ಮುಂಜಾನೆ – ಮುಸ್ಸಂಜೆಯ ವಾಕ್ ನಲ್ಲಿ ಅರಳಿದ ಪ್ರೀತಿ

0
195
Tap to know MORE!

ಕಾಲೇಜು ಆರಂಭವಾಗಲು 2 ದಿನ ಉಳಿದಿತ್ತು. ಬೆಂಗಳೂರಿನಿಂದ ನನ್ನ ದೊಡ್ಡ ದೊಡ್ಡ ಲಗೇಜು ಹೊತ್ತು ಉಜಿರೆಯ ಕಾಲೇಜಿಗೆ ಹೋಗಲು ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದೆ. ಯಾಕೆಂದರೆ ನನಗೆ ರೈಲಿನಲ್ಲಿ ಹೋಗಬೇಕೆಂಬ ಆಸೆ ಇತ್ತು. ಹಾಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆ. ಮೊದಲ ಬಾರಿ ನನ್ನ ರೈಲ್ ಪ್ರಯಾಣವಾದ್ದರಿಂದ ಭಯ ಕೂಡ ಇತ್ತು. ನನಗಿಂತ ಹೆಚ್ಚು ಭಯ ನನಗೆ ಬೀಳ್ಕೊಡುಗೆ ನೀಡಲು ಬಂದ ಅಪ್ಪ ಅಮ್ಮನಿಗಿತ್ತು.

ನನ್ನ ಸೀಟ್ ಪಕ್ಕ ಯಾರೂ ಇರಲಿಲ್ಲ, ಹಾಗಾಗಿ ನಾನು ಒಬ್ಬಳೇ ಹಾಯಾಗಿರಬಹುದು ಎಂದು ಅಲ್ಲೇ ಕಾಲು ಚಾಚಿ ಕುಳಿತುಕೊಳ್ಳಲು ಹೊರಟೆ. ಮೇಲಿನ ಸೀಟಿನಿಂದ ಒಬ್ಬ ವ್ಯಕ್ತಿ ಹಾಯ್ ಎಂದ. ಒಮ್ಮೆ ಗಾಬರಿಯಾಯಿತು ಯಾರಿವನು ಎಂದು ನೋಡಿದರೆ ಅವನೂ ಬೆಂಗಳೂರಿನಿಂದ ಉಜಿರೆಗೆ ಹೊರಟವನು. ಅದೂ ಕೂಡ ನನ್ನದೇ ಕಾಲೇಜು. ಆದರೆ ನಾನು ಎಂ.ಸಿ.ಜೆ, ಅವನು ಇಂಜಿನಿಯರಿಂಗ್. ಕ್ಷೇತ್ರದಲ್ಲಿ ಅಜಗಜಾಂತರ ವ್ಯತ್ಯಾಸ.

ಮತ್ತೆ ಅವನ ನೆನಪು ಕಾಡಿತು.‌‌..

ಮಾತಾಡುತ್ತಾ ಮಾತಾಡುತ್ತಾ ರೈಲಿನಲ್ಲೇ ಗೆಳೆಯರಾದೆವು. ಮೊಬೈಲ್ ನಂಬರ್ ವಿನಿಮಯವಾಯಿತು. ದಿನ ಕಳೆದಂತೆ ಮೆಸೇಜ್, ಕರೆ ಹಾಗೂ ಸಿಕ್ಕಾಗ ಮಾತನಾಡುವುದು ಹೆಚ್ಚಾಯಿತು. ಅವನಿಗಾಗಿ ಹುಡುಕಿಕೊಂಡು ಹೋಗಿ ಮಾತನಾಡಿಸುತ್ತಿದ್ದೆ. ಹಾಗಾಗಿ ನಮ್ಮ ಗೆಳೆತನ ಗೆಳೆತನವಾಗಿ ಉಳಿಯದೆ ಪ್ರೀತಿಗೆ ಬದಲಾಯಿತು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಜೊತೆಗೆ ಇಬ್ಬರ ಕನಸೂ ಒಂದೇ ಆಗಿತ್ತು. ಒಂದೊಳ್ಳೆಯ ಉದ್ಯೋಗ, ಅದರ ಜೊತೆಗೆ ದೇಶ ಸುತ್ತಾಡಬೇಕೆಂಬ ಕನಸು.
ಆದರೆ ಕಾಲೇಜು ದಿನಗಳಲ್ಲಿ ಎಲ್ಲಿಯೂ ಸುತ್ತಾಡಲು ಆಗುತ್ತಿರಲಿಲ್ಲ. ಆದರೆ ಮುಂಜಾನೆ ಹಾಗೂ ಸಂಜೆ ಒಂದು ವಾಕ್ ಹೋಗುತ್ತಿದ್ದೆವು. ಮುಂಜಾನೆ 5.30ರ ಸುಮಾರಿಗೆ ಮನೆ ಬಿಟ್ಟರೆ 8 ಗಂಟೆಗೆ ವಾಪಾಸು ಬರುತ್ತಿದ್ದೆವು. ಅವನು ಅವರ ಅಣ್ಣನ ಮನೆಯಲ್ಲಿ ಇದ್ದ. ನಾನು ನನ್ನ ಚಿಕ್ಕಮ್ಮನ ಮನೆಯಲ್ಲಿದ್ದೆ. ಇಬ್ಬರೂ ಮುಂಜಾನೆ ಮನೆಯಿಂದ ಹೊರಗೆ ಬರಲು ಹರಸಾಹಸ ಪಡುತ್ತಿದ್ದೆವು. ವಾರದ 3 ದಿನ ಮುಂಜಾನೆ ವಾಕ್, ಇನ್ನು 3 ದಿನ ಸಂಜೆ ಹಾಗೂ ಭಾನುವಾರ ಇಬ್ಬರೂ ದೇವಸ್ಥಾನಕ್ಕೆ ಹೋಗಿ ಬರುವುದು ರೂಢಿ. ಒಟ್ಟಾರೆ ನಮಗೆ ಒಂದು ದಿನವೂ ಒಬ್ಬರನ್ನೊಬ್ಬರು ಬಿಟ್ಟಿರುವುದು ಕಷ್ಟವಾಗಿತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ವಾಕ್ ಆರಂಭವಾದದ್ದು ನನ್ನಿಂದ. ಆತನ ಬಳಿ ನನ್ನ ಪ್ರೀತಿ ಹೇಳಿಕೊಳ್ಳಬೇಕೆಂದು ಹಪಹಪಿಸುತ್ತಿದ್ದೆ. ಹಾಗೇ ಒಂದು ದಿನ ಕೇಳಿದೆ. ವಾಕ್ ಹೋಗೋಣ್ವ ಎಂದು. ಆತನಿಂದಲೂ ಗ್ರೀನ್ ಸಿಗ್ನಲ್ ಬಂತು. ಮೊದಲ ವಾಕ್ ನಲ್ಲಿ ಕೇವಲ ಮಾತು ಅಷ್ಟೇ. ಅದೂ ಕೂಡ ಇಬ್ಬರಿಗೂ ನಾಚಿಕೆ ಸ್ವಭಾವ. 1 ಗಂಟೆಯ ವಾಕ್ ನಲ್ಲಿ 4 ರಿಂದ 5 ಸಾಲು ಮಾತಾಡಿರಬಹುದು ಅಷ್ಟೇ. ಆದರೂ ನನ್ನವನ ಜೊತೆ ಮೊದಲ ವಾಕ್ ಎಂಬ ನೆನಪಿಗಾಗಿ ಫೋಟೋ ಬೇಕಿತ್ತು. ಹೇಗೆ ಕೇಳಲಿ, ಧೈರ್ಯ ಮಾಡಿ ಮೊಬೈಲ್ ಕ್ಯಾಮರಾ ತೆಗೆದೆ. ಸುಮ್ಮನೆ ಸೂರ್ಯೋದಯದ ಫೋಟೋ ತೆಗೆದ ಹಾಗೆ ಮಾಡಿದೆ. ನಂತರ ನಾವಿಬ್ಬರೂ ಒಂದು ಸೆಲ್ಫಿ ತೆಗೆಯುವ ಅಂದೆ. ಅವನು ತುಂಬಾ ಎತ್ತರದ ಮನುಷ್ಯ. ಆ ದಿನ ನಾನು ತೆಗೆದ ಫೋಟೊದಲ್ಲಿ ಆತನ ತಲೆಯೇ ಮಾಯವಾಗಿತ್ತು. ಅದೂ ಕೂಡ ಅವನ ಹತ್ತಿರ ನಿಂತು ಫೋಟೋ ತೆಗೆಯುವ ಭಯದಲ್ಲಿ ಫೋಟೋ ಬ್ಲರ್ ಆಗಿತ್ತು. ಆದರೂ ನೆನಪಿಗಾಗಿ ಮೊದಲ ಫೋಟೋ ಇಟ್ಟುಕೊಂಡಿದ್ದೇನೆ.

ಇಬ್ಬರಿಗೂ ಪ್ರೀತಿ ಇತ್ತು. ಆದರೆ ಹೇಳಿಕೊಳ್ಳುತ್ತಿರಲಿಲ್ಲ. ಒಂದು ದಿನ ಮುಂಜಾನೆ ವಾಕಿಂಗ್ ನಲ್ಲಿ ಪ್ರೀತಿ ನಿವೇದನೆಯನ್ನು ಮಾಡಿದ. ನಾನು ಆ ಪ್ರೀತಿಯನ್ನು ಒಪ್ಪಿಕೊಂಡದ್ದು ಸಂಜೆಯ ವಾಕ್ ನಲ್ಲಿ. ಅವನು ನನಗೆ ಮೊದಲ ಉಡುಗೊರೆ ಕೊಟ್ಟದ್ದು ಮುಂಜಾನೆಯ ವಾಕ್ ನಲ್ಲಿ. ನಾನು ನನ್ನ ಮೊದಲ ಉಡುಗೊರೆ ಕೊಟ್ಟದ್ದು ಸಂಜೆಯ ವಾಕ್ ನಲ್ಲಿ. ಹೀಗೆ ನಮ್ಮ ಪ್ರೀತಿ ಶುರುವಾಗಲು ಕಾರಣವಾದದ್ದು ಮುಂಜಾನೆ ಮತ್ತು ಸಂಜೆಯ ವಾಕಿಂಗ್.

ಮುಂಜಾನೆ ವಾಕಿಂಗ್ ಹೋಗಿ ದೂರದ ಒಂದು ಪುಟ್ಟ ಅಂಗಡಿಯಲ್ಲಿ ಚಹಾ ಕುಡಿದು ವಾಪಾಸಾಗುತ್ತಿದ್ದೆವು. ಸಂಜೆ ಐಸ್ಕ್ರೀಮ್, ಚಾಟ್ಸ್ ತಿನ್ನುವುದು. ಸ್ವಲ್ಪ ಏನಾದರೂ ನಮ್ಮಿಬರ ನಡುವೆ ಜಗಳವಾಗಿದ್ದರೆ ಒಬ್ಬರಿಗೊಬ್ಬರು ತಿಂಡಿ ತಿನ್ನಿಸಿ ಸರಿಹೋಗುತ್ತಿದ್ದೆವು. ಒಂದು ದಿನ ವಾಕಿಂಗ್ ಇಲ್ಲದಿದ್ದರೆ ಆ ದಿನ ಪೂರ್ತಿ ಇಬ್ಬರಿಗೂ ಬೇಸರ.
ಈ ಲಾಕ್ ಡೌನ್ ನಲ್ಲಿ ಇಬ್ಬರೂ ದೂರ ದೂರ ಇದ್ದೇವೆ. ಮುಂಜಾನೆ ಎದ್ದೊಡನೆ ನಮ್ಮ ಹಿಂದಿನ ವಾಕಿಂಗ್ ಫೋಟೋ ಕಳುಹಿಸುವುದು, ಅದರ ಕುರಿತು ಮಾತನಾಡುವುದು, ಗೆಳೆಯರ ಕೈಯಲ್ಲಿ ಸಿಕ್ಕಿಬಿದ್ದ ಘಟನೆಗಳ ನೆನಪುಗಳನ್ನು ಮೆಲುಕು ಹಾಕುವುದು ಹೇಗೆ ಮೆಸೇಜ್, ಕರೆ ಮೂಲಕ ದಿನನಿತ್ಯ ಮಾತನಾಡುತ್ತಿರುತ್ತೇವೆ.
ಅವನು ನನ್ನ ಜೀವನದಲ್ಲಿ ಬಂದ ನಂತರ ಹಲವಾರು ಬದಲಾವಣೆಗಳಾಗಿವೆ. ಈ ಪ್ರೀತಿ ಕೊನೆಯವರೆಗೂ ಇರಬೇಕು ಎಂದು ಆಸೆ. ಹಾಗೇ ಅವನ ಜೊತೆ ಹೀಗೇ ಬದುಕಬೇಕೆಂಬ ಸಾಕಷ್ಟು ಕನಸು ಕಂಡಿದ್ದೇನೆ. ಅವನೂ ಕೂಡ. ಮುಂದೆ ನಾವಿಬ್ಬರು ದೇಶ ಸುತ್ತಲು ಈಗಲೇ ಎಲ್ಲಿಗೆ ಹೋಗಬೇಕು, ಯಾವಾಗ ಹೇಗೆ ಹೋಗಬೇಕು ಎಂದು ಯೋಜನೆ ನಿರೂಪಿಸಿಕೊಂಡಿದ್ದಾನೆ. ಮುಂದೆ ಜೊತೆಗೆ ಜೀವನ ಸಾಗಿಸಬೇಕೆಂಬ ಕನಸನ್ನು ನನಸಾಗಲು ಈಗ ಶ್ರಮಿಸುತ್ತಿದ್ದೇವೆ.

ಚೈತ್ರಾ ರಾವ್
ಎಸ್.ಡಿ.ಎಂ.ಕಾಲೇಜು ಉಜಿರೆ.

LEAVE A REPLY

Please enter your comment!
Please enter your name here