೇಟಿ | ಬೋಧಕ-ಬೋಧಕೇತರ ಸಿಬ್ಬಂದಿಗಳೊಂದಿಗೆ ಸಭೆ

ವಿವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೂ ಆಗಿರುವ ಲೇಖಕ ಪ್ರೊ. ಇಬ್ರಾಹಿಂ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾವು ಪ್ರಾಧ್ಯಾಪಕನಾಗಿ ಎದುರಿಸಿದ ಪರಿಸ್ಥಿತಿ ತಮ್ಮನ್ನು ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆಯಲು ಪ್ರೇರೇಪಿಸಿತು ಎಂದರು. ಪುಸ್ತಕ ಪರಿಚಯ ಮಾಡಿದ ರಥಬೀದಿಯ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ ರಾಜಶೇಖರ ಹೆಬ್ಬಾರ್‌, 24  ಪುಸ್ತಕಗಳನ್ನು ಬರೆದಿರುವ ಲೇಖಕರು ತಮ್ಮ ಇಳಿವಯಸ್ಸಿನಲ್ಲೂ, ಕೊವಿಡ್‌ ಸಂಕಷ್ಟದಲ್ಲಿ 4 ಪುಸ್ತಕ ಬರೆದಿರುವುದನ್ನು ಶ್ಲಾಘಿಸಿದರು.

ಅತಿಥಿಗಳಾಗಿದ್ದ ಮಾಜಿ ಶಾಸಕ ಐವಾನ್‌ ಡಿʼಸೋಜ, ಪ್ರೊ. ಇಬ್ರಾಹಿಂ ಬ್ಯಾರಿ ತಾವು ಶಿಕ್ಷಣ ಪಡೆಯುವುದರ ಜೊತೆಗೆ ಕುಟುಂಬ, ಸಮಾಜವನ್ನೂ ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ, ಎಂದರು. ಇದೇ ವೇಳೆ ಅವರು ಮಾಜಿ ಶಿಕ್ಷಣ ಸಚಿವ ದಿವಂಗತ ಬಿ ಎ ಮೊಯಿದ್ದೀನ್‌, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಅವರು ನೆನಪಿಸಿಕೊಂಡರು. ಲೇಖಕರು ಪುಸ್ತಕಗಳನ್ನು ಮೊಯಿದ್ದೀನ್‌ ಅವರಿಗೆ ಅರ್ಪಿಸಿರುವುದು ಸ್ವಾಗತಾರ್ಹ, ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಸ್‌ ಬಿ ಅಪ್ಪಾಜಿ ಗೌಡ, ವಿವಿಧ ಕಾರಣಗಳಿಂದ ಪುಸ್ತಕ ಓದುವವರ ಸಂಖ್ಯೆ ಕುಸಿದಿದೆ. ಪ್ರೊ. ಇಬ್ರಾಹಿಂ ಬ್ಯಾರಿ ಅವರು ವಯಸ್ಸು ನಮ್ಮ ಆಸಕ್ತಿ, ಹಸಿವಿಗೆ ಅಡ್ಡಿಯಾಗದು ಎಂದು ನಿರೂಪಿಸಿದ್ದಾರೆ. ತಮ್ಮ ಕುಟುಂಬ, ಸಮಾಜವನ್ನೂ ಜೀವನದುದ್ದಕ್ಕೂ ಪ್ರಭಾವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ, ಎಂದರು.

ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ, ಪಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಬ್ದುಲ್‌ ಷರೀಫ್‌, ಪಿ ಎ ಪಾಲಿಟೆಕ್ನಿಕ್‌  ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ ಪಿ ಸೂಫಿ, ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಶಂಕರನಾರಾಯಣ ಮಲ್ಲಿಪಟ್ಣ ಮೊದಲಾದವರು ಉಪಸ್ಥಿತರಿದ್ದರು. ಮಾನವ ಬಂಧುತ್ವ ವೇದಿಕೆಯ ಸಂಯೋಜಕ ಹುಸೈನ್‌ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರೆ, ಸಲ್ಮಾ ಶಬ್‌ನಮ್‌ ಧನ್ಯವಾದ ಸಮರ್ಪಿಸಿದರು.

ಮಂಗಳೂರು ವಿವಿಯಲ್ಲಿ 41 ನೇ ಸಂಸ್ಥಾಪನಾ ದಿನಾಚರಣೆ | ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ ಅಶ್ವತ್ಥ್‌ನಾರಾಯಣ್

LEAVE A REPLY

Please enter your comment!
Please enter your name here