ಬದಲಾವಣೆಯ ಹಾದಿಯಲ್ಲಿ….

0
165
Tap to know MORE!

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಇಲ್ಲಿನ ಜನರ ಜೀವನ ಶೈಲಿಯು ವಿವಿಧತೆಯನ್ನೊಳಗೊಂಡಿದೆ. ಹಳ್ಳಿಯನ್ನು ತ್ಯಜಿಸಿ ತಮ್ಮ ಅಸ್ತಿತ್ವವನ್ನು ನಗರದ ವ್ಯಾಮೋಹಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿದ್ದಾರೆ ಈ ಬುದ್ಧಿಜೀವಿಗಳು.

ಆದರೆ ಇತ್ತೀಚಿನ ದಿನಗಳಲ್ಲಿ ಅದೇನೋ ಸ್ವಲ್ಪ ಮಟ್ಟಿನ ದೇಶಿಯತೆ ನಮ್ಮೆಲ್ಲರಲ್ಲಿ ಎದ್ದು ಕಾಣುತ್ತಿದೆ. ನಮ್ಮ ನೆಲ-ಜಲದ ಬಗ್ಗೆ ಕೊಂಚ ಮಟ್ಟಿನ ಸ್ನೇಹ ಉಕ್ಕಿ ಹರಿದಂತೆ ಭಾಸವಾಗುತ್ತಿದೆ ನನಗೆ. ಇವೆಲ್ಲವೂ ಸಾಧ್ಯವಾಗುತ್ತಿದೆ ಈ ಕೊರೊನಾ ಎಂಬ ಮಹಾಮಾರಿಯಿಂದ . ಈ ಕೊರೊನಾ ವಾಸ್ತವವಾಗಿ ಅದೆಷ್ಟು ಕಷ್ಟ ನಷ್ಟ ತಂದೊಡ್ಡಿದೆಯೆಂದು ಹೇಳತೀರದು. ಆದರೆ ಜಗತ್ತಿನ ಜನಜೀವನ ಅದರಲ್ಲಿಯೂ ಭಾರತದ ಜನರ ಜೀವನ ಶೈಲಿಯೂ ಬದಲಾಗುತ್ತಿದೆಯೆಂದು ನನಗನಿಸುತ್ತಿದೆ.

ಈ ಮಹಾಮಾರಿಯ ಹಾವಳಿ ಅದೆಷ್ಟು ಇದೆ ಎಂದರೆ, ಕುರುಕುಲು ತಿಂಡಿ, ಪಿಜ್ಜಾ, ಬರ್ಗರ್ ನಲ್ಲೇ ಜೀವಿಸುತ್ತಿದ್ದ ಜನ, ಹಿತ್ತಲಿನ ಬಾಳೆ ಕಾಯಿ, ಬಾಳೇ ಹೂ, ಚಿಗುರು ಸೊಪ್ಪಿನ ತಂಬುಳಿ(ದಿನಕ್ಕೊಂದರಂತೆ), ಹಾಗಲಕಾಯಿ, ದಾಸವಾಳ ಇತ್ಯಾದಿಗಳಿಗೆ ತಮ್ಮ ಬಾಯಿರುಚಿಯನ್ನೇ ಬಡಲಾಯಿಸುತ್ತಿರುವರು. ದಿನಕ್ಕೊಮ್ಮೆ ಪೇಟೆಗೆ ಹೋಗದಿದ್ದರೆ ಜೀವನವೇ ಅಪೂರ್ಣ ಎನ್ನುತ್ತಿದ್ದವರು ಮನೆಯಲ್ಲಿಯೇ ಇದ್ದು ಕುಂಟೆಬಿಲ್ಲೆ, ಲಗೋರಿ, ಲೂಡೊ, ಚದುರಂಗ ಇದಕ್ಕೆಲ್ಲ ನಮ್ಮ ದಿನಚರಿಯನ್ನು ಸರಿಯಾಗಿಸುತ್ತಿರುವೆವು. ಇನ್ನು ಜೋಗಜಲಪಾತ, ಸಮುದ್ರಕ್ಕೆ ಹೋಗುವ ಆಸೆಯನ್ನು ತೋಟದ ಝರಿ ತೊರೆಗಳಲ್ಲೇ ನೆರವೇರಿಸಿಕೊಳ್ಳುತ್ತಿರುವೆವು. ಅತಿಥಿ ದೇವೋ ಭವ ಎನ್ನುತ್ತಿದ್ದವರು ಅತಿಥಿ ಬಂದಾಗ ಅಂತರ ಕಾಯ್ದುಕೊಳ್ಳುತ್ತಿದ್ದೇವೆ.

ದೂರದ ದೇಶದಲ್ಲಿ ನಮ್ಮ ಅಸ್ತಿತ್ವವನ್ನು ದೃಢೀಕರಿಸಲು ಹೋಗಿದ್ದ ಮನೆಯ ಮಕ್ಕಳು ಇದೀಗ ಮನೆಯಲ್ಲಿರುವ ಮುದಿ ಜೀವಗಳ ಅಂತರ್ಯವ ಅರಿಯಲು ಪ್ರಯತ್ನಿಸುತ್ತಿರುವರು. ಅದೇ ಹಳೆಯ ತತ್ವಗಳ ಪಾಲನೆಯೊಳು ಹುದುಕುತ್ತಿರುವೆವು ಜೀವನದ ಸತ್ವವನು. ಅದೆಷ್ಟೋ ಮನಸುಗಳ ಮಿಲನ ಈ ಲಾಕ್ ಡೌನ್ ನಿಂದಾಗಿದೆ ಎನ್ನುವುದು ಒಂದೆಡೆಯಾದರೆ, ಕೌಟುಂಬಿಕ ಕಲಹಗಳು ಹೆಚ್ಚುತ್ತಿದೆ ಒಮ್ಮತವ ಕಾಯ್ದುಕೊಳ್ಳದೆ.

ಮನೆಯಲ್ಲೇ ಇದ್ದು ಸ್ವಗ್ರಹ ಶಾಂತಿಯ ಕಾಪಾಡೋಣ..ಕೊರೊನಾ ಸಮರವನ್ನು ನಿರ್ಭಯದಿ ಗೆಲ್ಲೋಣ..

ಚೈತನ್ಯ ಪ್ರಕಾಶ್, ಪಂಜಿಬಲ್ಲೆ

LEAVE A REPLY

Please enter your comment!
Please enter your name here