ಪ್ರಕೃತಿಯ ಚೆಲುವು

0
187
Tap to know MORE!

ನಾವು ವಾಸಿಸುವ ಈ ಭೂಮಿಯನ್ನು ಪೃಥ್ವಿ ,ಇಳೆ, ಧಾತ್ರಿ,ಧರೆ ವಸುಂಧರೆ,ಧರಣಿ, ಧರಿತ್ರಿ ಯೆಂದು ಬೇರೆಬೇರೆ ಹೆಣ್ಣಿನ ಹೆಸರುಗಳಿಂದ ಕರೆಯುತ್ತೇವೆ.ಹಾಗೆಯೇ ಈ ಭೂಮಿಯನ್ನುಮಾತೆ,ವನಿತೆ,ಕನ್ಯೆ,ಕುವರಿಯೆಂಬ ಇನ್ನಷ್ಟು ಗೌರವದಿಂದಲೂ ಕರೆದು ಸಂತೋಷ ಪಡುತ್ತೇವೆ, ಹೀಗೆ ಸ್ತ್ರೀರೂಪದಿಂದಲೇ ಕರೆಯಲು ಕಾರಣವೇನೆಂದರೆ ಈ ಭೂಮಿಯ ಚೆಲುವು , ಇದು ಅಂತಿಂತ ಚೆಲುವಲ್ಲ ,ಬರಿಯ ಕಣ್ಣಿಗೆ ಕಾಣುವ ಬಣ್ಣಮಾತ್ರದ ಚಲುವಲ್ಲ ,ನಮ್ಮ ಪಂಚೇಂದ್ರಿಯಗಳಿಗೆ ನಿಲುಕುವ ಬ್ರಹ್ಮಾನಂದಕ್ಕೆ ಸಮನಾದ ಚೆಲುವು!! ಕಣ್ಣಿಗೆಕಾಣುವ ರಮಣೀಯ ದೃಶ್ಯಗಳು ,ಎತ್ತರದ ಗಗನಚುಂಬಿ ಪರ್ವತಗಳ ತುದಿಯಲ್ಲಿ ನಿಂತು ಸ್ವರ್ಗಕ್ಕೆ ರೆಂಬೆಕೊಂಬೆ ಚಾಚುವ ರುದ್ರ ರೂಪದ ತರುನಿಕರ,ಇಡೀ ಭೂಮಿಗೆ ಅಲ್ಲಿಂದಲೇ ಹಸುರು ಚಪ್ಪರವನ್ನ ಚಾಚಿದ ಅದರ ಗತ್ತು!ಅಲ್ಲಿಂದ ಕೆಳಗೆ ನೊಡಿದರೆ ಕಣ್ಣುಚಾಚಿದಷ್ಟೂ ದೂರಕ್ಕೆ ಹಸುರಿನ ಹೊಳೆ!ಆ ಹೊಳೆಯನ್ನೇ ಕ್ಷಣಾರ್ದದಲ್ಲಿ ಮಸುಗಿ ಮಾಯವಾಗಿಸುವ ಮಂಜು! ಪರ್ವತದ ಮೆಲಿಂದ ಕೆಳಗೆ ಕಿಬ್ಬಿಗೆ ಧುಮ್ಮಿಕ್ಕುವ ನೀರು, ಹತ್ತಿಯಾಗಿ ಹಿಂಜಿ ಗಾಳಿಗೆ ಬಳುಕಿ, ನೊರೆನೊರೆಯಾಗಿ,ಹಾಲಾಗಿ ತೇಲಿ,ಕೆಳಗಿಳಿವಾಯಾಸದಲಿ ಚಿತ್ರದಲಿ ತಂದಂತೆ ನಿಂತು, ಅಂತೂ ಕೆಳಗೆ ಬಂಡೆಯ ಮೇಲೆ ಅಪ್ಪಳಿಸುವಾಗ ಭೂಮಿಯೇ ಅದರುವಂತೆ ಜಪ್ಪಿಸಿ ,ಗಂಗೆ ಇಳಿಯುವಾಗ ಹೀಗೇ ಭೂಮಿ ಕಂಪಿಸಿರಬೇಕೆಂಬ ಕಲ್ಪನೆ ಮೂಡಿಸಿದ ಮರುಗಳಿಗೆಯೇ ಲಲಿತವಾದ ದ್ವನಿ ಹೊರಡಿಸಿ ಜುಳಜುಳನುರುಳಿ ಹೊಳೆಯಾಗಿ ಮುಂದುವರಿಯುವ ಸೊಬಗು! ಮತ್ತೆ ತನ್ನ ಇಕ್ಕೆಲಗಳನ್ನೂ ತುಂಬಿ ಹರಿದು ,ಸಿಕ್ಕಿದ್ದನೆಲ್ಲಾ ತರುಬಿ ,ಮುಳುಗಿಸಿ ಎಲ್ಲವನ್ನು ಕ್ಷಣದಲ್ಲಿ ಆಪೋಷನ ಪಡೆವ ಘನಘೋರ ಸೊಬಗು!
ಮತ್ತೆ ದಿಟ್ಟಿ ಹಾಯಿಸಿದಲ್ಲೆಲ್ಲ ಇನಿಯನನ್ನಪ್ಪಿನಿಂತ ಲಲಿತೆಯಂತೆ ಮರವನ್ನಪ್ಪಿ ಹಬ್ಬಿನಿಂತ ಲತೆ! ಚಿಗುರು,ಹೂವು,ಮಿಡಿ,ಹೀಚು,ಕಾಯಿ,ಹಣ್ಣುಗಳು ಕಣ್ಣಿಗೆ ನೀಡುವ ಚೆಲುವು!ಹೂವಿನಿಂದ ಹೂವಿಗೆ ಹಾರುವ,ಮಧುಹೀರುವ ದುಂಬಿ,ಭೃಂಗ ಸಂಗದಿಂದ ಹೂವು ಕಾಯಾಗುವ ಚೆಲುವು, ಈ ಹೂವಿನ ಮತ್ತು ಜೇನಿನ ಕಾರಣದಿಂದ ಇಡೀ ಕಾಡೇ ಪರಿಮಳದ ಗೂಡಾಗುವ ವಿಸ್ಮಯ!ಒಂದೊಂದು ಹೂವಿನ ಒಂದೊಂದು ಪರಿಮಳದ ಸಂಗದಿಂದ ‌ಮತ್ತವಾಗುವ ಮನ! ಕಾಡನ್ನೆಲ್ಲಾ ಸುತ್ತಿಸುಳಿದು,ಮರಗಿಡವನ್ನೆಲ್ಲಾ ಹತ್ತಿಯಿಳಿದು ಲಲಿತಲವಂಗ ಲತಾಪರಿಶೀಲನ ಕೋಮಲ ಮಲಯ ಸಮೀರವೇ ಬಂದು ನಮ್ಮನ್ನಾಕ್ರಮಿಸಿ ಮೈಮನವು ಹರುಷದ ಪುಳಕ ಸ್ಪರ್ಷದಲಿ ಮಿಂದು ರೋಮರೋಮವೂ ರೊಮಾಂಚನದಲಿ ಬಿರಿದು ಆಹಾ!ಸ್ವರ್ಗಸದೃಶ ಸ್ಪರ್ಷ! ಮರದ ರೆಂಬೆ ಕೊಂಬೆಗಳಲ್ಲಿ ,ಎಲೆಎಲೆಗಳ ನಡುವೆ ತಲೆದೋರಿ ತನ್ನ ಬಣ್ಣ,ಗಾತ್ರ,ವಾಸನೆ,ರುಚಿಯಿಂದ ಕರೆದು ಕೈಗೆಬಂದು ,ಬಾಯಿ ಸೇರಿ ನಾಲಗೆಯ ಸರ್ವ ಮೂಲೆಮೂಲೆಯ ರಸಗ್ರಂಥಿಗಳನ್ನೂ ಬಡಿದೆಬ್ಬಿಸಿ ಒಂದು,ಇನ್ನೊಂದು,ಮತ್ತೊಂದು,,,ಹೀಗೆ ಸವಿಸವಿಯಾಗಿ ಉದರ ಸೇರುವ ಫಲಗಳು ಹುಟ್ಟಿಸುವ ವ್ಯಾಮೋಹ,!! ಮರದ ಎಲೆಯ ತುದಿಯಿಂದುದುರುವ ,ಹಸುರು ಹುಲ್ಲಿನ ತುದಿಯಲ್ಲಿ ಮಿರುಗುವ,ಇಬ್ಬನಿಯ ಹನಿಗಳು ಅಮೃತ ವೇನೋ ಯೆಂಬ ಭ್ರಮೆಯಿಂದ ಚಪ್ಪರಿಸುವ ಸುಖ!
ದುಂಬಿಯ ಗುಂಜಾರವ,ಭೃಂಗ ಸಂಗೀತ,ಹಕ್ಕಿಗಳ ಚಿಲಿಪಿಲಿ, ಪಕ್ಷಿಗಳು ಹೊಮ್ಮಿಸುವ ರೆಕ್ಕೆಯ ದಡಬಡ ಸದ್ದು.ಗಿಳಿಯ ಇಂಚರ,ಕೋಗಿಲೆಯ ಕೂಜನ,ನವಿಲಿನ ಕೇಕೆ,!!ಹೊಟ್ಟೆತುಂಬಿದ,ಅಪಾಯದೂರದ,ಕುಟುಂಬ ಪ್ರೇಮದ ಸಂಭಾಷಣೆ! ಪ್ರೇಮನಿರೀಕ್ಷಣೆಯ ಉಲ್ಲಾಸದ ಅಹ್ವಾನ,!ನದಿಯ ಜುಳುಜಳು,ರಾತ್ರಿಯ ನಕ್ಷತ್ರಗಳ ಮಾತುಗಳು ಕಿವಿಗೆ ಬಿದ್ದು ಆಗುವ ಹಿತಾನುಭವ!!

ಓಹ್!ಇದಕ್ಕಿಂತ ಬೇರೆ ಚಲುವಾದರೂ ಯಾವುದು? “ಸೊಗಯಿಸಿ ಬಂದ ಮಾಮರನೆ,ತಳ್ತೆಲೆವಳ್ಳಿಯೆ,ಪೂತಜಾತಿಸಂಪಗೆಯೆ,ಕುಕಿಲ್ವ ಕೋಗಿಲೆಯೆ,ಪಾಡುವ ತುಂಬಿಯೆ,ನಲ್ಲರೊಳ್ಮೊಗಂ ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ” ಇದೇ ನಿಜವಾದ ಸುಖ, ಇದೇ ನಿಜವಾದ ಚೆಲುವು.ಇಂತಹ ಚೆಲುವಿರುವಲ್ಲಿ ಮರಿ ದುಂಬಿಯಾಗಿಯೋ,ಕೋಗಿಲೆಯಾಗಿಯೋ ಹುಟ್ಟುವುದಕ್ಕಿಂತ ಬೇರೆ ಸೌಭಾಗ್ಯವಿಲ್ಲ.
ಈ ಕಾರಣಕ್ಕಾಗಿಯೇ ನಾವು ಈ ವಸುಂಧರೆಯ ಚೆಲುವನ್ನು ,ನಮ್ಮ ಅರಿವಿಗೆ ನಿಲುಕುವ ಪ್ರತಿಯೊಂದಕ್ಕೂ ಹೊಲಿಸುವುದು.
ತುಂಬಿದ ಹೊಳೆ, ಆಗಸದೆತ್ತರದ ಅರಿವು. ಸಮುದ್ರದಷ್ಟು ಗಂಭೀರ,ವನದೇವತೆ,ನರ್ತಿಸಿದರೆ ನವಿಲಂತೆ, ದನಿತೆಗೆದರೆ ಕೋಗಿಲೆಯಂತೆ ಹಾಲಿನಷ್ಟು ಬಿಳಿಯ ಕೀರ್ತಿ,ಹಕ್ಕಿಯಷ್ಟು, ಹಗುರ…….
ನಮ್ಮ ದೇವರುಗಳನ್ನು ಗುರುತಿಸುವುದೂ ಈ ಪ್ರಕೃತಿಯ. ಚಲುವಿನ ಮೂಲಕವೇ, ನೀಲ ಮೇಘ ಶ್ಯಾಮ. ಗಿರಿವನಪ್ರಿಯ ರಾಮ,ಪಶು ಪತಿ, ವನಸುಂದರಿ,ಶುಕಭಾಷಿಣಿ “,ಸಮುದ್ರವಸನೇ ದೇವೀ ಪರ್ವತಸ್ಥನ ಮಂಡಲೇ”

,,, ನಮ್ಮ ಜನಪದರೂ ಪ್ರಕೃತಿಯ ಚಲುವನ್ನೇ ಕಂಡರು”ಕೋಕಿಲಂಗೆ ಕೂಗುತೀಯಲ್ಲೋ ಲಲ್ಲಾರಿ ಜಾಣ” “ಯಾವ್ದೇಸದ ಹೆಣ್ಣೂಯಿವಳು ರಂಗೀನ್ಲಾಲ.ಕುಂತಳ್ಕುದುರೀ ಮ್ಯಾಲ.ಮಾಡ್ತಾಳೆ ಡೌಲ ಕುಣದಾಂಗೇ ನವುಲ”
ಮುಗ್ದರೂ,ಪ್ರಮಾಣಿಕರೂ,ಕವಿಗಳೂ,ಕಲಾವಿದರು ಈ ಪ್ರಕೃತಿಯ ಚೆಲುವನ್ನೇ ಮೆಚ್ಚುತ್ತಾರೆ, ಮರಗಳಲ್ಲಿ ಫಲತುಂಬಿ,ಗದ್ದೆಗಳಲ್ಲಿ ಭತ್ತದ ತೆನೆತುಂಬಿ,ಬಯಲುಗಳಲ್ಲಿ ಹಸುರು ತುಂಬಿ, ಹಸುರನ್ನ ಮೇದು ಹಸುವಿನ ಒಡಲುತುಂಬಿ,ಹಾಲು ಕರುವಿನ ಹೊಟ್ಟೆ ತುಂಬಿ. ಮಳೆ ಬಂದು ಹೊಳೆತುಂಬಿದ. ಈ”ತುಂಬಿದ” ಭೂಮಿಯ ಪ್ರತಿರೂಪವೇ ಗರ್ಭಿಣಿ ಸ್ತ್ರೀ ಹಾಗಾಗಿ ನಾವು ಈ ಚೆಲುವೆಯ ಸೀಮಂತದ ದಿನ ,ಆ ಚಲುವೆಯ ಪ್ರತೀಕವಾಗಿ ಹಸಿರು ಸೀರೆ,ಹಸಿರು ಕುಪ್ಪಸ, ಹಸಿರು ಬಳೆ, ತಲೆಗೆ ಸಿಂಗಾರ,ಮಡಿಲಿಗೆ ಅಡಕೆ,ಕಾಯಿ,ಅಕ್ಕಿತುಂಬಿ “ಚೆಲುವೇ” ಅನ್ನುವುದು . .
ಈ ಭೂಮಿಗಿಂತ ಚೆಲುವೆ ಇನ್ನೊಬ್ಬರಿಲ್ಲ, ಈ ಚೆಲುವನ್ನು ನೋಡಲು ಬರಿಯ ಕಣ್ಣುಗಳು ಸಾಲವು ಒಳಗಿನ ಕಣ್ಣನು ತೆರೆಯಬೇಕು , ಮಗುವಿನ ಮುಗ್ದತೆಯನ್ನ ನಮ್ಮ‌ಮನದಲ್ಲಿ ತುಂಬಿ ಕೊಂಡರೆ ಮಾತ್ರ ನಮಗೆ ಈ ಚಲುವು ಗೋಚರಿಸುತ್ತದೆ, ನಾವು ಹೂವಯ್ಯನಾಗಬೇಕು,ಮೀನುಶಿಕಾರಿಯ ಚಿನ್ನಯ್ಯನಾಗಬೇಕು,ತಾಯಿಜೊತೆಗೆ ಸಮುದ್ರತೀರದಲ್ಲಿ ಕುಳಿತು.ಸಮುದ್ರ ಸಂಗೀತವನ್ನಾಲಿಸುವ ರಾಮೈತಾಳನಾಗಬೇಕು,ಅಥವಾ ಹಡೆವೆಂಕಟನಾದರೂ ಆಗಬೇಕು. ಆಗ ಎಲೆಗಳ ಮೇಲೆ ಹೂಗಳ ಒಳಗೆ ಕುಳಿತ ಅಮೃತದಾ ಬಿಂದು ಕಾಣುತ್ತದೆ,ಗಿಡ ಗಂಟೆಗಳ ಕೊರೊಳೊಳಗಿಂದ ಹಕ್ಕಿಗಳ ಹಾಡುಕೇಳುತ್ತದೆ,ಮಘಮಘಿಸುವ ಮುಗಿದ ಮೊಗ್ಗಿ ಪಟಪಟನೆ ಒಡೆವ ಶಬ್ದ ಕೇಳುತ್ತದೆ,ತಂಗಾಳೀಯ ಕೈಯೊಳಗಿರಿಸಿದ ಎಸಳಿನ ಚವರಿಯಂತಹ ತುಂಬಿಯ ಹಿಂಡು ಗಂಧವನ್ನು ಮೈಯೆಲ್ಲಾ ಸವರಿ ಕೊಂಡು ಹಾರಿ ಬಂದು ಸಮೀಪಿಸಿದ್ದು ಅರಿವಿಗೆ ಬರುತ್ತದೆ‌.
ಇದು ಈ ಚೆಲುವು ಮೈದೆರೆದುಕೊಳ್ಳುವ ಹೊಸ ಬೆಳಗು ಮತ್ತು ಇದು ಬರಿಯ ಬೆಳಗಲ್ಲ,ಮಗುಮಾದರಿಯ ಕ್ಯಾಮರಾ ಕಣ್ಣು ಕಂಡ ಚಲುವಿನ ಬೆಳಗು.

ಹರೀಶ್ .ಟಿ.ಜಿ

LEAVE A REPLY

Please enter your comment!
Please enter your name here