ಬೆಂಗಳೂರು : ಜುಲೈ 27 ರಿಂದ ಕಾರ್ಯನಿರ್ವಹಿಸಲಿದೆ ದೇಶದ ಅತಿ ದೊಡ್ಡ ಕೋವಿಡ್ ಆರೈಕೆ ಕೇಂದ್ರ!

0
210
Tap to know MORE!

ಬೆಂಗಳೂರು : ಜುಲೈ 27 ಸೋಮವಾರದಿಂದ ಬೆಂಗಳೂರಿನಲ್ಲಿರುವ ದೇಶದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರವು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ರೋಗಲಕ್ಷಣವಿಲ್ಲದ ಕೊರೋನವೈರಸ್ ಸೋಂಕಿತರ ಚಿಕಿತ್ಸೆಗಾಗಿ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಇದು ಬೆಂಗಳೂರು ಉತ್ತರ ತಾಲ್ಲೂಕಿನ ಮಡವಾರದಲ್ಲಿರುವ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ ಮೈದಾನದಲ್ಲಿದೆ.

ಪ್ರಸಾದ್ ಸೇರಿದಂತೆ ಇತರ ಅಧಿಕಾರಿಗಳು ಇಂದು ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದರು. 5,000 ಹಾಸಿಗೆಗಳಿಗೆ ಅವಕಾಶ ಕಲ್ಪಿಸುವ ಸಭಾಂಗಣಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಆದರೆ ಹಾಸಿಗೆಗಳನ್ನು ಬಾಡಿಗೆ ಅಥವಾ ಖರೀದಿ ಆಧಾರದ ಮೇಲೆ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ಮತ್ತು ಗುತ್ತಿಗೆದಾರರ ನಡುವೆ ಇನ್ನೂ ಸಹ ಗೊಂದಲವಿದೆ ಎಂದು ಅವರು ಹೇಳಿದರು. ಸದ್ಯಕ್ಕೆ 28 ವಸ್ತುಗಳನ್ನು ಒಳಗೊಂಡ ಒಂದು ಸೆಟ್ ಅನ್ನು ದಿನಕ್ಕೆ 800 ರೂ.ಗಳ ದರದಲ್ಲಿ ಬಾಡಿಗೆಗೆ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

“ನಾವು 5,000 ಹಾಸಿಗೆಗಳಿಗೆ ಮಾಸಿಕ ಆಧಾರದ ಮೇಲೆ 12 ಕೋಟಿ ರೂ. ಬಾಡಿಗೆ ಪಾವತಿಸುತ್ತಿದ್ದೇವೆ. ಈಗ, ಮರುಬಳಕೆ ಮಾಡಬಹುದಾದ ಕೋಟ್, ಬೆಡ್, ಬೆಡ್ ಶೀಟ್, ರಗ್ ಸೇರಿದಂತೆ ಏಳು ವಸ್ತುಗಳನ್ನು 2.4 ಕೋಟಿ ರೂ.ಗೆ ಖರೀದಿಸಲಾಗುವುದು. ಉಳಿದ ವಸ್ತುಗಳಿಗೆ 3.75 ಕೋಟಿ ರೂ. ಬಾಡಿಗೆ ಪಾವತಿಸಲಾಗುವುದು “ಎಂದು ಅವರು ವಿವರಿಸಿದರು.

‘ಆಹಾರಕ್ಕಾಗಿ ನಾವು ದಿನಕ್ಕೆ 240 ರೂ. ಗಳನ್ನು ಖರ್ಚು ಮಾಡುತ್ತೇವೆ. ಅದನ್ನು ಇಸ್ಕಾನ್, ಇಂದಿರಾ ಕ್ಯಾಂಟೀನ್ ಮತ್ತು ಇತರ ಏಜೆನ್ಸಿಗಳಿಗೆ ವಹಿಸಲಾಗುವುದು. ಪ್ರತಿ 100 ರೋಗಿಗಳಿಗೆ ಒಬ್ಬ ವೈದ್ಯರು, ಇಬ್ಬರು ದಾದಿಯರು, ಸಹಾಯಕ, ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಮಾರ್ಷಲ್‌ಗಳನ್ನು ಒದಗಿಸಲಾಗುವುದು. ಒಟ್ಟು 2,200 ಸಿಬ್ಬಂದಿಗಳನ್ನು ಈ ಕೇಂದ್ರಕ್ಕೆ ನೇಮಿಸಲಾಗುವುದು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here