ಭಾರತೀಯ ಸ್ವತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹಲವಾರು ಹೋರಾಟ, ದಾಳಿ, ಪ್ರತಿಭಟನೆಗಳು ನಡೆದಿವೆ. ಆದರೂ ಬ್ರಿಟಿಷರನ್ನು ವಿರೋಧಿಸಿ ಅವರ ಗುಂಡೇಟಿಗೆ ಮಡಿದ 12 ವರ್ಷದ ಬಾಲಕ ಬಾಜಿ ರಾವತ್ ಎಂಬ ಅತ್ಯಂತ ಕಿರಿಯ ಹುತಾತ್ಮ ಯಾವತ್ತೂ ಕಣ್ಮುಂದೆ ಬರುತ್ತಾನೆ.
ಬಾಜಿ ರಾವತ್ 5 ಅಕ್ಟೋಬರ್ 1926ರಲ್ಲಿ ಒಡಿಶಾದಲ್ಲಿ ಜನಿಸಿದನು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಬಾಜಿ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಾನೆ. ಬಾಜಿ ಸಣ್ಣ ವಯಸ್ಸಿನಲ್ಲೇ ಪ್ರಜಾಮಂಡಲ ಬನಾರ್ ಸೇವಾ ವಿಭಾಗವನ್ನು ಸೇರಿಕೊಂಡಿದ್ದ. ಬ್ರಾಹ್ಮಿಣೀ ನದಿಯಲ್ಲಿ ದೋಣಿ ನಡೆಸುವ ಕೆಲಸ ಮಾಡುತ್ತಿರುತ್ತಾನೆ.
ಇದನ್ನೂ ಓದಿ : ಆಂಗ್ಲರ ವಿರುದ್ಧ ಹೋರಾಡಿ ತನ್ನ ರಾಜ್ಯವನ್ನು ಹಿಂಪಡೆದ ಧೀರೆ ವೇಲು ನಾಚಿಯಾರ್
ಇದೇ ಸಮಯದಲ್ಲಿ ಧೆಂಕನಲ್ ರಾಜ ಶಂಕರ್ ಪ್ರತಾಪ್ ಸಿಂಗ್ದೇವ್ ಬಡ ಗ್ರಾಮಸ್ಥರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಮತ್ತು ಬ್ರಿಟಿಷರ ಸಹಾಯ ಪಡೆದು ಅನೇಕರ ಹತ್ಯೆ ನಡೆಸಿದ್ದ. ಇದರ ವಿರುದ್ಧ ಪಟ್ಟನಾಯಕ ಮಕ್ಕಳ ಸೇನೆಯನ್ನು ಸೇರಿಸಿ ದಂಗೆಯನ್ನು ಎಬ್ಬಿಸಿದರು. ಇದರಿಂದ ಕಂಗೆಟ್ಟ ರಾಜ, ಬ್ರಿಟಿಷರ ಸಹಾಯ ಪಡೆದು ಪಟ್ಟನಾಯಕನ ಬಂಧನಕ್ಕೆ ಸಂಚು ರೂಪಿಸಿದನು.
ಸಪ್ಟೆಂಬರ್ 22, 1938 ರಂದು ಹರಾ ಮೋಹನ್ ಪಟ್ಟನಾಯಕ್ ಮತ್ತು ಇತರ ನಾಯಕರನ್ನು ಬಂಧಿಸಲು ದಾಳಿ ನಡೆಯಿತು. ಆದರೆ ಪಟ್ಟನಾಯಕ್ ಬ್ರಿಟಿಷರ ಊಹೆಗು ಮೀರಿದ ಬುದ್ದಿವಂತರಾಗಿದ್ದರು. ಅವರು ಎಲ್ಲರ ಗಮನ ಬೇರೆಡೆಗೆ ಸೆಳೆದು ತಾವು ತಪ್ಪಿಸಿಕೊಂಡರು. ಕೋಪಗೊಂಡ ಅಧಿಕಾರಿಗಳು ಪಟ್ಟನಾಯಕನನ್ನು ಹುಡುಕುತ್ತಲೇ ಇದ್ದರು ಮತ್ತು ಅವರು ಭೂಬಾನ್ ಗ್ರಾಮದಲ್ಲಿದ್ದಾರೆ, ಕ್ಯಾಂಪಿಂಗ್ ಮಾಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗೆ ಮೋಸ ಹೋಗಿದ್ದರು ಬ್ರಿಟಿಷರು.
ರಾಜ ಮತ್ತು ಸಶಸ್ತ್ರ ಪಡೆಗಳು 1938 ರ ಅಕ್ಟೋಬರ್ 10 ರಂದು ಮೂರನೇ ಬಾರಿಗೆ ಹಳ್ಳಿಯ ಮೇಲೆ ದಾಳಿ ನಡೆಸಿ ಜನರನ್ನು ಹಿಂಸಿಸಿದರು. ಆದರೆ ಪಟ್ಟನಾಯಕ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ದಾಳಿಯ ಸಮಯದಲ್ಲಿ ಹಲವಾರು ಸಾಧ್ಯತೆಗಳು ಬ್ರಿಟಿಷರಿಗೆ ಕಗ್ಗಂಟಾಗಿದ್ದವು. ಅದರಲ್ಲಿ ಒಂದು ಪಟ್ಟನಾಯಕ್ ಇನ್ನೊಂದು ಹಳ್ಳಿಗೆ ಬ್ರಾಹ್ಮಿಣೀ ನದಿಯ ಮೂಲಕ ಈಜಿಕೊಂಡು ತಲುಪಿದ್ದಾರೆಂದು ಹೇಳಾಲಾಗುತ್ತಿತ್ತು. ಸೈನ್ಯವು ತಕ್ಷಣವೇ ಅನ್ವೇಷಣೆ ಪ್ರಾರಂಭಿಸಿತು. ಆದರೆ ಹಳ್ಳಿಯ ಜನರು ಸೈನ್ಯ ಮುಂದೆ ಹೋಗದಂತೆ ತಡೆದು ತಮ್ಮ ನಾಯಕನನ್ನು ರಕ್ಷಿಸಲು ಮುಂದಾದರು. ಆದರೆ ಬ್ರಿಟಿಷ್ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದರು. ರಘು ನಾಯಕ್ ಮತ್ತು ಕುರಿ ನಾಯಕ್ ಎಂಬ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಜನಸಮೂಹ ಬೇರ್ಪಟ್ಟಿತು ಮತ್ತು ಸೈನ್ಯ ಬ್ರಾಹ್ಮಿಣೀ ನದಿಯನ್ನು ತಲುಪಿತು.
ಅಂದು ಅಕ್ಟೋಬರ್ 11, 1938 ರ ರಾತ್ರಿಯ ಸಮಯ ಘಾಟ್ನಲ್ಲಿ ಕಾವಲಿನಲ್ಲಿದ್ದ ಬಾಜಿಯಲ್ಲಿ ದೋಣಿಯಲ್ಲಿ ಇನ್ನೊಂದು ಹಳ್ಳಿಗೆ ತಲುಪಿಸುವಂತೆ ಬ್ರಿಟಿಷರು ಹೇಳುತ್ತಾರೆ. ಆದರೆ ಕೇವಲ 12 ವರ್ಷದವನಾಗಿದ್ದ ಬಾಜಿ ತನ್ನ ಹಳ್ಳಿಗರ ಮೇಲಿನ ದೌರ್ಜನ್ಯ ಮತ್ತು ತನ್ನ ನಾಯಕನ ರಕ್ಷಣೆಯನ್ನು ಮನಗಂಡು ಬ್ರಿಟಿಷರನ್ನು ನದಿ ದಾಟಿಸಲು ನಿರಾಕರಿಸಿದ. ಆದರೂ ಮುಂದುವರಿದ ಬ್ರಿಟಿಷರು ಬಾಜಿಯನ್ನು ಗದರಿಸುತ್ತಾರೆ. ಇದ್ಯಾವುದಕ್ಕೂ ಹೆದರದ ಬಾಜಿ ಕತ್ತಲೆಯಲ್ಲಿ ಬ್ರಿಟಿಷರ ಇರುವಿಕೆಯನ್ನು ಜೋರಾಗಿ ಕೂಗುತ್ತಾ ಗ್ರಾಮಸ್ಥರಿಗೆ ತಿಳಿಸುತ್ತಾನೆ. ಕೋಪಗೊಂಡ ಸೈನಿಕನೊಬ್ಬ ತನ್ನ ಬಂದೂಕಿನಿಂದ ಬಾಜಿಯ ತಲೆಗೆ ಗುಂಡು ಹೊಡೆಯುತ್ತಾನೆ. ಎಳೆ ಹುಡುಗನ ತಲೆಬುರುಡೆ ಒಡೆದು ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಹೀಗೆ ಬಾಜಿ ರಾವತ್ ತನ್ನ 12 ನೇ ವಯಸ್ಸಿನಲ್ಲಿ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿ ಚಿರನಿದ್ರೆಗೆ ಜಾರುತ್ತಾನೆ. ಆದರೆ ತನ್ನ ಅಪೂರ್ವ ಶೌರ್ಯದ ಮೂಲಕ ಭಾರತೀಯದ ಮನಸ್ಸಲ್ಲಿ ಚಿರವಾಗಿ ನೆಲೆಸುತ್ತಾನೆ.
ಸುರೇಶ್ ರಾಜ್
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು