ತಮ್ಮ ಆತ್ಮಚರಿತ್ರೆಯಲ್ಲಿ ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿ, ಅಣಕಿಸಿದ ಬರಾಕ್ ಒಬಾಮ!

0
115
Tap to know MORE!

ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದು, ರಾಹುಲ್ ಅವರು “ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

‘ರಾಹುಲ್ ಗಾಂಧಿ ಅವರಿಗೆ ತಮ್ಮ ಗುಣಾವಗುಣಗಳ ಬಗ್ಗೆ ಜ್ಞಾನವಿಲ್ಲ, ಮಾನಸಿಕ ಅಸ್ಥಿರತೆ ಹಾಗೂ ಒತ್ತಡದಲ್ಲಿ ಇರುತ್ತಾರೆ. ವಿದ್ಯಾರ್ಥಿಯೊಬ್ಬ ತನಗೆ ನೀಡಿದ ಮನೆ ಪಾಠ ಮುಗಿಸಿ ಶಿಕ್ಷಕರನ್ನು ಮೆಚ್ಚಿಸಲು ಯತ್ನಿಸುವಂತೆ ಕಂಡುಬರುತ್ತದೆ. ಆದ್ರೆ, ಅಧ್ಯಯನ ಮಾಡಬೇಕಿರುವ ವಿಚಾರದಲ್ಲಿ ಅವರಿಗೆ ಪ್ರಾವೀಣ್ಯತೆ ಸಾಧಿಸಲು ಉತ್ಸಾಹ ಹಾಗೂ ಯೋಗ್ಯತೆಯ ಕೊರತೆ ಇದೆ’ ಎಂದು ಒಬಾಮಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ಧಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ನ ವಿಶ್ಲೇಷಣೆ ವಿವರಿಸಿದೆ.

ಎ ಪ್ರಾಮಿಸ್ಡ್ ಲ್ಯಾಂಡ್ ಎಂಬ ಒಬಾಮಾ ಆತ್ಮಚರಿತ್ರೆಯನ್ನು ದಿ ನ್ಯೂಯಾರ್ಕ್ ಟೈಮ್ಸ್ ವಿಮರ್ಶಿಸಿದ್ದು, ಈ ಕೃತಿಯಲ್ಲಿ ಒಬಾಮಾ ವಿಶ್ವದ ಪ್ರಮುಖ ರಾಜಕೀಯ ಮುಖಂಡರ ಬಗ್ಗೆ ಉಲ್ಲೇಖಿಸಿದ್ದಾರೆ.

ರಾಹುಲ್‌ಗಾಂಧಿಯವರ ಬಗ್ಗೆ ಉಲ್ಲೇಖಿಸಿ, “ಪುಕ್ಕಲು ಮತ್ತು ಅಸ್ಥಿರ ಗುಣಗಳು ಅವರಲ್ಲಿವೆ. ಅಭ್ಯಾಸ ಮಾಡುವ ವಿದ್ಯಾರ್ಥಿಯಂತಿರುವ ಅವರು, ಶಿಕ್ಷಕರ ಮೇಲೆ ಪ್ರಭಾವ ಬೀರಲು ಉತ್ಸುಕನಾದ ವಿದ್ಯಾರ್ಥಿಯಂತಿದ್ದಾರೆ. ಆದರೆ ಆಳಕ್ಕೆ ಇಳಿದರೆ ವಿಷಯದ ಬಗ್ಗೆ ಪರಿಣತಿ ಸಾಧಿಸುವ ಪ್ರವೃತ್ತಿ ಅಥವಾ ಒಲವು ಅವರಿಗೆ ಇಲ್ಲ” ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವಿಮರ್ಶೆಯಲ್ಲಿ ಉಲ್ಲೇಖಿಸಲಾಗಿದೆ.

“ಚಾರ್ಲ್ ಕ್ರಿಸ್ಟ್ ಮತ್ತು ರಹಾಮ್ ಎಮ್ಯುನಲ್‌ನಂಥ ವ್ಯಕ್ತಿಗಳ ಸೌಂದರ್ಯದ ಬಗ್ಗೆ ಉಲ್ಲೇಖವಿದೆ. ಆದರೆ ಸೋನಿಯಾಗಾಂಧಿಯವರ ಉಲ್ಲೇಖದಂಥ ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಮಹಿಳೆಯ ಚೆಲುವಿನ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ” ಎಂದು ವಿಮರ್ಶಾ ವರದಿ ತಿಳಿಸಿದೆ.

ತಮ್ಮ ರಾಜಕೀಯ ಜೀವನದ ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್, ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾರ್ಯವೈಖರಿಯ ಬಗ್ಗೆಯೂ ಬರೆದಿದ್ದಾರೆ.

ಬಾಬ್‌ ಗೇಟ್ಸ್‌ ಮತ್ತು ಮನಮೋಹನ್ ಸಿಂಗ್ ಅವರನ್ನು ‘ನಿರ್ದಾಕ್ಷಿಣ್ಯ, ಸಮಗ್ರ ದೃಷ್ಟಿಕೋನವುಳ್ಳ ಪ್ರಭಾವಶಾಲಿ ವ್ಯಕ್ತಿಗಳು’ ಎಂದೂ ಬಣ್ಣಿಸಿದ್ದಾರೆ.

ಒಬಾಮಾ ಅವರ ‘ಎ ಪ್ರಾಮಿಸ್ಡ್‌ ಲ್ಯಾಂಡ್’ ಪುಸ್ತಕದ ಕುರಿತು ಚಿಮಾಮಂಡ ಎಂಬುವರು ವಿಮರ್ಶೆ ಬರೆದಿದ್ದು, ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾಗಿದೆ. ಈ ಮಾಸಾಂತ್ಯಕ್ಕೆ ಒಬಾಮಾ ಅವರ ಪುಸ್ತಕ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಪುಸ್ತಕದಲ್ಲಿ ಒಬಾಮಾ ಅವರು ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಬಗ್ಗೆ ವಿವರಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ವೈಟ್‌ಹೌಸ್‌ನಲ್ಲಿ ಕಳೆದ 8 ವರ್ಷಗಳ ಆಡಳಿತಾವಧಿ ಬಗ್ಗೆಯೂ ಹಲವು ಮಾಹಿತಿಗಳು ಇವೆ ಎಂದು ತಿಳಿದುಬಂದಿದೆ.

768 ಪುಟಗಳ ಆತ್ಮಚರಿತ್ರೆ ಈ ತಿಂಗಳ 17ರಂದು ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಒಬಾಮಾರ ಬಾಲ್ಯ, ರಾಜಕೀಯ ಏಳಿಗೆ, ಅಮೆರಿಕ ಅಧ್ಯಕ್ಷಾವಧಿಯ ಅನುಭವದಂಥ ವಿಚಾರಗಳು ಇಲ್ಲಿವೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here