ಬಾಲ್ಯವೆಂಬ ಸುಂದರ ಹೂದೋಟ

0
210
Tap to know MORE!

ನಮ್ಮ‌ಜೀವಿತವು, ಶೈಶವ ಬಾಲ್ಯದ ಉಲ್ಲಾಸ ,ಹರೆಯ,ಯೌವನಗಳ ಉಮೇದಿ, ಮಧ್ಯವಯಸ್ಸಿನ ಜವಬ್ದಾರಿ, ವೃದ್ಧಾಪ್ಯದ ಅನುಭವಗಳೆಂಬ ವಿವಿಧ ಹಂತಗಳನ್ನು ದಾಟಿ ವೃತ್ತ ಪೂರ್ತಿಯಾಗಿ ಬಂದರೆ ಜೀವಿತವು ಪರಿಪೂರ್ಣ ವಾಯಿತೆಂದರ್ಥ.
ಈ ಪರಿಪೂರ್ಣ ಜೀವನವನ್ನು ಅದರಿಂದ ದೂರನಿಂತು ನೋಡಿದಾಗ ನಮಗೆ ಈ ಪ್ರತೀ ಹಂತದಲ್ಲಿಯೂ ಅದರದ್ದೇ ಆದ ವೈಶಿಷ್ಟ್ಯ ವಿರುವುದು ಗೋಚರಿಸುತ್ತದೆ. ಶೈಶವವು ಬಹುಸುಂದರ ಮತ್ತು ಆನಂದದಾಯಕ ವೆಂಬ ಮಾತಿದೆ.ಆದರೆ ಈ ಆನಂದದಾಯಕವಾಗಲೀ ಸುಂದರತೆಯಾಗಲೀ ಹೆತ್ತವರಿಗಷ್ಟೆ. ಮಗುವಿಗೆ ಅದರ ಅನುಭವದ ನೆನಪಿಲ್ಲ. ನೆನಿಪಿಲ್ಲದ್ದು ಸವಿಯಲ್ಲ.ಹಾಗಾಗಿಯೇ ಮಕ್ಕಳು ತಮ್ಮ ತಂದೆ,ತಾಯಿಗಳನ್ನು, ನಾನು ಮಗುವಾಗಿದ್ದಾಗಿನ ಕತೆ ಹೇಳು, ನಾನು ಆಗ ಏನು‌ ಮಾತನಾಡಿದೆ ? ನಾನು ಆವತ್ತು ಯಾಕೆ ಅತ್ತೆ?ನನಗೆ ಹುಟ್ಟು ಹಬ್ಬಕ್ಕೆ ನೀನು ಏನುತಂದಿ ?ಅಪ್ಪ ತುಂಬಾ ಪ್ರಿತಿಸುತ್ತಿದ್ದರಲ್ವ?ನಾನು ಪಾಪ ಅಲ್ವ?ನಾನು ಯಾರಿಗೆ”ಭಾಷೆಯಿಲ್ಲದ ಪ್ರಾಣಿಗಳು”ಅಂತ ಹೇಳಿದ್ದು?ಅವರು ಪಾಪ ಅಲ್ವ? ಥೋ,,,ಈ ಫೋಟೋ ಮುಚ್ಚಿಡು,ಅಮ್ಮಾ ಇದನ್ನು ಯಾಕೆ ನೀನು ತೋರಿಸೋದು?
ಇದು ಚಂದವೆ ,ಆದರೆ ನಮಗಿದು ನೆನಪಿಲ್ಲ,ತಂದೆ ತಾಯಿಯರ ಖುಷಿ ನಮಗೂ ಖುಷಿ ಅಷ್ಟೆ.
ಪ್ರತೀ ಹೆತ್ತವರಿಗೂ ಮಕ್ಕಳ ಆಟಪಾಠಗಳು ಯಿಷ್ಟವಾಗುವುದರಿಂದ ಅವರು ಮಕ್ಕಳ ಶೈಶವವನ್ನು,ಅವರ ಅಂಬೆಗಾಲನ್ನ,ಬಿಜಿಲುಬಿಜಿಲು ಮಾತನ್ನ ,ಸದಾ ನೆನಪು ಮಾಡಿಕೊಳ್ಳುತ್ತಾರೆ.ಹಾಗಾಗಿ ಮಕ್ಕಳ ಮಗುತನ ಹೆತ್ತವರ ಹೆಮ್ಮೆ,
ನಿಜವಾಗಿ ನಾವು ನಮ್ಮ ಜೀವಿತದಲ್ಲಿ ಸ್ಮರಣೀಯ ಕಾಲವೆಂದು ಯಾವುದನ್ನಾದರೂ ಗುರುತಿಸಿದರೆ ಅದು ನಮ್ಮ ಬಾಲ್ಯ.

ಆಯಾಸವೇಯಿಲ್ಲದ ಸದಾ ಉಲ್ಲಾಸದಿಂದ ಕೂಡಿದ್ದ ಈ ಬಾಲ್ಯವೆಂದರೆ ನಮಗೆ ಅಪರಿಮಿತ ಸಂತೋಷದ ಖರ್ಚಾಗದ ಅಕ್ಷಯ ಪಾತ್ರೆ, ಜಾತಿಬೇಧವಿಲ್ಲದ,ಮೇಲು ಕೀಳಿನ‌ ತಾರತಮ್ಯವಿಲ್ಲದ ,ಮೈಬಣ್ಣ ಮೇಲ್ತರಗತಿಯ ಅಹಮಿಕೆಯಿಲ್ಲದ ,ಬಣ್ಣಬಣ್ಣದ ಹೂದೋಟದ,ಕಣ್ಣಿಗೆ ಸೊಬಗಿನ ಆ ನೋಟದ ,ಕನಸುಗಳನ್ನು ಮೊಗೆಮೊಗೆದು ಉಣಬಡಿಸುತ್ತಿದ್ದ ಈ ಬಾಲ್ಯವೆಂಬ ದಿವ್ಯ ಸಂಭ್ರಮದ ದಿನಗಳೆಷ್ಟು ಚಂದ!!
ಬಾಲ್ಯ ಸುಂದರವಾಗಿ ಗೋಚರಿಸಲು ಮುಖ್ಯವಾಗಿ ಬೆಂಬಲವಾಗಿ ಒದಗಿ ಬಂದ ಮತ್ತೊಂದು ಪ್ರಬಲ ಅಂಶವೆಂದರೆ ನಮ್ಮ ಹಳ್ಳಿ!
ಹೌದು ಹಳ್ಳಿಯ ಜನರ ನಿಷ್ಕಲ್ಮಷ ಪ್ರೀತಿ. ಮಾನವೀಯತೆ,ದಯೆ,ನೀತಿಯುತ ಬದುಕು ನಮ್ಮ ಬಾಲ್ಯವನ್ನು ಗಾಢವಾಗಿ ಪ್ರಭಾವಿಸಿತ್ತು,ಹಾಗಾಗಿ ಅಲ್ಲಿ ಧಣಿ ಮತ್ತು ಕೂಲಿಗಾರರ ಮಕ್ಕಳು ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು .ಮಳೆ,ಗಾಳಿ ಬಿಸಿಲುಗಳಲ್ಲಿ ಕೈಕೈಹಿಡಿದು ಹೋಗುತ್ತಿದ್ದರು. ಬೆಳಗ್ಗೆ ಕೊನೇ ಮನೆಯ ಮಕ್ಕಳು ಹೊರಟು ಕೂಗು ಹಾಕಿ ಮುಂದಿನ ಮನೆಯ ಮಕ್ಕಳೂ ಹೊರಟು ಪ್ರತಿಕೂಗುಹಾಕಿ ಪುಸ್ತಕ ಚೀಲ, ಊಟದ ಡಬ್ಬಿಯನ್ನ ಎದೆಗವಚಿ,ತೋಟ,ಗದ್ದೆ,ಹಳ್ಳ ದಾಟಿ, ಗುಡ್ಡವೇರಿ , ಮರಗಿಡಗಳನ್ನು ಮುಟ್ಟಿ ಮಾತಾಡಿಸಿ,ಸಂಪಗೆಯೋ, ರೆಂಜೆಯೋ,ಬೆಮ್ಮಾರಲೋ,
ಜೀರ್ಕಲೋ,ಕಬಳೆಯೋ, ಕರ್ಜೀಕಾಯಿಯೋ ಕಂಡರೆ ಹತ್ತಿ,ಉದುರಿಸಿ ಹಂಚಿತಿಂದೇ ಮುಂದೆ ಹೋಗುವ,ಮರದ ಗೆಲ್ಲಿನ ಬುಡದಲ್ಲಿ ಚಿಮ್ಮಿ ನಗುವ ಸೀತಾಳದಂಡೆ ಹೂ ಕಂಡರೆ ಹತ್ತಿ ಕೊಯ್ದು ಜೋಪಾನವಾಗಿ ಶಾರದಾ ಪೂಜೆಗೆ ನಾವೇ ಕೈಯಾರೆ ಕೊಟ್ಟು ಕೃತಾರ್ಥರಾಗುವ ಖುಷಿ. ಪ್ರಭಾತ್ ಪೇರಿಯಲ್ಲಿ ಮುಂದೆ ನಿಂತು ಪರಮ ಉಮೇದಿಯಲ್ಲಿ ಗಾಂಧಿಯ ಪೋಟೋವನ್ನು ಹಿಡಕೊಂಡು ನಡೆವ ಸೊಬಗು,ಆಕ್ಷಣಕ್ಕೆ ನೆನಪಾಗುವ ಜನನಾಯಕರಿಗೊಂದು ಜೈಕಾರ ಹಾಕಿ ಬೀಗುವ ಸುಖ, ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಇಡೀ ಊರು ನನ್ನನ್ನೇ ನೋಡುತ್ತಿದೆಯೆಂಬ “ನಂಬಿಕೆ”, !!ಹಾಗಾಗಿ ಗಂಟಲು ಹರಿದು ಹೋಗುವಂತೆ ಕಿರುಚುವ ,ಮತ್ತು ಆನಂತರ ನಾನು ಅಷ್ಟು ಜೋರು‌ಕಿರುಚಿದೆ,ಅವರು ತಿರುಗಿ ನನ್ನ ನೋಡಿದರು, ಮೇಡಮ್ ಬೆನ್ನು ತಟ್ಟಿದರು ….ಅಂತ ನಮಗೆ ನಾವೇ ಶಿಫಾರಸ್ಸು ಕೊಟ್ಟುಕೊಳ್ಳುವ ಪರಿಯೇ ಸೊಗಸು. ಧ್ವಜಾರೋಹಣದಲ್ಲಿ ಹಗ್ಗವನ್ನು ಎಷ್ಟು ಜಗ್ಗಿದರೂ ಧ್ಬಜ ಅರಳದಿದ್ದಾಗ ಪೀಟಿಮಾಸ್ಟರ ಕಣ್ಣಸನ್ನೆಯಂತೆ ಸರಸರನೆ ಧ್ವಜಕಂಬವನ್ನೇರಿ ತುದಿತಲುಪಿ ಗಂಟು ಬಿಚ್ಚಿ ಸರ್ರನೆ ಕೆಳಗೆ ಜಾರಿ ನೆಲದಲ್ಲಿ ನಿಂತಾಗ ಧ್ವಜ ಕಂಬ ನಮಗಿಂತ ಗಿಡ್ಡವೆನಿಸುವ ಮತ್ತು ಸಹಪಾಠಿ ಗಳ ಕಣ್ಣಲ್ಲಿ ನಾನೇ ಎತ್ತರವೆನಿಸುವ ಅಭಿಮಾನ!!
ಮನೆಗೆ ನೆಂಟರು‌ ಬಂದರೆ ಮುಗೀತು.ಅವರಿಗೆ ಕೇಳಲೇಬೇಕೆಂಬ ಹಠತೊಟ್ಟು ಓದುವುದೆಂಬ ಬೊಬ್ಬೆ ಹೊಡೆವ ಗಮ್ಮತ್ತೇನು!!” ಇವನೆ ನೋಡು ಅನ್ನದಾತ ಹೊಲದಿ ದುಡಿದೆ ದುಡಿವನು,ನಾಡಜನರು ಬದುಕಲೆಂದು ಧವಸ ಧಾನ್ಯ ಬೆಳೆವನು ” ನೆಂಟರ ಗಮನ ವಿಲ್ಲ. ತಗಳಿ “ಪೇಡ್ಕೆ ನೀಚೆ ಗಾಂಯ್ ಹೇ,ಸಂದೂಕ್ ಕಾ ಪೀಚೆ ಗುಡಿಯಾ ಹೇ”
“ತಿತಲೀ ರಾಣಿ ಬೋಲೋ‌ಬೊಲೋ ಕೌನ್ ದೇಸಸೇ ಆತೀ ಹೂ,ಇತನಾ ಸುಂದರ್ ರೂಪು ತುಮಾರ…” ಊಹೂ ಸಾಕಾಗಲ್ಲ. “Ravi goes to Bangalore. Cubbon park,and Lal baugh”
ಈಗ ನೆಂಟರು ತಿರುಗಿ ನೋಡಲೇ ಬೇಕು. ಅವರಾದರು ಏನು ಮಾಡುತ್ತಾರೆ ಪಾಪ!ತಿರುಗಿ ನೋಡಿದಾಗ ನಮ್ಮೆದೆಯ ಪುಳಕವನ್ನು ವರ್ಣಿಸಲು ಪದಗಳೇ ಸೋಲುತ್ತವೆ.
ಅವರು ಉರು ಹೊಡೆದವರಂತೆ ಒಂದೇ ಪ್ರಶ್ನೆ ಬಿಸಾಡುತ್ತಾರೆ”ಮುಂದೆ ಏನಾಗುತ್ತೀ??”
ನಾವು ಎದ್ದುನಿಂತು ನಾವೂ ಉರುಹೊಡೆದ ಒಂದೇ ಇಂಗ್ಲೀಷ್ ಪದವಾದ “ಇಂಜಿನೀಯರ್” ಅಂತ ಬೊಬ್ಬೆ ಹೊಡೆದು ಇಂಜನಿಯರ್ ಮಾತ್ರ ಮಾಡಬಹುದಾದ ಕೆಲಸವನ್ನು ಸೂಚಿಸುವವರಂತೆ, ಎಡಗೈನಲ್ಲಿ ರುಂಗ್ ರುಂಗ್ ಸೌಂಡಿನೊಂದಿಗೆ ಗಿಯರ್ ಬದಲಾಯಿಸಿ ಎರಡೂ ಕೈನಲ್ಲಿ ಸ್ಟಿಯರಿಂಗ್ ತಿರುಗಿಸುತ್ತಾ ಮನೆತುಂಬಾ ಬಸ್ಸು ಓಡಿಸಿದರೆ ಅಂದಿನ ಓದಿನ ಪ್ರದರ್ಶನ ಮುಕ್ತಾಯ.!!
ಬಾಲ್ಯವೆಂದಾಗ ನಮಗೆ ನೆನಪಾಗುವ ಎರಡು ಹಬ್ಬಗಳು ಗಣಪತಿ ಹಬ್ಬ ಮತ್ತೊಂದು ದೀಪಾವಳಿ.ನಮ್ಮ ಕಾಲದಲ್ಲಿ ಪ್ರತೀ ಶಾಲೆಯಲ್ಲಿಯೂ ಗಣಪತಿ ಹಬ್ಬವಿತ್ತು ಮತ್ತು ಊರವರ ಸಹಕಾರವಿತ್ತು .ನಾಕಾಣೆ ಎಂಟಾಣೆಗಳು ಚಲಾವಣೆಯಲ್ಲಿದ್ದ ಆ ಕಾಲದಲ್ಲಿ ನಾವುಗಳು ಅಷ್ಟನ್ನೇ ನಮ್ಮ ಬಾಬತ್ತಿನ ಚಂದವಾಗಿ ನೀಡಿ ಒಂದಡಿ ಉದ್ದದ ಗಣಪತಿಯನ್ನ ಮೆರವಣಿಗೆಯಲ್ಲಿ ತಂದು ,ಅದರ “ಪ್ರತಿಷ್ಠಾಪನೆ,ಪೂಜೆ, ಮಹಾಮಂಗಳಾರತಿ,ಪ್ರಸಾಧ ವಿನಿಯೋಗ, ಶ್ರೀವಿಘ್ನನಿವಾರಕ,ಶ್ರಿವಿದ್ಯಾವಿನಾಯಕನ ಕೃಪೆಗೆ ಪಾತ್ರರಾಗಿ “ಗಳೆಂಬ ಆ ಹಬ್ಬಕ್ಕೇ ವಿಶೇಷವಾಗಿ ಆಡುವ ಮಾತುಗಳನ್ನ ಆಡೀ ಆಡೀ ಆಯಾಸಗೊಳ್ಳುವುದೇನು! ಪುಟಾಣಿ ಪುಡಿಯನ್ನ ಬಾಯಿಗೆ ತುಂಬಿಕೊಂಡು ಮತ್ತೊಬ್ಬನ ಎದಿರು ನಿಂತು “ಬೂದಿ ಬುಧವಾರ” ಎಂಬುದೇನು!!!! ರಾತ್ರಿ ಮನೋರಂಜನೆಯ ಹೆಸರಿನ ಮಂಗನ ಕುಣಿತಗಳೇನು !ಮೀಸೆ ಬರಕೊಂಡು,ರುಮಾಲನ್ನು ಸೊಂಟಕ್ಕೆ ಬಿಗಿದು,ಎಡಗಾಲನ್ನ ಡೊಂಕಿಸಿ ನೆಲಕ್ಕೆ ಬಡಿಯುವ ಜನಪದ ಕುಣಿತಗಳೇನು!!
ಮೂರುದಿನ ಮನೆಗೇ ರಜ!!!
ಇನ್ನೊಂದು ಸೊಬಗಿನ ಹಬ್ಬ ದೀಪಾವಳಿ,ತಿಂಗಳ ಮುಂಚೆ ಉಗುಣೆ ಕಾಯಿ ಬಳ್ಳಿಯನ್ನು ಗುರುತಿಸಿ ಅದರ ಹಬ್ಬದ ಸಮಯದಲ್ಲಿ ಚೌಕಾಕಾರದ, ಗೋಲಿಯಾಕಾರದ ಬಂಗಾರಬಣ್ಣದ ಕಾಯಿ ಕೊಯಿದು ಸುರಿದು ಸರ ಮಾಡಿ ಪೂಜೆಯ ಹಸು.ಕರುವಿನ ಗೊರಸು,ಕೋಡಿಗೆ ತೊಡಿಸುವ ಪರಿ.ಕೊಬ್ಬರಿ.ಗೋಟಡಕೆ,ಸಿಂಗಾರ, ಪಚ್ಚೆತೆನೆಗಳ ಗೋಮಾಲೆ, ಹಸುವಿಗೆ ಸ್ನಾನ ಶೃಂಗಾರ, ಹಂಡುಂಡು. ಪೂಜೆ ಶಂಖ,ಜಾಗಟೆ,ಪಟಾಕಿ.
ನಂತರ ಕರಿಗಡಬು ಪಾಯಸ,ಹೋಳಿಗೆ ಊಟ!!!ಹೋ!ಸಂಜೆ ದೇವರು ದೈವಕ್ಕೆ ದೀಪ. ರಾತ್ರಿ ಅಂಟಗೆಪಂಟಗೆ ಯೆಂಬ ದೇವಲೋಕದ ಗಾಯನ!!!
ವರ್ಷಾವಧಿ ಜಾತ್ರೆ, ಶಾಲಾ ವಾರ್ಷಿಕೋತ್ಸವ, ಶಾಲಾ ಪ್ರವಾಸ. ‌ನಂತರ ಬೇಸರವು ಆಯಾಸದಾಯಕವೂ ಅದ ಪರೀಕ್ಷೆ, ಹೇಗೆ ಹೇಗೋ ಮುಗಿದು ಏಪ್ರಿಲ್ ಹತ್ತರಂದೇ ಬರುತ್ತಿದ್ದ “ಪಾಸ್ ಪೈಲ್” ಎಂಬ ರಿಸಲ್ಟ್!!!ತಗಳಿ
“ಏನಾಯಿತೊ?” ನಾಕ್ ಪಾಸ್ ಐದು””ಐದ್ ಪಾಸ್ ಆರು”
ಒಂದೇ ಓಟದಲ್ಲಿ ಮನೆಗೆ ಓಡಿ ಪಾಸ್, ಪಾಸ್…ಅವರೂ ಅದನ್ನೇ ಹೇಳೋದು ಪಾಸ್ ಪಾಸ್.
ಮಾರನೇ ದಿನ ನಾವು ಶಾಲೆಯ ಚೀಲದ ಪುಸ್ತಕ ತೆಗೆದು ತಮ್ಮನಿಗೋ ತಂಗಿಗೋ ‌ಕೊಟ್ಟು ಅದೇ ಚೀಲಕ್ಕೆ ಒಂದೆರಡು ಬಟ್ಟೆ ತುಂಬಿ”ಅಜ್ಜಿಯ ಮನೆಗೆ”ಹೊರಟಾಯಿತು.
ಅಲ್ಲಿ ಬರೀ ಹಪ್ಪಳ,ಬೆಲ್ಲ ಕಾಯಿ, ನೀರುದೋಸೆ ಕಾಯಿ ಹಾಲು, ದನ ಕಾಯುವುದು, ಆಡುವುದು, ನೀರಲ್ಲಿ ಈಜುವುದು, ಬಯ್ಸಿಕೊಳ್ಳುವುದು.ಉಣ್ಣುವುದು,ಮಲಗುವುದು ಮತ್ತೆ ಬೆಳಗ್ಗೆ ಮತ್ತದೇ ದನಕಾಯುವುದು.
ರಜೆ ಮುಗಿಸಿ ಹೊರಡುವಾಗ ನಮ್ಮ‌ ಕೈಮೇಲೆ ಬರುವ ನಮ್ಮಕನಸಿನ ರೂಪದ ಪಾವಲಿಗಳು ,ಫಳಫಳ ಹೊಳೆದು ಖುಷಿ ನೀಡುವುದು!! ಚೀಲವನ್ನು ತುಂಬುವ ಅಮ್ಮನ. ಖುಷಿಗೆ ಕಾರಣವಾಗುವ ಕೊಬ್ಬರಿ,ಹಪ್ಪಳ, ತೆಂಗಿನಕಾಯಿಗಳು. ಅದನ್ನು ಹೊತ್ತು ಮನೆಗೆ ಬರುವಾಗ
ಸಂಜೀವಿನಿ ಪರ್ವತವನ್ನೆ ಹೊತ್ತು ಬರುವಂತಹ ಆಂಜನೆಯರ ಹೊಸ ತಲೆಮಾರಿನ ತಳಿಗಳಾದ ನಾವು!!!!
ಮತ್ತೆ ಮುಂದಿನ ವರ್ಷಕ್ಕೆ ಸಾಕಾಗುವಷ್ಟು ವಿಷಯಗಳು,ಸಾಹಸಗಳು,ಕತೆ ಗಳೊಂದಿಗೆ ನಾವು ಹೊಸತರಗತಿಗೆ ಹೊರಡುವುದು!!
ಹೋ ಬಾಲ್ಯವೇ ನೀನು ನಮಗಂತೂ ಇನ್ನು ಸಿಗುವುದಿಲ್ಲ, ಈ ರಜೆಯಲ್ಲಿ ಮುಂದಿನ ತರಗತಿಯ ಟ್ಯೂಷನ್ನಿಗೋಡುವ ನಮ್ಮ ಮಕ್ಕಳಿಗೂ ನೀನೀಗ ನಿಲುಕುವುದಿಲ್ಲವಲ್ಲಾ!!

-ಹರೀಶ್ ಟಿ. ಜಿ

LEAVE A REPLY

Please enter your comment!
Please enter your name here