ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದಲ್ಲಿ 37 ವರ್ಷಗಳ ಸೇವೆಯ ಬಳಿಕ ವಯೋನಿವೃತ್ತಿ ಹೊಂದುತ್ತಿರುವ ಡಾ. ರತ್ನಾವತಿ ಕೆ. ಅವರನ್ನು ಗುರುವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು. ಅವರ ಜೀವನ ಪ್ರೀತಿ, ವಿದ್ಯಾರ್ಥಿನಿಯರಿಗೆ ಕೊಡುತ್ತಿದ್ದ ಸಕಾಲಿಕ ಸಲಹೆಗಳು, ಸಾಹಿತ್ಯದೊಂದಿಗೆ ಬದುಕಿನ ಪಾಠ ಕಲಿಸುವ, ವೈಯಕ್ತಿಕವಾಗಿ ಸಹಾಯಮಾಡುವ, ನೈತಿಕವಾಗಿ ಬೆಂಬಲವಾಗಿ ನಿಲ್ಲುವ ಗುಣಗಳನ್ನು ಸ್ಮರಿಸಿಕೊಂಡರು. ಡಾ. ಸುಭಾಷಿಣಿ ಶ್ರೀವತ್ಸ, ಡಾ. ಭಾರತಿ ಪಿಲಾರ್, ಡಾ. ಗಿರಿಯಪ್ಪ, ಡಾ. ಮಾಧವ ಎಂ.ಕೆ, ಡಾ. ಭಾರತಿ ಪ್ರಕಾಶ್, ಯಶು ಕುಮಾರ್, ಶ್ರೀಮತಿ ವನಜಾ ಮೊದಲಾದವರು ಮಾತನಾಡಿದರು.
ನಿಕಟಪೂರ್ವ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ, ಪ್ರಭಾರ ಪ್ರಾಂಶುಪಾಲ ಡಾ. ಎ ಹರೀಶ್ ನಿವೃತ್ತರ ಸೇವಾಮನೋಭಾವವನ್ನು ಶ್ಲಾಘಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿದರು. ಕಾಲೇಜಿನ ವತಿಯಿಂದ ಡಾ. ರತ್ನಾವತಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಅವರು ಕಾಲೇಜಿನ ಅಭಿವೃದ್ಧಿಗಾಗಿ ರೂ. 50,000 ವನ್ನು ಕೊಡುಗೆಯಾಗಿ ನೀಡಿದರು. ಪುತ್ರಿ ಅಖಿಲಾ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.