ಭಾರತವು ಪ್ರತಿ ಲಕ್ಷ ಜನಸಂಖ್ಯೆಗೆ, ಅತಿ ಕಡಿಮೆ ಕೊರೋನಾ ಪ್ರಕರಣಗಳ ದೇಶಗಳ ಪೈಕಿ ಒಂದಾಗಿದೆ ಮತ್ತು ದಿನದಿಂದ ದಿನಕ್ಕೆ ಚೇತರಿಸಿಕೊಂಡ ಮತ್ತು ಸಕ್ರಿಯವಾಗಿರುವ ಪ್ರಕರಣಗಳ ನಡುವಿನ ಅಂತರವನ್ನು ವಿಸ್ತರಿಸುತ್ತಲೇ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಜೂನ್ 21 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪರಿಸ್ಥಿತಿ ವರದಿ- 153ನ್ನು ಮಂಡಿಸಿತ್ತು. ದೇಶದಲ್ಲಿ ಜನಸಂಖ್ಯಾ ಸಾಂದ್ರತೆಯು ಹೆಚ್ಚಿದ್ದರೂ, ಭಾರತವು ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಅತ್ಯಂತ ಕಡಿಮೆ ಸೋಂಕಿತರನ್ನು ಹೊಂದಿದೆಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
“ಪ್ರತಿ ಲಕ್ಷ ಜನಸಂಖ್ಯೆಗೆ ಭಾರತದಲ್ಲಿ 30.04 ಸೋಂಕಿತರಿದ್ದಾರೆ. ಜಾಗತಿಕ ಸರಾಸರಿಯು, ಅದರ ಮೂರು ಪಟ್ಟು ಎಂದರೆ, ಸುಮಾರು 114.67 ರಷ್ಟಿದೆ. ಅಮೇರಿಕಾದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 671.24 ಸೋಂಕಿತರನ್ನು ಹೊಂದಿದ್ದರೆ, ಜರ್ಮನಿ, ಸ್ಪೇನ್ ಮತ್ತು ಬ್ರೆಜಿಲ್ ದೇಶಗಳಲ್ಲಿ ಕ್ರಮವಾಗಿ 583.88, 526.22 ಮತ್ತು 489.42 ಸೋಂಕಿತರಿದ್ದಾರೆ” ಎಂದು ಆರೋಗ್ಯ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ಅಂಕಿ ಅಂಶವು ಕೋವಿಡ್-19ನ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗೆ ವ್ಯಾಪಕವಾದ ಕ್ರಮಗಳನ್ನು ತೆಗೆದುಕೊಂಡ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಸರ್ಕಾರದ ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ವಿಧಾನಕ್ಕೆ ಸಾಕ್ಷಿಯಾಗಿದೆ ಎಂದು ಆ ವರದಿಯು ಹೇಳಿದೆ.
ಭಾರತದಲ್ಲಿ ಈವರೆಗೆ ಒಟ್ಟು 2,37,195 ರೋಗಿಗಳನ್ನು ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ ಹಾಗೂ ದೇಶದಲ್ಲಿ ರೋಗಿಗಳ ಚೇತರಿಕೆಯ ಪ್ರಮಾಣವು 55.77% ಆಗಿದೆ.