ಬೆಂಗಳೂರು: ರಾತ್ರಿ ಗಂಡನಿಗಾಗಿ ಕಾದು ಕುಳಿತಿದ್ದ ಗೃಹಿಣಿ ಹೆಂಡತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ತಮ್ಮ ಗ್ರಾಮದ ಸಮೀಪವೇ ಇರುವ ತೋಟದ ಮನೆಯಲ್ಲಿ ಹೆಂಡತಿ ಇದ್ದಳು. ಮನೆಗೆ ಗಂಡ ಬರುವ ಮೊದಲೇ ಅಲ್ಲಿಗೆ ದಾಳಿಯಿಟ್ಟ ದುರ್ಷರ್ಮಿಗಳ ತಂಡ ಚಿನ್ನಾಭರಣಕ್ಕಾಗಿ ಮನೆ ಒಡತಿಯನ್ನು ಬರ್ಬರವಾಗಿ ಕೊಂದು ಪರಾರಿಯಾಗಿದೆ.
ಇದನ್ನೂ ನೋಡಿ : 10 ವರ್ಷದ ಬಾಲಕಿಯನ್ನು ಕೊಂದ 11 ವರ್ಷದ ಬಾಲಕ
ವಾಸಿ ಶ್ವೇತಾ (32) ಎಂಬುವವರನ್ನು ಅವರದೇ ತೋಟದ ಮನೆಯಲ್ಲಿ ದುಷ್ಕರ್ಮಿಗಳು ಗುರುವಾರ ರಾತ್ರಿ ಹತ್ಯೆ ಮಾಡಿದ್ದಾರೆ. ಡಕಾಯಿತಿಗೆ ಬಂದಿದ್ದ ಗುಂಪೊಂದು ಮಹಿಳೆಯನ್ನು ಹತ್ಯೆ ಮಾಡಿ, ಮಾಂಗಲ್ಯ ಸರ ಮತ್ತು ಚಿನ್ನಾಭರಣ ದೋಚಿ ಅಲ್ಲಿಂದ ಪರಾರಿಯಾಗಿದೆ.
ಈಕೆಯ ಪತಿ ಚಂದಾಪುರದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದು, ನಿತ್ಯ ಬೆಳಗ್ಗೆ 8ಕ್ಕೆ ಮನೆಯಿಂದ ಹೊರಟರೆ ರಾತ್ರಿ 8ಕ್ಕೆ ಮನೆಗೆ ವಾಪಸ್ ಆಗುತ್ತಿದ್ದರು. ಆದರೆ ನಿನ್ನೆ ಮೃತ ಮಹಿಳೆ ಅಕ್ಕ ಮತ್ತು ಪತಿಯ ತಾಯಿ, ಮಗು ಮಲೆಮಹದೇಶ್ವರ ದೇವರ ದರ್ಶನಕ್ಕೆ ಸಂಜೆ 4 ಗಂಟೆಗೆ ಹೊರಟಿದ್ದರು. ಬಳಿಕ ಪತಿ ಮುರುಳಿ ಎಂದಿನಂತೆ ಮೆಡಿಕಲ್ ಶಾಪ್ ಗೆ ಹೋಗಿದ್ದಾರೆ. ಇತ್ತ ಮೃತ ಮಹಿಳೆ ಶ್ವೇತಾ ಒಬ್ಬಳೇ ಮನೆಯಲ್ಲಿದ್ದರು.
ಆಗ ಮೊದಲೇ ಅಂದಾಜು ಮಾಡಿ ಕಾದು ಕುಳಿತಿದ್ದ ದುಷ್ಕರ್ಮಿಗಳ ತಂಡ ಮನೆಗೆ ಎಂಟ್ರಿ ಕೊಟ್ಟಿದೆ. ನಡು ಮನೆಯಲ್ಲಿಯೇ ಮಹಿಳೆಯ ಹೊಟ್ಟೆ, ಕುತ್ತಿಗೆ ಬಾಗಕ್ಕೆ ಚಾಕುವಿನಿಂದ ಇರಿದು ಕೊಂದಿರುವ ಪಾತಕಿಗಳು ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಸಿದುಕೊಂಡಿದ್ದಾರೆ. ಬಳಿಕ ಮನೆಯೆಲ್ಲ ಜಾಲಾಡಿ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ.