” ಬದುಕಿನ ಚಂದ”

0
268
Tap to know MORE!

ಬೆಳಗ್ಗೆ ಎಚ್ಚರವಾದಲ್ಲಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಮನಸ್ಸನ್ನು ವ್ಯತ್ಯಸ್ತಗೊಳಿಸಿದೆ.ಬೆಳಗ್ಗೆಯಿಂದ ಮಾಡಬೇಕಾದ ಕೆಲಸಗಳನ್ನು ಒಂದೊಂದಾಗಿ ಮಲಗಿದಲ್ಲಿಂದಲೇ ‌ನೆನಪಿಸಿದೆ,ಜಾಗಿಂಗ್ ಮಾಡಬೇಕು, ಇವತ್ತು ಬೇಡ. ನಾಯಿಗಳನ್ನು ಹೊರಗೆ ಕರಕೊಂಡು ಹೋಗಬೇಕು, ಇವತ್ತು ಇಲ್ಲೇ ಕಟ್ಟಿದರಾಯಿತು.ಮೇಲೆ ಟ್ಯಾಂಕಿಗೆ ನೀರು ಹೋಗುತ್ತದಾ ನೋಡಬೇಕು, ಹೋಗದಿರುತ್ತದೆಯೇ……
ಒಟ್ಟಾರೆ ಮಳೆಯೆಂದರೆ ಸೋಂಬೆರಿತನ ಬಂದು ಒಕ್ಕರಿಸುವ ಹೊತ್ತು.
ಹಾಗಿದ್ದರೆ ಕವಿಗಳು ಮಳೆಯನ್ನೇಕೆ ಹಾಡಿ ಹೊಗಳಿದ್ದಾರೆ? ಪ್ರೀತಿಪ್ರೇಮದ ಸಂಕೇತವಾಗಿ ಕಂಡಿದ್ದಾರೆ?ಭೂಮಿ ಬಾನಿನ‌
ಮಿಲನವಾಗಿ ಕಂಡಿದ್ದಾರೆ? ಯಾವ ಕಾವ್ಯವಿರಲಿ,ಚಿತ್ರಗೀತೆಯಿರಲಿ ಅಲ್ಲೆಲ್ಲಾ ಮಳೆ ಅಂತರಂಗದ ಚೈತನ್ಯದ ಸಂಕೇತವಾಗಿ ಕಾಣುತ್ತದೆ.”ನಾನು ಅಚಲದ ತುಟಿಯೆತ್ತುವೆ ನೀ ಮಳೆಯೊಲು ಮುತ್ತನಿಕ್ಕುವೆ.:ನಿನ್ನಿಂದಲೆ ತೆರೆವುದೆನ್ನ ಚೈತನ್ಯದ ಕಣ್ಣೆವೆ” ಜಿಎಸ್ ಶಿವರುದ್ರಪ್ಪನವರ ಈ ಸಾಲಿನಲ್ಲಿ‌ ಮಳೆಯು ಚೈತನ್ಯವೇ ಆಗಿದೆ.”ಮಳೆಬರಲಿ ಪ್ರೀತಿಯ ಬನಕೆ,ಅರಳಲಿ ಹೂಗಿಡ ಲತೆ ಮರಕೆ” “ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ”
ಈ ಮಳೆ ನಮ್ಮ ಜೀವಂತಿಕೆಗೆ ಕಾರಣ,ಹೊಸಸೃಷ್ಟಿಗೆ ಕಾರಣ, ಒಣಗಿ ಕರಕಲಾಗಿ ಬೊಳುಬೋಳು ಬೆತ್ತಲಾದ ಬೆಟ್ಟಗುಡ್ಡಗಳೂ ಒಂದೇ ಒಂದು ಮಳೆಗೆ ಹಸುರಾಗಿ ನಿಗಿನಿಗಿ ನಗುವ ಚಂದವನ್ನು ನೋಡಿ ಮೈಮರೆಯುವಂತಾಗುತ್ತದೆ.
ಒಣಗಿ ಬರಕಲು ಬರಕಲಾದ ಮರವೂ ಹಸಿರು ಗಿಳಿಗಳಂತಹ ಎಲೆ,ಚಿಗುರನ್ನ ತಳೆದು ಕಲಕಲ‌ನಗುವ ಚಂದವೇನು!! ಬೆಟ್ಟದಿಂದ ಕೆಳಗುರುಳುವ ಜಲಧಾರೆ.!ಇಷ್ಟೆಯಿಷ್ಟಗಲದ ಹಳ್ಳವೂ ತುಂಬಿ ಇಷ್ಟಗಲವನ್ನೂ ತುಂಬಿ ಸಳಸಳ ಹರಿವಾಗ ಹೊಮ್ಮುವ ರುದ್ರ ಗಂಭೀರತೆ! ಗದ್ದೆಯ ಅಂಚಿನಲ್ಲಿರುವ ಒಂದೇಒಂದು ಮಾವಿನ‌ಮರದ ರೆಂಬೆಯ ಇಕ್ಕಟ್ಟಿನಲ್ಲಿ ತಣ್ಣಗೆ ಮಲಗಿದ್ದ ಸೀತಾಲಿದಂಡೆ ನೋಡನೋಡುತ್ತಲೇ ಇಷ್ಟುದ್ದ ಹೂದಂಡೆಯ ಚಾಚಿ ಕರೆವ ಸೊಬಗೇನು !! ಅಂಗಳದ ದಂಡೆಯಲಿ ಹಬ್ಬಿಹರಡಿದ್ದ ಹಸಿರು ಹುಲ್ಲು ಚಾಚಿದ ಕೈಬೆರಳಿನಂಹ ದಾರಸಪೂರದ‌ಬಿಳಿಬಿಳೀ ದಂಟಿನ ತುದಿಯಲ್ಲಿ ಮುತ್ತಿನಂತೆ ಮಿನುಗುವ ಮಳೆಹನಿ ತುಟಿತಾಗಿಸಿ ಸವಿಯಬೇಕೆಂಬಾಸೆ ಹುಟ್ಡಿಸುವ ಪರಿಯೇನು!! ಮಳೆಬಿದ್ದದ್ದೇ ನೆಲದಾಳದಲ್ಲಿ ಇಷ್ಟುದಿನ ಮಲಗಿ ಗಾಡನಿದ್ದೆಯಲ್ಲಿದ್ದ ಇಷ್ಟೇಯಿಷ್ಟುದ್ದದ ಗಂಗೆಹುಳ, ಮುಟ್ಟಿದ ಕೂಡಲೇ ಸುರುಳಿಯಾಗುವ ಸಹಸ್ರಪದಿಯೆಂಬ ಒನಕೆಮುಂಡೆ,ಕಿವಿತೂತಾಗುವಂತೆ ನಿರಂತರ ಕೊರೆವ ಜೀರುಂಡೆ,ಎಲೆಯ‌ ಮೇಲೆ ಗುರುತುಳಿಸಿ ಸಾಗುವ ,ಯಾವುದೋ ಮಾಯಕದಲ್ಲಿ ಮನೆಯೊಳಗೆ ಬರುವ ಬಸವನ ಹುಳು………!!!!!
ಪ್ರಕೃತಿ ಈ ಬಗೆಯ ಚಲುವೆಯೆಂದು ನಮಗೆ ತಿಳಿಯುವುದೇ ಮಳೆಯಿಂದ .
ಆದರೆ,ನಮಗೆ ಈ ನಿಜ ತಿಳಿಯುವುದು ಯಾವುದೇ ವರ್ತಮಾನದ ಅನುಭವಗಳಿಂದಲ್ಲ,ಬದಲಿಗೆ ಇನ್ನಾವುದೋ ಕಾಲದ ನಂತರ ಈ ಎಲ್ಲವೂ ನೆನಪಾಗುವಾಗ ,ಅಂದಿನ ಅನುಭವ ಇಂದಿಗೆ ಸುಂದರವಾಗಿ ಕಾಣುತ್ತದೆ. “ಅನುಭವವು ಸವಿಯಲ್ಲ.ಅದರ ನೆನಪೇ ಸವಿಯು”
ನಮಗೆ ಇಂದಿನ‌ಮಳೆ ಭಯಂಕರ ಬೋರು ,ನಿರಾಶಾದಾಯಕ.ಆದರೆ ನಾನು ಅನುಭವಿಸಿದ ನನ್ನ ಬಾಲ್ಯಕಾಲದ ನೆನಪು ಅತೀಸುಂದರ!!ಯಾಕಂದರೆ ನಾವದನ್ನು ದಾಟಿ ಬಂದಾಗಿದೆ,ಒಂದು ಘಟನೆ ಕೆಲಕಾಲದ ನಂತರ ತನ್ನಲ್ಲಿನ ಕಹಿಯನ್ನು ಮರೆಸಿ ಕೇವಲ ಸಿಹಿಯ ನೆನಪನ್ನು ಮಾತ್ರ ಉಳಿಸಿರುತ್ತದೆ.ಹಾಗಾಗಿ ನಮಗೆ ಹಳೆಯದು ಚಂದ.ವರ್ತಮಾನದ್ದು!!?
ಮತ್ತು ನಮಗೆ ನಮ್ಮ ಬಾಲ್ಯವನ್ನು ಇಂದು ನೆನಪುಮಾಡಿಕೊಳ್ಳುವುದೇ ಸಂತೋಷ.ಕಾರಣ ಬಾಲ್ಯದ ಸುಂದರ ನೆನಪುಗಳು, ಹೌದೇ?ಬಾಲ್ಯ ಅಷ್ಟು ಸುಂದರವಾಗಿತ್ತೇ ? ಬಹುಶಃ ಇಲ್ಲ.ಅಲ್ಲಿಯೂ ಕಷ್ಟ,ಕರಕರೆ.ಸಂಕಟ ವಿದ್ದಿರಲೇಬೇಕು.ಆದರೆ ನಮ್ಮ ಮೂಲ ಗುಣವೆಂದರೆ ಕಷ್ಟವನ್ನು ಮರೆಯುವುದು.ಸುಖವನ್ನು ಮಾತ್ರ ಮುಂದಕ್ಕೆ ತೆಗೆದು ಕೊಂಡು ಹೋಗುವುದು,ಒಂದು ಉದಾಹರಣೆ ಕೊಡುವೆ. ನಾನು ಮಂಗಳೂರಿಗೆ ಬಸ್ಸಲ್ಲಿ ಹೊರಟಿರುವೆ. ವಿಪರೀತ ರಷ್., ಕಾಲು ಹಾಕಲೂ ಕಷ್ಟ.ಹೇಗೋ ಏದುಸಿರು ಬಿಡುತ್ತಾ ನಿಂತಿದ್ದೇನೆ .ಇನ್ನೆನು ಇಳಿಯಬೇಕಾದ ನಿಲ್ದಾಣ ಹತ್ತಿರವಾಗುತ್ತಿದ್ದಂತೆ ಯಾರೋ ಇಳಿದಾಗ ಸೀಟು ಸಿಕ್ಕದ್ದೇ ನಾನು ದಬಕ್ಕನೆ ಕೂತವನೇ ಒಂದು ಗಳಿಗೆ ನಿದ್ದೆಗೆ ಜಾರುತ್ತೇನೆ!!
ಈ ಮನೋಭಾವವೇ ನಮ್ಮನ್ನು ಕಷ್ಟವನ್ನು ಮರೆಯಲು ಕಲಿಸಿರುವುದು.
ಇಲ್ಲದಿದ್ದರೆ ಮತ್ತೇನಿದೆ ಹೇಳಿ?
ನಿರಂತರ ಸುರಿವ ವರ್ಷಧಾರೆಯ ನಡುವಿನ ಅರೆಗಳಿಗೆ ಬಿಡುವಿನಲ್ಲಿ ದೂರದಿಗಂತದಂಚಲ್ಲಿ ಒಂದರೆಗಳಿಗೆ ಮೂಡುವ ಕಾಮನಬಿಲ್ಲು ತೆಕ್ಕನೆ ಮೈಮನವನ್ನರಳಿಸುವ ಪರಿಯೇ ಬದುಕಿನ ಸುಂದರತೆಗೆ ,ಸಹ್ಯತೆಗೆ ,ನಿರಂತರತೆಗೆ ಕಾರಣ.

ಹರೀಶ್.ಟಿ.ಜಿ

LEAVE A REPLY

Please enter your comment!
Please enter your name here