ಬೆಂಗಳೂರು ಸಾವಿರ , ಕರ್ನಾಟಕ ಎರಡು ಸಾವಿರ !

0
70

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು, ಬೆಂಗಳೂರಿನ 1,148 ಸೇರಿದಂತೆ, ರಾಜ್ಯದಲ್ಲಿ ಇಂದು ಒಟ್ಟು 2,062 ಸೋಂಕಿತರ ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 28,877 ಗೆ ಏರಿಕೆಯಾಗಿದ್ದು, 16,527 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಸೋಂಕಿನ ಭೀತಿಯಿಂದ, ಹಲವಾರು ವಲಸೆ ಕಾರ್ಮಿಕರು ಬೆಂಗಳೂರು ಬಿಟ್ಟು ಮರಳಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದಾರೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,103 ಗೆ ಏರಿದೆ. ದಕ್ಷಿಣ ಕನ್ನಡ (859) ಮತ್ತು ಬಳ್ಳಾರಿ (780) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ. ಇತರ ಯಾವುದೇ ಜಿಲ್ಲೆಗಳಲ್ಲೂ 500ಕ್ಕೂ ಅಧಿಕ ಪ್ರಕರಣಗಳು ಸಕ್ರಿಯವಾಗಿಲ್ಲ.

ಅದಲ್ಲದೆ ರಾಜ್ಯ ರಾಜಧಾನಿದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 12,000 ದಾಟಿದ್ದು, ಹಲವರ ಸೋಂಕಿನ ಮೂಲವೇ ಸಿಗದಿರುವುದು ಸರ್ಕಾರಕ್ಕೆ ತಲೆ ನೋವುಂಟುಮಾಡಿದೆ.

ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ದಾಖಲೆಯ 778 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಬೆಂಗಳೂರು ನಗರವೊಂದರಲ್ಲೇ 418 ಸೋಂಕಿತರು ಗುಣಮುಖರಾಗಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 11,876 ಸೋಂಕಿತರು ಗುಣಮುಖರಾಗಿದ್ದಾರೆ.

ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, ದಕ್ಷಿಣ ಕನ್ನಡದಲ್ಲಿ 183 ಮತ್ತು ಧಾರವಾಡದಲ್ಲಿ 89 ಸೋಂಕಿತರ ಪತ್ತೆಯಾಗಿ ನಂತರದ ಸ್ಥಾನದಲ್ಲಿದೆ.

ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನೂ ಮುಂದುವರೆಸಿದ್ದು, ಇಂದು ದಾಖಲೆಯ 54 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದುವರೆಗೆ 470 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ಬೆಂಗಳೂರು ನಗರದಲ್ಲಿ 22, ಧಾರವಾಡ 7, ಬಳ್ಳಾರಿ 4, ರಾಯಚೂರು ಮತ್ತು ಹಾಸನ ತಲಾ 3, ವಿಜಯಪುರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕಲಬುರ್ಗಿ, ದಕ್ಷಿಣ ಕನ್ನಡ ಮತ್ತು ಬೀದರ್ ತಲಾ 1 ಸೋಂಕಿತರು ಸೋಂಕಿನಿಂದ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here