ಹಳೆಯಂಗಡಿ :- ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಇದರ ವತಿಯಿಂದ “ಫಿಟ್ ಇಂಡಿಯಾ ಅಭಿಯಾನಕ್ಕೆ” ಚಾಲನೆ ನೀಡಲಾಯಿತು. ಅಭಿಯಾನದ ಉದ್ಘಾಟನಾ ಸಮಾರಂಭವು ಅ.18ರ ಭಾನುವಾರ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲದ ಸಹಕಾರದಲ್ಲಿ ಜರುಗಿತು.
ಅಭಿಯಾನಕ್ಕೆ ಚಾಲನೆ ನೀಡಿದ ಕಟೀಲು ಕನ್ಸ್ಟ್ರಕ್ಷನ್ ಇದರ ಮಾಲಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಶ್ರೀ ಅಭಿಲಾಷ್ ಶೆಟ್ಟಿ ಕಟೀಲು, “ಆರೋಗ್ಯವಂತ ದೇಹ ಇದ್ದ ಕಡೆ ಮಾತ್ರವೇ ಆರೋಗ್ಯವಂತ ಮನಸ್ಸು ಮತ್ತು ಆಲೋಚನೆಗಳು ಇರುತ್ತವೆ. ಫಿಟ್ ಇಂಡಿಯಾ ಆಂದೋಲವನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು, ಇದರಲ್ಲಿ ಬಂಡವಾಳ ಇಲ್ಲ. ಆದರೆ ಲಾಭ ಮಾತ್ರ ಅಸೀಮವಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ದೇಶ ಎಲ್ಲವೂ ಆರೋಗ್ಯವಂತವಾಗಿರುತ್ತದೆ. ‘ನಾನು ಫಿಟ್, ನನ್ನ ದೇಶ ಫಿಟ್’ ಎಂಬಂತೆ ಎಲ್ಲರೂ ಸದೃಢರಾಗಿರಿ” ಎಂದು ತಿಳಿಸಿದರು.
ಸ್ವಾರ್ಥದಿಂದ ಸ್ವಾಸ್ಥದ ಕಡೆಗೆ ಭಾರತವನ್ನು ಕೊಂಡೊಯ್ಯುವ ನಿಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಆಗಸ್ಟ್ 29 2019ರಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳೂರು ವಹಿಸಿದ್ದರು. ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಯುವ ಸಮನ್ವಯಾಧಿಕಾರಿ ಶ್ರೀ ರಘುವೀರ್ ಸೂಟರಪೇಟೆ ಉಪಸ್ಥಿತರಿದ್ದರು.
ಕಾರ್ಯಾಗಾರದ ಧೇಯ್ಯ ವಾಕ್ಯ, “ಕೋವಿಡ್ 19 – ಭಯ ಬೇಡ ಎಚ್ಚರವಿರಲಿ” ಎಂಬ ಶೀರ್ಷಿಕೆ ಮತ್ತು ಫಿಟ್ ಇಂಡಿಯಾ ಸಂಬಂಧ ಪಟ್ಟ ನಾಮ ಫಲಕಗಳನ್ನು ಪ್ರದರ್ಶಿಸಿ ವಿಶೇಷವಾಗಿ ಉದ್ಘಾಟಿಸಲಾಯಿತು.
ಅಧ್ಯಕ್ಷೀಯ ಮಾತುಗಳನ್ನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರು “ಇಂದಿನ ತಂತ್ರಜ್ಞಾನ ಯುಗದಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ನಾವು ಈಗ ನಡೆಯುವುದನ್ನು ಕಡಿಮೆ ಮಾಡಿದ್ದೇವೆ. ಅದೇ ತಂತ್ರಜ್ಞಾನ ನಾವು ಆಲಸಿ ಆಗಿರುವುದನ್ನೂ ತೋರಿಸುತ್ತಿದೆ. ನಾವು ಎಷ್ಟುಹೆಜ್ಜೆ ನಡೆದಿದ್ದೇವೆ ಎಂದು ಮೊಬೈಲ್ ಆ್ಯಪ್ ಮೂಲಕ ಲೆಕ್ಕ ಹಾಕುವ ಹಂತ ತಲುಪಿದ್ದೇವೆ. ಫಿಟ್ನೆಸ್ ಬಗ್ಗೆ ಮಾತನಾಡುವುದು ಈಗ ಒಂದು ಫ್ಯಾಷನ್ ಆಗಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ. ಯುವ ಜನಾಂಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವ ಕಾರಣ ವಿವಿಧ ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕರು ತಮ್ಮ ದೈನಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ “ಫಿಟ್ ಇಂಡಿಯಾ ನಡಿಗೆ ಜಾಥಾ”
ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಫಿಟ್ ಇಂಡಿಯಾ ನಡಿಗೆ ಜಾಥವನ್ನು ಭಾನುವಾರ ಬೆಳಗ್ಗೆ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮತ್ತು ಮಹಿಳಾ ಮಂಡಲದ ಸಹಕಾರದಲ್ಲಿ ಯುವಕ ಮಂಡಲದ ಪ್ರಾಂಗಣದಿಂದ ಹಳೆಯಂಗಡಿ ಪೇಟೆಯವರೆಗೆ ನಡೆಯಿತು.
ಫಿಟ್ ಇಂಡಿಯಾ ನಡಿಗೆಯ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರೂ ಮತ್ತು ಕಟೀಲ್ ಕನ್ಸ್ಟ್ರಕ್ಷನ್ ಇದರ ಮಾಲಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಶ್ರೀ ಅಭಿಲಾಷ್ ಶೆಟ್ಟಿ ಕಟೀಲು ಇವರು ಚಾಲನೆಯನ್ನು ನೀಡಿದರು.
ವೇದಿಕೆಯಲ್ಲಿ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಪ್ರಕಾಶ್ ಏನ್ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚಿಲಿಂಬಿ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಸ್ಟ್ಯಾನಿ ಡಿ ಕೋಸ್ಟಾ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು.
ಯುವಕ ಮಂಡಲದ ಸದಸ್ಯರಾದ ಶ್ರೀ ಕಿರಣ್ ರಾಜ್ ಬಿ ಪ್ರಾರ್ಥನೆಯನ್ನು ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್ ಧನ್ಯವಾದ ಸಮರ್ಪಿಸಿದರು ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ನಿರೂಪಿಸಿದರು.