ನವದೆಹಲಿ ಸೆ.30: ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಇಂದು ನೀಡಲಿದೆ. ಕಟ್ಟಡ ಉರುಳಿಸಿದ ಸುಮಾರು ಮೂರು ದಶಕಗಳ ಬಳಿಕ ತೀರ್ಪು ಹೊರಬೀಳಲಿದೆ. ಈ ಪ್ರಕರಣದ ಆರೋಪಿಗಳಲ್ಲಿ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಮಾಜಿ ಸಚಿವರಾದ ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಇತರರು ಸೇರಿದ್ದಾರೆ.
ಎಲ್ಲಾ 32 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದ್ದರೂ, ಎಷ್ಟು ಮಂದಿ ಬರುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗಲಿಲ್ಲ. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ನೃತ್ಯ ಗೋಪಾಲ್ ದಾಸ್ 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಗೈರಾಗುವ ಸಾಧ್ಯತೆ ಇದೆ. ಅವರಲ್ಲದೆ, ಉಮಾ ಭಾರತಿ ಮತ್ತು ಇನ್ನೊಬ್ಬ ಆರೋಪಿ ಸತೀಶ್ ಪರಧನ್ ಆಸ್ಪತ್ರೆಯಲ್ಲಿದ್ದಾರೆ.
ಉಮಾ ಭಾರತಿ ಕೊರೋನವೈರಸ್ಗೆ ಮತ್ತು ಪ್ರಧಾನ್ ಗೆ ಗ್ಯಾಂಗ್ರೀನ್ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಕೊವಿಡ್ -19 ಚಿಕಿತ್ಸೆಗೆ ಒಳಗಾಗಿ ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಎಲ್ಲರ ಪೈಕಿ ಕಿರಿಯ ಆರೋಪಿ ಪವನ್ ಕುಮಾರ್ ಪಾಂಡೆ ಅವರ 50 ರ ಹರೆಯದವರು ಎಂದು ವಕೀಲರು ತಿಳಿಸಿದ್ದಾರೆ.
ಇವರನ್ನು ಹೊರತುಪಡಿಸಿ, ಚಂಪತ್ ರಾಯ್, ಬ್ರಿಜ್ ಭೂಷಣ್ ಸಿಂಗ್, ಪವನ್ ಪಾಂಡೆ ಲಲ್ಲು ಸಿಂಗ್, ಸಾಕ್ಷಿ ಮಹಾರಾಜ್, ಸಾಧ್ವಿ ರಿತಂಬರಾ , ಆಚಾರ್ಯ ಧರ್ಮೇಂದ್ರ ದೇವ್, ರಾಮಚಂದ್ರ ಖತ್ರಿ, ಸುಧೀರ್ ಕಕ್ಕಾರ್, ಒಪಿ ಪಾಂಡೆ, ಜೈ ಭಗವಾನ್ ಗೋಯಲ್, ಅಮರನಾಥ್ ಗೋಯಲ್ ಮತ್ತು ಸಂತೋಷ್ ದುಬೆ ಕೋರ್ಟ್ ಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.