ಪೂರ್ತಿಯಾಗೊಮ್ಮೆ ಓದುವೆಯಾ ಗೆಳೆಯಾ?

0
157
Tap to know MORE!

ಕಲ್ಪನೆಗಳಿಗೂ ಮೀರಿದ ಹುಣ್ಣಿಮೆಯ ಆ ಸುಂದರ ರಾತ್ರಿಯಲ್ಲಿ ಧರೆಗೆ ಏಕಮಾತ್ರ ಬೆಳಕಾಗಿದ್ದ ಚಂದಿರ ನಸುನಗುತ್ತಿದ್ದರೆ, ಇಳೆ ನಾಚುತ್ತಿದ್ದಳು. ತಂಗಾಳಿ ಪಿಸುಮಾತಾಡುತ್ತಿತ್ತು. ಅದೆಂತಹ ಅದ್ಭುತ ಅನುಭವ! ಯೌವ್ವನದ ಹುಮ್ಮಸ್ಸು ಅತಿರೇಕವಾಗಿ ಕಣ್ಣು ಬಿಟ್ಟು ಕಾಣುತ್ತಿದ್ದ ಕನಸುಗಳು, ನನಗೇ ಅರಿವಿಲ್ಲದಂತೆ ತುಟಿಯಂಚಿನಲ್ಲಿ ನಗು ಮೂಡಿಸಿದ್ದವು… . ಹೊತ್ತು ಮೀರಿದ್ದನ್ನೂ ಲೆಕ್ಕಿಸದೆ ತೋಟದ ತೋಡಿನ ಕಿನಾರೆಯತ್ತ ಹೆಜ್ಜೆಯಿಟ್ಟೆ. ಅಲ್ಲಿ ಕುಳಿತು ಕವನದ ಸಾಲುಗಳನ್ನು ಪೋಣಿಸುವುದು ನನಗೆ ಅಚ್ಚುಮೆಚ್ಚು. ಆ ವಾತಾವರಣದಲ್ಲಿ ಮತ್ತು ಹರಡಿತ್ತು. ಹಗಲುಗನಸಿನ ಕಲ್ಪನೆಗಳಿಂದಲೇ ಕನ್ನೆ ರಂಗೇರತೊಡಗಿತ್ತು. ಪ್ರತಿ ಹೆಜ್ಜೆಗೂ ಜಿನುಗುತ್ತಿದ್ದ ಗೆಜ್ಜೆಯ ನಾದದಲ್ಲೇನೋ ಹೊಸತನವಿತ್ತು. ಕಲ್ಪನಾಲೋಕದಲ್ಲಿ ಕಳೆದು, ಪೋಣಿಸಿದ ಸಾಲುಗಳನ್ನು ಜೋರಾಗಿ ಹೇಳತೊಡಗಿದೆ…

ಯಾರೋ ಶಿಳ್ಳೆ ಹೊಡೆದಂತಾಯಿತು. ತಿರುಗಿ ನೋಡಿದೆ. ಅಯ್ಯೋ ವಿಧಿಯೇ! ಅವರೋ ಮೂರೂ ಜನ ಕುಡಿದಿದ್ದಾರೆ. ಮತ್ತಿನ ವಾಸನೆ ಮೂಗಿಗೆ ಬಡಿಯುತ್ತಿದೆ. ನಾನೋ ಕಲ್ಲಿನಂತಾದೆ. ಕಿರುಚಾಡೋಣ ಎಂದರೆ ಒಣಗಿದ ಗಂಟಲಿನಿಂದ ಶಬ್ದ ಹೊರಡುತ್ತಿಲ್ಲ. ಮೈ ತುಂಬಾ ಹುಳ ಬಿಟ್ಟಂತೆ ಅನಿಸುವ ಅವರ ನೋಟ, ಲೇವಡಿ ತುಂಬಿದ ಮಾತು… ಅಸಹ್ಯ. ಇವೆಲ್ಲದರ ನಡುವೆ ಒಬ್ಬ ಹೆಗಲ ಮೇಲೆ ಕೈ ಹಾಕಿಯೇ ಬಿಟ್ಟ. ಇದೆಂತಹ ಅಗ್ನಿಪರೀಕ್ಷೆ ಎಂಬಂತೆ ತಲೆಯೆತ್ತಿ ನೋಡಿದರೆ, ಚಂದಿರನೂ ಅಸಹಾಯಕನೆಂಬಂತೆ ಮೋಡಗಳ ನಡುವೆ ಮುಖ ಮರೆಸಿಕೊಂಡಿದ್ದಾನೆ. ದುಸ್ಥಿತಿಯೇ!

ಅಂದಿನ ರಾತ್ರಿ ನಡೆದ ಕರಾಳ ಘಟನೆಗೆ ಪ್ರಕೃತಿಯೇ ಮೂಕ ಸಾಕ್ಷಿ. ಗುಡುಗು-ಮಿಂಚಿನ ಸದ್ದಿನ ನಡುವೆ ನನ್ನ ಬಾಳು ಛಿದ್ರವಾಯಿತು. ಕಂಬನಿಗಳು ಮಳೆಯೊಂದಿಗೆ ಒಂದಾಗಿ, ಇಂಗಿ ಹೋದವು. ಅವರ ನಗುವಿನೆದುರು ನನ್ನ ಆರ್ತನಾದ ಸದ್ದಡಗಿತು. ಅಂದು ಬದುಕಿದ್ದೂ ಸತ್ತಂತಾದೆ. ಬೆಳಿಗ್ಗೆ ತೋಡಿನ ಕಡೆ ಬಂದವರು ಯಾರೋ ಬದುಕು ಸಾವಿನ ನನ್ನನ್ನು ಕಂಡರು. ಊರೆಲ್ಲಾ ಸುದ್ದಿ ಹಬ್ಬಿತು. ಮೂರು ದಿನ ನೂರು ಜನ ಮೋಂಬತ್ತಿ ಹಿಡಿದು ನ್ಯಾಯ ಕೇಳಿದರು. ಪ್ರತಿಭಟನೆ ಮಾಡಿದರು. ಎಲ್ಲೋ ಹುದುಗಿಹೋಗಿದ್ದ ಮಹಿಳಾ ಸಂಘಟನೆಗಳು ಅಂದು ಭುಗಿಲೆದ್ದವು. ವಾರ್ತಾವಾಹಿನಿಗಳು ಮನೆಯ ಬಾಗಿಲಲ್ಲೇ ಬೀಡುಬಿಟ್ಟವು. ಕರಾಳ ಸತ್ಯದೊಂದಿಗೆ, ಕಂಡವರು ಹೇಳಿದ ಇಲ್ಲ-ಸಲ್ಲದ್ದನ್ನು ಹಣೆದು, ರಂಗುರಂಗಾಗಿ ವಾರ್ತಾಪ್ರಸಾರ ಮಾಡಿದವು. ಪತ್ರಿಕೆಯ ಕಾಲಮ್ಮುಗಳಲ್ಲಿ ನನ್ನ ಚರ್ಚೆಯಾಯಿತು. ನಾನು ವಾದ-ವಿವಾದಗಳ ಪಾಲಿನ ಕೇಂದ್ರಬಿಂದುವಾದೆ. ಮನೆಗಳಲ್ಲಿ ಮಗಳಂದಿರಿಗೆ ಕೊಡುವ ಎಚ್ಚರಿಕೆಯ ಕರೆಗಂಟೆಯಾದೆ.

ನಾಲ್ಕು ದಿನಗಳ ನಂತರ ಎಲ್ಲರೂ ಮರೆತರು. ಯಾರಿಗೂ ಬೇಡವಾಗಿ, ದೂರದೂರಿನ ನೆಂಟರ ಮನೆಗೆ ರವಾನೆಯಾದೆ. ಮಹಿಳಾ ಸಂಘಟನೆಗಳು ಮತ್ತೆ ಮಂಪರಿಗುರುಳಿದವು. ಮಾಧ್ಯಮಗಳಿಗೆ ಬೇರಾವುದೋ `ಬ್ರೇಕಿಂಗ್-ನ್ಯೂಸ್’ ದೊರಕಿತು. ಆದರೆ ನನ್ನ ಬಾಳು.? ಗೋಳಾಯಿತು… ನಾನು ಕ್ಯಾಂಟೀನ್ ಟೇಬಲ್‍ಗಳ ಮೇಲೆ ಹರಿದಾಡುವ ಚುಟುಕುಗಳ ಪಾಲಾದೆ. ರಾಜಕೀಯದ ಸಮರ್ಥ ಯಂತ್ರವಾದೆ. ಆಟಿಕೆಯಾಗಿಯೇ ಉಳಿದುಬಿಟ್ಟೆ. ಮನೆಯಲ್ಲಿ ಇದನ್ನೆಲ್ಲಾ ಮರೆತು ಹೊಸ ಬದುಕು ಕಟ್ಟಿಕೋ ಎಂದರು.

ಹೇಗೆ ಮರೆಯಲಿ ಹೇಳು ಗೆಳೆಯಾ. ನನ್ನ ಈ ಸ್ಥಿತಿಗೆ ಕಾರಣರಾದ ರಾಕ್ಷಸರು ಸಮಾಜದಲ್ಲಿ ತಲೆ ಎತ್ತಿ ಓಡಾಡುತ್ತಿದ್ದಾರೆ. ನನಗೋ ತಗ್ಗಿಸಿದ ತಲೆಯನ್ನು ಎತ್ತಲು ಸಮಾಜ ಬಿಡುತ್ತಿಲ್ಲ. ಇದು ಯಾವ ನ್ಯಾಯ? ನಿನ್ನನ್ನು ದೂರಲಾರೆ ಗೆಳೆಯಾ. ನೀನು ಒಳ್ಳೆಯವನು. ನಾನು ದೂರುತ್ತಿರುವುದು ಈ ಸಮಾಜವನ್ನು. ಮನುಷ್ಯತ್ವ ಇಲ್ಲದಿದ್ದರೂ, ಮನುಷ್ಯರೆಂದು ಬೀಗುವ ಈ ಹೇಡಿಗಳನ್ನು. ಸಂಬಂಧಗಳಿಗೆ ತಿಲಾಂಜಲಿಯಿತ್ತು ಭುಸುಗುಡುವ ಈ ವಿಷಜಂತುಗಳನ್ನು. ಹುಟ್ಟಿನಲ್ಲಿ ಮಾನವರಾದರೂ, ಪ್ರವೃತ್ತಿಯಲ್ಲಿ ಮೃಗಗಳಾಗಿರುವವರನ್ನು. ಅಯ್ಯೋ! ಕ್ಷಮಿಸಬೇಕು. ಆ ನೀಚರನ್ನು ಮೃಗಗಳಿಗೆ ಹೋಲಿಸಿದ್ದಕ್ಕೆ ಕ್ಷಮಿಸಬೇಕು. ಆ ನರರಾಕ್ಷಸರಿಗಿರದ ಕರುಣೆ. ಪ್ರೀತಿ, ನಿಯತ್ತು ಮೃಗಗಳಲ್ಲಿದೆ. ಹೇಳಿ ಪ್ರಯೋಜನವೇನು?

ನನ್ನ ಕುರಿತು ಕರುಣೆಯಿದ್ದಲ್ಲಿ, ನನ್ನ ಪತ್ರ ನಿನ್ನೆದೆಯ ತಂತಿಯನ್ನು ಮೀಟಿದ್ದಲ್ಲಿ ನನ್ನ ಸಲುವಾಗಿ ನಿನ್ನ ಮನದಾಳದಿಂದ ರಾಗವೊಂದು ಹೊರಹೊಮ್ಮಲಿ. ಆ ರಾಗ ಸಮಾಜವನ್ನಾವರಿಸಿ ಕ್ರಾಂತಿ ಮೂಡಿ, ಬದಲಾವಣೆಯ ಹಣತೆ ಬೆಳಗಲಿ. ಆ ಹಣತೆಯ ಜ್ವಾಲೆಯಲ್ಲಿ ಸಮಾಜದಲ್ಲಿನ ವಿಷಜಂತುಗಳು ಸುಟ್ಟು ಭಸ್ಮವಾಗಲಿ.

ನಿನ್ನ ರಾಗದ ಹಾದಿ ಕಾಯುತ್ತಿರುವೆ
ಇಂತಿ ನಿನ್ನ ಗೆಳತಿ.

ಶ್ರೀಲಕ್ಷ್ಮಿ ಘಾಟೆ
ಪುತ್ತೂರು

LEAVE A REPLY

Please enter your comment!
Please enter your name here