ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸೋಲಿನ ಸರಮಾಲೆಗಳ ಹಿನ್ನೆಲೆಯಲ್ಲಿ ನಾಯಕತ್ವದ ಬಗ್ಗೆ ಆಂತರಿಕವಾಗಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ, 2014ರ ಚುನಾವಣಾ ಸೋಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಕತೆಯ ಕೊನೆಯ ಸಂಪುಟದಲ್ಲಿ ಉಲ್ಲೇಖವಿದೆ ಎಂಬ ವರದಿಗಳು ಕುತೂಹಲ ಕೆರಳಿಸಿವೆ.
“ನಾನು ಪ್ರಧಾನಿಯಾಗಿದ್ದಿದ್ದರೆ, ಕಾಂಗ್ರೆಸ್ ಪಕ್ಷ ಸೋಲುತ್ತಿರಲಿಲ್ಲ ಎಂಬ ಅಭಿಪ್ರಾಯ ಪಕ್ಷದ ಕೆಲ ಸದಸ್ಯರಲ್ಲಿತ್ತು” ಎಂದೂ ಪ್ರಣಬ್ ಕೃತಿಯಲ್ಲಿ ವಿವರಿಸಲಾಗಿದೆ. ಕಳೆದ ಆಗಸ್ಟ್ನಲ್ಲಿ ನಿಧನರಾದ ಪ್ರಣಬ್ ಆತ್ಮಕತೆಯ ಕೊನೆಯ ಸಂಪುಟ ಇಂಥ ಇನ್ನಷ್ಟು ಸತ್ಯಗಳನ್ನು ಬಿಚ್ಚಿಡಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ತಮ್ಮ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿ, ಅಣಕಿಸಿದ ಬರಾಕ್ ಒಬಾಮ!
“ನಾನು 2004ರಲ್ಲೇ ಪ್ರಧಾನಿಯಾಗಬೇಕಿತ್ತು ಎಂಬ ಸಿದ್ಧಾಂತವನ್ನು ಕೆಲ ಕಾಂಗ್ರೆಸ್ಸಿಗರು ಮುಂದಿಟ್ಟಿದ್ದರು. 2014ರ ಚುನಾವಣಾ ಸೋಲನ್ನು ತಪ್ಪಿಸಬಹುದಿತ್ತು ಎನ್ನುವುದು ಅವರ ಅಭಿಪ್ರಾಯ. ಇದನ್ನು ನಾನು ಒಪ್ಪುವುದಿಲ್ಲವಾದರೂ, ನಾನು ರಾಷ್ಟ್ರಪತಿಯಾದ ಬಳಿಕ ಪಕ್ಷದ ನಾಯಕತ್ವ ರಾಜಕೀಯ ಗಮನವನ್ನು ಕಳೆದುಕೊಂಡಿತು. ಸೋನಿಯಾಗಾಂಧಿ ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಅಸಮರ್ಥರಾದರು ಹಾಗೂ ಡಾ.ಮನಮೋಹನ ಸಿಂಗ್ ದೂರ ಉಳಿದು ಸಂಸದರ ಜತೆ ವೈಯಕ್ತಿಕ ಸಂಪರ್ಕಕ್ಕೆ ಇತಿಶ್ರೀ ಹಾಡಿದರು ಎಂಬ ಉಲ್ಲೇಖ ಕೃತಿಯಲ್ಲಿದೆ” ಎಂದು ಪ್ರಕಾಶಕರಾದ ರೂಪಾ ವಿವರಿಸಿದ್ದಾರೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಈ ಕೃತಿ, “ದ ಪ್ರೆಸೆಡೆನ್ಷಿಯಲ್ ಇಯರ್ಸ್” ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಪ್ರಣಬ್ ಬಹುತೇಕ ಎಲ್ಲ ಕಾಂಗ್ರೆಸ್ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿದ್ದರು ಹಾಗೂ 2012ರಲ್ಲಿ ರಾಷ್ಟ್ರಪತಿಯಾದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲು ಕಾರಣವಾದ ಅಂಶಗಳ ಬಗ್ಗೆ ಅವರು ಈ ಭಾಗದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.