ಬೆಂಗಳೂರು : ತೈಲ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಗರಂ ಆಗಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ತೈಲ ಬೆಲೆ ಏರಿಕೆ ಆಗಿದ್ದರು 70 ರೂಪಾಯಿಗಳ ಗಡಿ ದಾಟಿರಲಿಲ್ಲ. ಮೋದಿ ಸರಕಾರದ ಆಡಳಿತದಲ್ಲಿ ತೈಲ ಬೆಲೆ ಏರಿಕೆ ಆಗಿ ಪೆಟ್ರೋಲ್ ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಾ 82 ರೂಪಾಯಿಗಳ ವರೆಗೆ ಬಂದು ನಿಂತಿದೆ. ಇದರ ಜೊತೆಯಲ್ಲಿ ಅನಿಲ ಬೆಲೆ ಏರಿಕೆಯಾಗಿದ್ದು ಸಬ್ಸಿಡಿ ನೀಡುತ್ತಿಲ್ಲ ಎಂಬ ಕಾರಣಗಳಿಗಾಗಿ ಸಿದ್ದರಾಮಯ್ಯ, ಮಲ್ಲಿಖಾರ್ಜುನ ಖರ್ಗೆ ಮುಂತಾದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಚ್ಚಾ ತೈಲದ ಬೆಲೆ 31 ರೂಪಾಯಿಗೆ ಇಳಿದಿದ್ದರೂ, ಕೇಂದ್ರ ಸರಕಾರ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆ ಮಾಡುತ್ತಿಲ್ಲ. ಅನಿಲ, ಸೀಮೆ ಎಣ್ಣೆ ಹಾಗೂ ಅಬಕಾರಿ ಶುಲ್ಕವನ್ನು ಹೆಚ್ಚು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಾಮಾಜಿಕ ಅಂತರ ಇಲ್ಲದ ಪ್ರತಿಭಟನೆ
ಒಂದು ಕಡೆ ತೈಲ ಬೆಲೆ ಏರಿಕೆ ಪ್ರಮುಖ ವಿಷಯವೇ ಆಗಿದ್ದರೂ, ಹೆಚ್ಚುತ್ತಿರುವ ಕೊರೊನಾ ಆತಂಕವೂ ಇಲ್ಲದೇ ಪ್ರತಿಭಟನಾಕಾರರು, ಅನುಮತಿಯನ್ನೂ ಪಡೆಯದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಮರೆತು ಬೇಕಾಬಿಟ್ಟಿ ಒಡಾಡುತ್ತಿದ್ದಾರೆ. ಸುಮಾರು 3 ಕಿಮೀ ನಷ್ಟು ಟ್ರಾಫಿಕ್ ಜಾಮ್ ಗೂ ಕಾರಣವಾಗಿದ್ದಾರೆ.
ಸೈಕಲ್ ನಲ್ಲಿ ಬಂದ ಸಿದ್ದರಾಮಯ್ಯ
ತೈಲ ಬೆಲೆ ಏರಿಕೆಯನ್ನು ಖಂಡಿಸಿ, ಪ್ರತಿಭಟನೆಗೆ ಸಿದ್ದರಾಮಯ್ಯನವರು ಸೈಕಲ್ ಏರಿ ಬಂದರು. ಕಾರನ್ನು ತಮ್ಮ ಮನೆಯಲ್ಲೇ ಬಿಟ್ಟು, ಜಮೀರ್ ಅಹಮದ್ ಸೇರಿದಂತೆ ಹಲವು ಕಾರ್ಯಕರ್ತರೊಂದಿಗೆ ಸೈಕಲ್ ನಲ್ಲಿ ಬಂದರು.