ಇತರ ಮಹಾನಗರಗಳಿಗಿಂತ ತಾನೇ ಗ್ರೇಟು ಎಂದು ಬೀಗುತ್ತಿದ್ದ ಬೆಂಗಳೂರಿನಲ್ಲಿ ಇಂದು ಒಂದೇ ದಿನ 196 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ ಇಷ್ಟು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿರುವುದು ಇದೇ ಮೊದಲು.
ಇಡೀ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗ , ಬೆಂಗಳೂರಿನಿಂದ ಈ ಸುದ್ದಿ ಹೊರಬಿದ್ದಿರುವುದು ನಗರದ ಜನತೆಯನ್ನೇ ಬೆಚ್ಚಿಬೀಳಿಸಿದೆ.
ಇಂದು ರಾಜ್ಯದಲ್ಲಿ ಒಟ್ಟು 453 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವುಗಳ ಪೈಕಿ 196 ಬೆಂಗಳೂರು ಒಂದರಲ್ಲೇ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಉಡುಪಿ ಸೇರಿದಂತೆ 7 ಜಿಲ್ಲೆಗಳಲ್ಲಿ ಇಂದು ಯಾರಲ್ಲೂ ಸೋಂಕು ಕಾಣಿಸಿಕೊಳ್ಳಲಿಲ್ಲ. ಅದಲ್ಲದೆ, ಒಟ್ಟು 225 ಮಂದಿ ಬಿಡುಗಡೆಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತಷ್ಟು ಆತಂಕ ಮೂಡಿಸಿರುವ ವಿಷಯ ಎಂದರೆ, ಇತ್ತೀಚೆಗೆ ಪತ್ತೆಯಾಗುತ್ತಿರುವ ಸೋಂಕಿತರ ಸಂಪರ್ಕದ ಮೂಲ ತಿಳಿಯದೇ ಇರುವುದು. ಹಲವಾರು ಸೋಂಕಿತರಿಗೆ ಪ್ರಯಾಣದ ಇತಿಹಾಸ ಹಾಗೂ ಸೋಂಕಿನ ಗುಣ ಲಕ್ಷಣಗಳು ಇಲ್ಲದಿದ್ದರೂ ಸೋಂಕು ಕಾಣಿಸಿಕೊಂಡಿರುವುದು ಬೆಂಗಳೂರಿನ ಜನತೆಯಲ್ಲಿ ಮತ್ತಷ್ಟು ಭೀತಿ ಹುಟ್ಟು ಹಾಕಿದೆ.