ಬಿ.ಸಿ.ರೋಡ್ : ಕರಾವಳಿ ಜಿಲ್ಲೆಗಳಲ್ಲಿ ರೌಡಿ ಶೀಟರ್ ಗಳ ಹತ್ಯೆಯ ಸರಣಿ ಮುಂದುವರಿದಿದೆ . ಇಂದು ಬಂಟ್ವಾಳ ಸಮೀಪದ ಮೆಲ್ಕಾರ್ ಬಳಿಯ ಬೋಗುಡಿ ಎಂಬಲ್ಲಿ ಯುವಕನೊಬ್ಬನ ಹತ್ಯೆಯಾಗಿದೆ. ಕಲ್ಲಡ್ಕ ನಿವಾಸಿ ರೌಡಿ ಶೀಟರ್ ಚೆನ್ನಾ ಫಾರೂಕ್ ಅಲಿಯಾಸ್ ಉಮ್ಮರ್ ಫಾರೂಕ್ (35) ಹತ್ಯೆಯಾದ ಯುವಕ.
ಫಾರೂಕ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ರೌಡಿಶೀಟರ್ ಆಗಿದ್ದ. ಈತನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿರುವ ತಂಡವೊಂದು ಕಡಿದು ಕೊಲೆಗೈದು ಪರಾರಿಯಾಗಿದೆ. ಉಡುಪಿಯ ಹಿರಿಯಡ್ಕದಲ್ಲಿ ಇನ್ನ ಕಿಶನ್ ಹೆಗ್ಡೆ ಎಂಬಾತನ ಹತ್ಯೆಯ ಮೂಲಕ ಇಲ್ಲಿನ ಪಾತಕ ಲೋಕದ ಹತ್ಯೆಯ ಸರಣಿ ಆರಂಭಗೊಂಡಿತ್ತು. ಇದಾದ ಬಳಿಕ ಬೆಂಗಳೂರಿನಲ್ಲಿ ಕರಾವಳಿ ಮೂಲದ ಮನೀಶ್ ಶೆಟ್ಟಿ ಎಂಬಾತನ ಹತ್ಯೆ ಆತನ ಬಾರ್ ನ ಮುಂಬಾಗ ನಡೆದಿತ್ತು. ಮೊನ್ನೆಯಷ್ಟೇ ತುಳು ಚಿತ್ರ ನಟ ಹಾಗೂ ಬಡ್ಡಿ ವ್ಯಾಪರಿ ಸುರೇಂದ್ರ ಭಂಡಾರಿ ಅಲಿಯಾಸ್ ಸುರೇಂದ್ರ ಬಂಟ್ವಾಳರ ಹತ್ಯೆ ನಡೆದಿತ್ತು .
ಇದನ್ನೂ ನೋಡಿ: ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ ಬರ್ಬರ ಹತ್ಯೆ
ಇದೀಗ ಈ ಕೊಲೆಗಾರರ ಬಂಧನ ಆಗುವ ಮೊದಲೇ ಮತ್ತೊಬ್ಬ ರೌಡಿ ಶೀಟರ್ ನ ಹತ್ಯೆ ನಡೆಸಲಾಗಿದೆ. ಫಾರೂಕ್ ಬೈಕ್ ನಲ್ಲಿ ತೆರಳುತಿದ್ದಾಗ ಆತನ ಸ್ನೇಹಿತರೇ ತಲವಾರಿನಿಂದ ಕಡಿದು ಈ ಕೊಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಸ್ನೇಹಿತನೊಬ್ಬನ ಜೊತೆ ಆತನಿಗೆ ಉಂಟಾದ ವೈಮನಸ್ಯದಿಂದ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಹತ್ಯೆಗೂ ಈ ಹಿಂದಿನ ಮೂರು ಹತ್ಯೆಗೂ ಏನಾದರೂ ಸಂಬಂಧ ಇದೇಯೇ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಹತ್ಯೆಯ ಬಳಿಕ ಜಿಲ್ಲೆಯ ಪೊಲೀಸ್ ಇಲಾಖೆಯ ತಲೆ ನೋವು ಇನ್ನಷ್ಟು ಹೆಚ್ಚಾಗಿದೆ . ಕೃತ್ಯ ನಡೆದ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ , ಎಸ್.ಐ.ಪ್ರಸನ್ನ, ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.