ಪ್ರೀತಿಯೆಂಬ ಚುಂಬಕ

0
223
Tap to know MORE!

“ದಯೆಯಿಲ್ಲದಾ ಧರ್ಮ ಅದೇವುದಯ್ಯಾ ದಯವೇ ಬೇಕು ಸಕಲ‌ ಪ್ರಾಣಿಗಳೆಲ್ಲರಲ್ಲಿ”,, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ನಾಡಿದ ಈ ಮಾತು ಜಗತ್ತಿನ ಉಗಮದೊಂದಿಗೇ ಜನಿಸಿದ್ದಿರಬೇಕು . ಈ ಕಣ್ಣಿಗೆ ಕಾಣುವ ಜಗತ್ತು ಮುಂದೊಂದುದಿನ ಇಲ್ಲವಾದಾರೂ ಈ ಮಾತು ಉಳಿದೇಯಿದ್ದು ಮುಂದೆ ಬರುವ ಹೊಸ ಸೃಷ್ಟಿಯನ್ನ ಹಾರೈಸುವ ಮಾತಾಗಿರುತ್ತದೆ. ದಯೆಯೆಂಬ ತಾರಕ ಮಂತ್ರವನ್ನು ನಾನು ಪ್ರೀತಿಯೆಂಬ ಪರಮ‌ಚಂದದ ಮೌಲ್ಯವೊಂದರಿಂದ ಕರೆಯುತ್ತೇನೆ.ಎರಡು ಕಾಲಿನ‌ ಪ್ರಾಣಿಯಾದ ನಾವು ಮನುಷ್ಯನೆಂಬ ಹೆಸರಿನಿಂದ ಕರೆಸಿಕೊಂಡದ್ದು ಇಂತಹ ಕೆಲವು ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡದ್ದರಿಂದಲೆ ,ಈ ಮೌಲ್ಯಗಳು ನಮ್ಮ ಬದುಕಿಗೆ ಚಂದದ ಆವರಣವನ್ನು ಕೊಟ್ಟವು ದಯೆ,ಶಾಂತಿ,ಕನಿಕರ,ಸತ್ಯ,
ಪ್ರೀತಿ,ತ್ಯಾಗವೇ ಮುಂತಾದ ಈ ಮೌಲ್ಯಗಳನ್ನು ಒಳಗೊಂಡಿರುವುದೇ ಮಾನವೀಯತೆ,ಅದಿಲ್ಲದೆ ಕ್ರೌರ್ಯ,ಕೊಲೆ,ಹಿಂಸೆ,ಸುಳ್ಳು,
ಕಪಟತನಗಳನ್ನು ಅಮಾನವೀಯ,ರಾಕ್ಷಸೀಯ ವೆನ್ನುತ್ತೇವೆ,
ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಬುದ್ದ,ಬಸವರಂತವರನ್ನು‌ನಾವು ಗುರುವೆಂದು ಗೌರವಿಸಿದರೆ,ಅಮಾನವೀಯತೆಯೇ ಪುರುಷರೂಪ ಪಡೆದವರನ್ನ ನರರಾಕ್ಷಸ,ನರಹಂತಕನೆಂದೇ ಗುರುತಿಸಿ ಸಮಾಜ ಕಂಟಕರಾದ ಅವರನ್ನು ಹೊಡೆದುರುಳಿಸಬೇಕೆಂದು‌ ಬಯಸುತ್ತೇವೆ.
ಮೊದಲಿನ ಮಾತಿಗೇ ಬರೊಣ ಬಸವಣ್ಣ ದಯೆಯೆಂಬ ಮೌಲ್ಯವು ಈಯುವ,ಹಾಲು ಕೊಡುವ ಹಸುವೆಂದು ಕರೆಯುತ್ತಾನೆ, ಹಸು ಹಾಲನ್ನು ತನ್ನ ಕರುಳಕುಡಿಗೆ ಈವುತ್ತದೆ ” ಕೀಳಿಂಗಲ್ಲದೆ ಹಯನು ಕರೆಯುವುದೆ?” ಉಪನಿಷತ್ತು ಯೆಂಬ ಹಸು ಪಾರ್ಥನೆಂಬ ಕರುವಿಗೆ ಗೀತಾಮೃತವನ್ನು ಸುರಿಸುತ್ತದೆ, ಹಾಗಾಗಿ ಈ ಪ್ರೀತಿ ,ದಯೆಯ ಹಾಲು ಕುಡಿದ ನಾವು ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ಶರಣ ರಾಗಬೇಕು.
ಇವತ್ತು ಪ್ರೀತಿಯೆಂಬ ಪದದ ಅರ್ಥ ಸಂಕುಚಿತವಾಗಿ ದೈಹಿಕ ಆಕರ್ಷಣೆಯೆಂಬ ಸೀಮಿತ ಪರಿಮಿತಿಗಿಳಿದಿದೆ .ಈ ಕಾರಣದಿಂದಾಗಿ ಪ್ರೀತಿಯೆಂದಕೂಡಲೇ ನಮ್ಮ ಮುಖದಲ್ಲಿ ವ್ಯಂಗ್ಯವೊಂದು ನುಸುಳುತ್ತದೆ.ಇವತ್ತು ದರ್ಮವೇ ಮುಂತಾದ ಹಲವು ಕ್ಷೇತ್ರಗಳಲ್ಲಿ ಇಂತಹ ಅಪಕಲ್ಪನೆಗಳು ಮೂಡಿ ಜನಜನಿತ ವಾಗಿದ್ದ ರಿಂದ ನಮಗೀಗ ಯಾವು ಸತ್ಯ,ಯಾವುದು ಮಿಥ್ಯವೆಂದೇ ತಿಳಿಯದಾಗಿದೆ.
ನಮ್ಮಇತಿಹಾಸ,ಪುರಾಣಗಳು ಪ್ರೀತಿಯ ಸಾರವನ್ನು ಸದಾ ಪಸರಿಸಿದವು, ರಾಮ ಶಬರಿ ,ಅಹಲ್ಯೆ,
ಕೃಷ್ಣ ಮತ್ತುಪಾಂಡವರು ,ಬುದ್ಧ ಮತ್ತು ಅಂಗೂಲಿಮಾಲನೆ‌ ಮುಂತಾದ ಪ್ರಸಂಗಗಳ ನಿರೂಪಣೆಯ ಹಿಂದಿನ ಆಶಯವೇ ಪ್ರೀತಿಯ ,ದಯೆಯ ಪ್ರಸರಣ,
ಇದನ್ನು ನಮ್ಮ ಕವಿಗಳು ನಿರಂತರವಾಗಿ ಮಾಡಿಕೊಂಡೇ ಬಂದರು. ಕಾರಣ ಸಾಹಿತ್ಯವು ಜೀವನದ ಪ್ರತಿಬಿಂಬ ಹಾಗಾಗಿ ,ಇಲ್ಲಿ ಕಾಣುವ ವಿವರವು ಓದುಗನ ಮನದಲ್ಲಿ ಪ್ರತಿಬಿಂಬಿಸಲ್ಪಡಬೇಕು , ಮತ್ತು ಇದು ಸಾರ್ವತ್ರಿಕಗೊಳ್ಳ ಬೇಕು ಎಂಬ ಆಶಯ ಕವಿಗೆ.
ಬುದ್ದನ ಬದುಕಿಗೆ ತಿರುವು ಕೊಟ್ಟ ಹಂಸದ ಬೇಟೆಯ ಪ್ರಸಂಗ ವನ್ನು ನೋಡಿ. ಇದೇ ಪ್ರಸಂಗವು ವಾಲ್ಮೀಕಿಯು ಶೋಕವನ್ನು ಹೇಗೆ ಶ್ಲೋಕವಾಗಿಸಿತು ಯೆಂಬುದನ್ನು ನೋಡಿ,ಈ ಎರಡು ಪ್ರಸಂಗಗಳು ವಧೆಯ ಕಾರಣಕ್ಕಾಗಿ ಬುದ್ದ,ವಾಲ್ಮೀಕಿಯ ಮನಸ್ಸನ್ನು ಆರ್ದ್ರಗೊಳಿಸಿ ಅವರಲ್ಲಿ ದಯೆ,ಪ್ರೀತಿಯನ್ನು ಪ್ರಚೋದಿಸಿ ಆ ಮೂಲಕ ಜಗತ್ತಿಗೆ ಪ್ರೀತಿಯ ಧಾರೆಹರಿಸಿ ಇಂದಿಗೂ ಪ್ರಸ್ತುತರಾಗಿ ನಮ್ಮ ಜನಮನದಲ್ಲಿ ಸ್ಥಾನವನ್ನು ಪಡೆದಿದ್ದರೆ ಅದಕ್ಕೆ ಕಾರಣ ಪ್ರೀತಿ,ದಯೆ. ಪರಮ ನೀಚನೂ, ಕ್ರೂರಿಯೂ ಆದ ಅಂಗುಲಿಮಾಲ ಬುದ್ದನು ಕರೆದ “ಸಹೋದರ” ಯೆಂಬ ಮಾತಿಗೆ ಮನಸೋತನೆಂಬುದನ್ನು ನೊಡಿದರೆ ,ಅತನ ಪರಿಶುದ್ದವಾದ ಅಂತರಂಗವನ್ನು ಯಾವುದೋ ಘಟನೆ ಕಲಕಿತ್ತೆಂಬುದು ಅರಿವಾಗುತ್ತದೆ,ಒಂದು ಮಾತಿಗೆ ಆತ ಕರಗಿದನೆಂಬುದನ್ನು ನೋಡುವಾಗ ಆತನೂ ಪ್ರೀತಿಗಾಗಿ ಕಾತರಿಸಿದ್ದನೆಂಬುದೂ ಅರಿವಾಗುತ್ತದೆ.
ನಮಗೆ ಪ್ರೀತಿಯೆಂದಾಗ ನೆನಪಿಗೆ ಬರುವುದು ಮನುಷ್ಯಪ್ರೀತಿಗಿಂತ ಮಿಗಿಲಾಗಿ ಪ್ರಾಣಿ ಪ್ರೀತಿ. ಕಾರಣ ಅಸಹಾಯಕವಾದ ಪ್ರಾಣಿಗಳ ಅಂತರಂಗದ ಭಾವನೆಯನ್ನು ಅರ್ಥೈಸಿಕೊಂಡು ಸ್ಪಂದಿಸುವ ಭಾವ ಪ್ರತಿಯೊಬ್ಬರಿಗೂ ಯಿಷ್ಟ, ಆ ಪ್ರಾಣಿಗಳು ನಮ್ಮನ್ನು ಹೇಗೆ ನಂಬಿರುತ್ತವೆ.ಮತ್ತು ತಮ್ಮ ಪ್ರೀತಿಯನ್ನು ಹೇಗೆಲ್ಲಾ ವ್ಯಕ್ತಪಡಿಸುತ್ತವೆ ಎಂಬುದನ್ನ ಅವುಗಳ ಸಹವಾಸದಲ್ಲಿಯೇ ಅನುಭವಿಸಬೇಕು.ಹಸು,ಕರು,ನಾಯಿಗಳು ಬಂದು ನಮ್ಮನ್ನು ಒರೆಸಿ ಪ್ರೀತಿ ಸೂಸುವುದನ್ನು ಅನುಭವಿಸಬೇಕು. ನಮ್ಮ ತೋಟಕ್ಕೆ ನಾವು ಹೋಗಬೇಕು, ಅಲ್ಲಿ ಮಾತಾಡಬೇಕು,ಆಗ ಅದನ್ನು ಕೇಳಿಸಿಕೊಂಡ ಮರಗಳು ಚನ್ನಾಗಿ ಬೆಳೆಯುತ್ತವೆ. ತೆಂಗು ಮನೆಯ ಕಡೆಗೆ ಬಾಗುವ ಹಿನ್ನೆಲೆಯೇ ನಮ್ಮ ಮಾತನ್ನು ಕೇಳುವ ಅದರ ಬಯಕೆ…ಮುಂತಾದ ಮಾತನ್ನು ಅನುಭವಿಸಿಯೇ ಅರಿಯಬೇಕು.
ನನ್ನದೇ ಉದಾಹರಣೆ ಹೇಳುವೆ, ಇತ್ತೀಚೆಗೆ ನನ್ನವೆರಡು ಬೆಕ್ಕಿನ‌ಮರಿಯನ್ನು ಒಬ್ಬರಿಗೆ ಕೊಟ್ಟೆ, ಅವನ್ನು ಹಿಡಿದು ಚೀಲಕ್ಕೆ ತುಂಬುವಾಗ ನನ್ನ ಮಡದಿ,ಮಗಳು ಕಣ್ಣೀರು ಮಿಡಿದು ಮುತ್ತಿಕ್ಕಿ ಕಳುಹಿಸಿ ಕೊಟ್ಟರು.
ಈ ಸಂಜೆ ಕೊಟ್ಟು, ಮಾರನೆ ಮಧ್ಯಾಹ್ನ ಕೇಳಿದರೆ “ಅವು ಓಡಿ ಹೋದವು ಮಾರಾಯರೆ” ಯೆಂದು ತುಂಬಾ ನಿರ್ಲಿಪ್ತರಾಗಿ ಮನೆಯೆದುರಿನ ಕುರುಚಲು ಕಾಡನ್ನು ತೋರಿ ನುಡಿದರು. ನನಗೆ ನೋವು ಮತ್ತು ತುಂಬಾ ಬೇಸರವಾಗಿ ಅವರ ಮನೆಯ ಸಮೀಪದ ಕುರುಚಲು ಕಾಡಿನತ್ತ ಹೋಗಿ “ಮಕ್ಕಳೇ, ಬನ್ನೀ ” ಎಂದು ನಾಲ್ಕೈದು ಬಾರಿ ಕರೆದೆ, ಸಣ್ಣಗೆ ಮಿಯಾಂವೆಂಬ ಧ್ವನಿ ಹೊರಡಿಸಿ ಗಿಡಗಳ ಸಂದಿಯಿಂದ ಮಳೆಯಲ್ಲಿ ಒದ್ದೆಯಾದ ಎರಡೂ ಮರಿಗಳು ಬಂದು ನನ್ನ ಭುಜವೇರಿದವು. ನನ್ನ ಧ್ವನಿ ಅವುಗಳಿಗೆ ತಮ್ಮ ತಂದೆಯ ಧ್ವನಿಯೆಂದೆನ್ನಿಸಿ, ಪ್ರೀತಿಯನ್ನು ಹುಟ್ಟಿಸಿರಬೇಕಲ್ವ ? ಅಪ್ಪ ಬಂದರು ನಮಗೆ ಇನ್ನು ಭಯವಿಲ್ಲವೆಂಬ ಫೀಲಾಗಿರಬೇಕಲ್ವ?? ನಿನ್ನೆ ರಾತ್ರಿಯ ಮಳೆಗೆ ಮುದ್ದೆಯಾಗಿ ಹಸಿವಿನಿಂದ ಕಂಗೆಟ್ಟ ಅವುಗಳನ್ನು ಎದೆಗವಚಿಕೊಂಡೇ ಮನೆಗೆ ಬಂದಾಗ ಅವುಗಳಿಗಾದ ಸಂಭ್ರಮವನ್ನು ನಾನು ಯಾವ ಪದಗಳಲ್ಲಿ ವ್ಯಕ್ತಪಡಿಸಲಿ???
ಕಾನೂರು ಹೆಗ್ಗಡತಿಯ “ಗುತ್ತಿ ಮತ್ತು ಹುಲಿಯ”” ಪುಟ್ಟಣ್ಣ ಟೈಗರ” ನ ಸಂಬಂಧ ವನ್ನು ನೋಡಿ. ಅದು ಇಂತದೇ ತಂದೆ ಮಗನ ಸಂಬಂಧವೆನ್ನಿಸುತ್ತದೆ, ಗುತ್ತಿಯ ಮೇಲಿನ ಪ್ರೀತಿ ಸೆಳೆತವನ್ನು ತಡೆಯಲಾಗದ ಹುಲಿಯ ತುಂಗಾ ಪ್ರವಾಹದಲ್ಲು ಧುಮುಕಿ, ನದಿಯ ಸೆಳೆತ ದಲ್ಲಿ ಸಿಲುಕಿ ದೂರದೂರವಾಗಿ ಮುಳುಗುತ್ತಿದ್ದರೆ ಅತ್ತ ದೋಣಿಯಲ್ಲಿನ ಗುತ್ತಿಯ ಚಡಪಡಿಕೆ ಓದುಗನಿಗೆ ಕಣ್ಣೀರು ತರಿಸುವುದು.
ತನ್ನ ಬೇಟೆನಾಯಿಯ ಹತ್ಯೆಗೆ ಶೋಕಿಸುವ ಪುಟ್ಟಣ್ಣ,ಮಕ್ಕಳಂತೆ ಕಣ್ಣೀರು ಮಿಡಿವುದರ ಹಿಂದಿರುವ ಶಕ್ತಿಗೆ ಪ್ರೀತಿಯೆಂದೇ ಹೆಸರು.
ಈ ಪ್ರೀತಿಯ ಭಾಗ್ಯದಿಂದ ವಂಚಿತನಾದವನನ್ನು ತಬ್ಬಲಿ ಯೆನ್ನುತ್ತಾರೆ, ತಬ್ಬಿಕೊಳ್ಳಲು ಯಾರೂ ಯಿರದವನ ಸ್ಥಿತಿಯನ್ನು ಊಹಿಸಿಕೊಳ್ಳಲಾಗಲ್ಲ,ತಬ್ಬಿ ನೆತ್ತಿಯನ್ನು ಆಘ್ರಾಣಿಸುವ ತಂದೆ .ತಬ್ಬಿ ಕೆನ್ನೆ ಸವರುವ ತಾಯಿ, ತಬ್ಬಿ ಬೆನ್ನು ತಟ್ಟುವ ಗುರುಹಿರಿಯರು, ತಬ್ಬಿ ಎದೆಗೆ ಕೆನ್ನೆಯೊತ್ತುವ ಮಡದಿ,ತಬ್ಬಿ ತೋಳು ಹಿಡಿಯುವ ಮಗಳು ..ಈ ಬಗೆಯ ತಬ್ಬುಗೆಯ ಅನುಭವವಿಲ್ಲದವನ ಮನಸ್ಸು ಅದೆಷ್ಟು ಪ್ರಕ್ಷುಬ್ಧ ವಾಗಿರುತ್ತದೆಂದು ಊಹಿಸಲೇ ಅಸಾಧ್ಯ.ಇದಕ್ಕೆ ಉದಾಹರಣೆಯಾಗಿ ಬೊಳುವಾರರ “ಓದಿರಿ” ಕಾದಂಬರಿಯ ‌ಒಬ್ಬ ಬಡ ಬಾಲಕ ಮತ್ತವನ ತಮ್ಮ ತಂಗಿಯ ಬದುಕು ನೊಡಬೇಕು, ತಂಗಿಯ ಹಸಿವನ್ನು ನೀಗಿಸುವ ದಾರಿ ಕಾಣದ ಅನಾಥ ಅಣ್ಣ ಒಲೆಯ ಮೇಲೆ ಬರಿದೇ ನೀರನ್ನು ಕಾಯಿಸುತ್ತಾನೆ , ಮೊದಲು ಕಾತರದಿಂದ ಕಾಯುವ ತಂಗಿಗೆ ಹತಾಶೆ!! ತಂಗಿಯನ್ನು ಸಮಾಧಾನಿಸಲು ಅಣ್ಣ ಕುದಿವ ನೀರಿಗೊಂದು ಕಲ್ಲು ಹಾಕಿದಾಗ,ಅದು ಕುದಿವಾಗ ಕಣಕಣ ಶಬ್ದ ಬಂದು ತಂಗಿಯ ಕಣ್ಣರಳುತ್ತದೆ,ಕೊನೆಗೆ!!
ಆಕೆಯು ಹಸಿವು ಹರಿಯದೇ ಅಳುವಾಗ ಅಲ್ಲಿಗೆ ಬರುವ ಪೈಗಂಬರ್ ಅವರ ನೋವನ್ನಾಲಿಸಿ ಅವರಿಗೆ‌ ಪ್ರತಿನಿತ್ಯ ಮೂರು ರೊಟ್ಟಿ ಕೊಡುವ ವಾಗ್ದಾನ ಮಾಡುತ್ತಾರೆ.
ಇದು ಮಾನವ ದಯೆ ,ಈ ಚಿತ್ರಗಳು ನಮ್ಮ ಜೀವನದ ಉನ್ನತ ಆಸೆಯನ್ನು ಉದ್ದೀಪಿಸುತ್ತವೆ
ಈ ಪ್ರೀತಿ ಉತ್ತರ ದೃವದಿಂ ದಕ್ಷಿಣ ದೃವಕೂ ಬೀಸುವ ಚುಂಬಕ ಗಾಳಿ. ಇದು ಬೀಸುವ ಪರಿಣಾಮವಾಗಿಯೇ ಹೂವು ಅರಳುತ್ತದೆ,ಹೂವನ್ನು ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ‌ ಹೊಸೆಯಿಸುತ್ತದೆ.‌ ಬೆಳ್ಳಿ ನಕ್ಷತ್ರ ದಂತೆ “ನನ್ನೀ ಜೀವನ ಸಮುದ್ರ ಯಾನಕೆ ಚಿರದ್ರುವತಾರೆ”ಯಂತೆ ದಾರಿ ದೀವಿಗೆಯಾಗುತ್ತದೆ.
ಇಂತಹ ಪ್ರೀತಿ ಶಾಶ್ವತವಾದುದು ,ಕಾಲನ ಹೊಡೆತಕ್ಕೆ ಸಿಕ್ಕಿ ನಮ್ಮ ಗುಲಾಭಿ ತುಟಿಗಳು , ಮುಖದ ರಂಗೂ ಮಾಸಬಹುದು ಆದರೆ ಪ್ರೀತಿ ಶಾಶ್ವತವಾಗಿರುತ್ತದೆ,ಯಾಕೆಂದರೆ ಇದು ಬದಲಾಗದ ಮೌಲ್ಯ, ಹಾಗಾಗಿ ಈ ವಿಶ್ವಾಸ ದಲ್ಲಿಯೇ ಶೇಕ್ಸ್‌ಪಿಯರ್‌ ಹೇಳುತ್ತಾನೆ”if it be error and upon me proved. I never writ ,nor no man ever loved”
ಇದು ಶ್ರೇಷ್ಟ ಮೌಲ್ಯ ವಾದ್ದರಿಂದಲೆ ಇಡೀ ಜಗತ್ತಿನ ಜನ‌ಇದನ್ನ ಹಿಂಬಾಲಿಸುತ್ತಿದ್ದಾರೆ.
ಎಲ್ಲ ಧರ್ಮಗಳ ಸಾರವೂ ಪ್ರೀತಿ. “ವಸುಧೈವ ಕುಟುಂಬಕಂ” “love thy neighbor “”ನಿನ್ನ ನೆರಮನೆಯವನು ಉಪವಾಸವಿರುವಾಗ ನೀನು ಊಟಮಾಡಬೇಡ”
ಈ ಎಲ್ಲಾ ಮಾತುಗಳ ಸಾರವೂ ಮಾನವ ಪ್ರೀತಿಯನ್ನೆ ಸಾರುತ್ತದೆ, ಈ ಪ್ರೀತಿ,ದಯೆಯನ್ನು ನಮ್ಮ ಅಂತಂಗದಲ್ಲಿ ಧರಿಸಿದರೆ ನಮಗೆ ಶೋಭೆ ಮಾನವೀಯತೆಗೊಂದು ಸಾರ್ಥಕತೆ,ಬಾಳಿಗೊಂದು ಗುರಿ,ನಮಗೊಂದು ಗರಿ!

ಹರೀಶ್ .ಟಿ.ಜಿ

LEAVE A REPLY

Please enter your comment!
Please enter your name here