ಆತ್ಮಹತ್ಯೆಯಂತಾ ಹೀನ ಕೃತ್ಯಕ್ಕೆ ಕೈ ಹಾಕಬೇಡಿ ಗೆಳೆಯರೇ. ಎಲ್ಲರಿಗೂ ದೊರಕದು ಮನುಜ ಜೀವನ. ಇದ್ದುದರಲ್ಲಿ ತೃಪ್ತಿಯ ಕಾಣಲು ಕಲಿಯೋಣ. ಆತ್ಮಸ್ಥೈರ್ಯವ ಬೆಳೆಸಿಕೊಳ್ಳೋಣ. ಹುಟ್ಟುತ್ತಲೇ ತಬ್ಬಲಿಯಾಗುವ ಮಗು ಬೆಳೆಯುವುದಿಲ್ಲವೇ…..ಬೆಳೆದು ತಾನು ಜೀವನ ಸಾಗಿಸುವುದಿಲ್ಲವೇ…ಹುಟ್ಟುತ್ತಲೇ ವಿಕಲಾಂಗರಾದ ಚೇತನರು ಸಾಧನೆಯ ಶಿಖರವನ್ನೇರುವುದಿಲ್ಲವೇ….
ಎಲ್ಲಾ ಇದ್ದು ನಮ್ಮದೇನಿದೆ ಕೊಡುಗೆ…ಅವರ ಜೀವನ ನೋಡಿ ಬದುಕಲ್ಲಿ ಬದಲಾಗಬಾರದೇಕೆ?
ವ್ಯಾಮೋಹಕ್ಕೆ ಒಳಗಾಗಿ ಶ್ರೀಮಂತಿಕೆಯ ಜೀವನ ನಡೆಸುವ ಮನುಜನ ಸ್ಥಿರಾಸ್ತಿ, ಚರಾಸ್ತಿಗಳು ಕೇವಲ ಕ್ಷಣಿಕವಷ್ಟೇ..ಪ್ರವಾಹ ಬಂದಾಗ ಅದು ಶ್ರೀಮಂತ ಬಡವ ಎಂದು ನೋಡುವುದಿಲ್ಲ.ಎಲ್ಲಾ ಸಂಪಾದನೆ ಕೊಚ್ಚಿ ಹೋದಾಗ ನಮ್ಮಲ್ಲೇನಿರುತ್ತೆ ಹೇಳಿ…ಒಬ್ಬ ಶ್ರೇಷ್ಠ ಉದ್ಯಮಿ ತನ್ನ ವ್ಯವಹಾರದಲ್ಲಿ ನಷ್ಟ ಕಂಡಾಗ….ಆತನ ಬಂಡವಾಳ, ಹೂಡಿಕೆ ಎಲ್ಲವನ್ನು ಕಳೆದುಕೊಂಡಾಗ ಆತನ ಸಹಾಯಕ್ಕೆ ಬರುವವರು ಯಾರು ಹೇಳಿ….ಆಗ ಉಳಿಯುವುದು ನಮ್ಮ ಆತ್ಮಸ್ಥೈರ್ಯ ಮಾತ್ರ. ಕೆಸರಿನಲ್ಲೇ ಕಮಲ ಅರಳುವುದು.ಮುಳ್ಳಿನ ನಡುವೆಯೇ ಹೂವು ಅರಳುವುದು.ಕಾರ್ಗತ್ತಲಲ್ಲೇ ನಕ್ಷತ್ರ ಮಿನುಗುವುದು. ಹಾಗೆಯೇ ಕಷ್ಟ ನೋವು ಇದ್ದಾಗ ಮಾತ್ರ ಸಾಧನೆಯ ಮೆಟ್ಟಿಲೇರಲಾಗುವುದು. ಯಾರೂ ಯಾರೀಗೂ ಶಾಶ್ವತವಲ್ಲ ಗೆಳೆಯರೇ ಯಾರನ್ನೂ ನಂಬಿ ಬದುಕಬೇಡಿ. ನಮ್ಮ ಛಲ, ನಮ್ಮ ವಿದ್ಯೆ, ನಮ್ಮ ಆತ್ಮಸ್ಥೈರ್ಯ, ನಮ್ಮ ನಂಬಿಕೆ…. ಇದು ಮಾತ್ರವೇ ನಮ್ಮನ್ನು ಬೆಳೆಸುತ್ತದೆ. ಪ್ರತಿಯೊಂದಕ್ಕೂ ಆಯ್ಕೆಯಿರುವಾಗ ಈ ಬದುಕಿನ ಹಾದಿಯಲ್ಲಿ ಉತ್ತಮ ಜೀವನದ ಹಾದಿಯನ್ನೇಕೆ ಆಯ್ಕೆ ಮಾಡಬಾರದು. ಕಷ್ಟವಿರದ ಮನುಜನಿಲ್ಲ. ದುಃಖವಿರದ ಮನಸ್ಸು ಇಲ್ಲ. ಬಯಸಿದ್ದೆಲ್ಲಾ ಸಿಗುವಂತಿದ್ದರೇ..ಅಂದುಕೊಂಡಿದ್ದೆಲ್ಲಾ ಆಗುವಂತಿದ್ದರೆ ಈ ಪ್ರಪಂಚ ಇಂದು ಹೀಗಿರುತ್ತಿರಲಿಲ್ಲ. ನೋವು , ಕಷ್ಟ, ಏನೇ ಇರಲೀ ಅದನ್ನು ನಾವೇ ಬದಲಾಯಿಸಿಕೂಳ್ಳಬೇಕು.
ಬದುಕಲು ನೂರಾರು ದಾರಿಗಳಿರುವಾಗ…ಬದುಕನ್ನು ಕೊನೆಗಾಣಿಸುವ ಒಂದು ದಾರಿಯನ್ನೇಕೆ ಆಯ್ಕೆಮಾಡಿಕೊಳ್ಳಬೇಕು?? ಹುಟ್ಟು ನಮ್ಮದಲ್ಲ ನಿಜ…ಆದರೇ ಜೀವನ ನಾವಂದುಕೊಂಡಂತೇ ನಡೆಯುವುದು, ನಾವು ಮನಸ್ಸು ಮಾಡಿದಾಗ ಮಾತ್ರ. ಯಾವುದೇ ನಿರ್ಧಾರ ಮಾಡುವಾಗ ದುಡುಕದಿರಿ…ನೂರು ಸಲ ಯೋಚಿಸಿ…ಆತ್ಮೀಯರೊಡನೆ ಚರ್ಚಿಸಿ….ನಿರ್ಧರಿಸುವ ಮೊದಲು ಅವಕಾಶಗಳನ್ನು ತಿಳಿಯಿರಿ. ಬದುಕಿಗೊಂದು ಅರ್ಥವಿದೆ. ಅದನ್ನು ನಮ್ಮದೇ ಆದ ಸೂತ್ರದ ಮೂಲಕ ಸಾಗಿಸಬೇಕು. ಇನ್ನೊಬ್ಬರಂತೆ ಬದುಕಬೇಕೆಂದು ಹಂಬಲಿಸದಿರಿ. ನಮ್ಮಂತೆ ಬದುಕಲು ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕೋಣ. ನೀರಮೇಲಿನ ಗಳ್ಳೆಯಂತೆ ಈ ಬದುಕು. ಇರುವಷ್ಟು ದಿನ ತೃಪ್ತಿಯ ಜೀವನ ನಡೆಸೋಣ. ಇನ್ನೊಬ್ಬರಿಗೆ ಮಾದರಿಯಾಗೋಣ. ಪರೋಪಕಾರಿ ಮನೋಭಾವನೆ ಬೆಳೆಸಿಕೊಳ್ಳೋಣ. ಬದುಕಿಗೊಂದು ಅರ್ಥವನ್ನು ಕಲ್ಪಿಸಿಕೊಡೋಣ. ನಾವು ಬದುಕೋಣ….ಬೆಳೆಯೋಣ….ಇನ್ನೊಬ್ಬರನ್ನೂ ಬೆಳೆಸೋಣ.
-ಚೈತ್ರ ಸುವರ್ಣ