ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಈತ ತೆಗೆದುಕೊಂಡಿದ್ದು ಬರೋಬ್ಬರಿ 21 ವರ್ಷ!

0
259
Tap to know MORE!

ಆ ಘಟನೆ ನಡೆದಾಗ ಅವನಿಗೆ ಕೇವಲ 20 ವರ್ಷ. ಹತ್ಯಾಕಾಂಡವನ್ನು ಕಣ್ಣಾರೆ ಕಂಡ ಅವನಿಗೆ ಅದು ಆರದ ಗಾಯವಾಗಿ ಮನಸ್ಸಲ್ಲಿ ಅಚ್ಚೊತ್ತಿತ್ತು. ಇದರಿಂದ ಅಲ್ಲೆ ಆತ ಒಂದು ಶಪಥ ಮಾಡಿದ್ದ. ರಕ್ತಸಿಕ್ತವಾಗಿದ್ದ ಮಣ್ಣನ್ನು ಕಣ್ಣಿಗೆ ಒತ್ತಿಕೊಂಡು ಅವನು ಆ ರಕ್ತಚ್ರರಿತ್ರೆಗೆ ಕಾರಣವಾಗಿದ್ದವರನ್ನು ಬಿಡೋದಿಲ್ಲ ಅನ್ನುವ ಪ್ರತಿಜ್ಞೆ ಮಾಡಿದ್ದ. ಪ್ರತೀಕಾರದ ಜ್ವಾಲೆಯನ್ನು ತನ್ನೊಳಗಿಟ್ಟುಕೊಂಡ ಭಾರತದ ವೀರ ಪುತ್ರ, ಇದಕ್ಕಾಗಿ 21 ವರ್ಷಗಳ ಕಾಲ ಕಾದಿದ್ದ!

ಏಪ್ರಿಲ್ 13, 1919 ರಲ್ಲಿ ನಡೆದ ಅಮೃತಸರದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ, ಜಗತ್ತು ಕಂಡ ಘೋರ ಘಟನೆಗಳ ಪೈಕಿ ಒಂದು. ಅಲ್ಲಿ ಜೀವಕ್ಕೆ ಬೆಲೆ ಇರಲಿಲ್ಲ. ಬಂದೂಕಿನ ಆರ್ಭಟಕ್ಕೆ ಅಡೆತಡೆಗಳಿರಲ್ಲಿಲ್ಲ. 50 ಬ್ರಿಟಿಷ್ ಯೋಧರು ತಮ್ಮ ಲೀ-ಎನ್ಫೀಲ್ಡ್ ಬೋಲ್ಟ್ ಆಕ್ಷನ್ ರೈಫಲ್ಗಳಿಂದ 1650 ಸುತ್ತು ಗುಂಡು ಹಾರಿಸಿದ್ದರು. ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಪವಿತ್ರ ಸ್ವರ್ಣಮಂದಿರದಲ್ಲಿ ಬರೀ ಹತ್ತು ನಿಮಿಷಗಳಲ್ಲಿ ಸಾವಿರಾರು ಸಿಖ್ಖರು ಜೀವತೆತ್ತಿದ್ದರು. ಭಾರತೀಯರ ರಕ್ತದಿಂದ ನೆಲ ಒದ್ದೆಯಾಗಿ ಕೆಸರಾಗಿತ್ತು‌.

ಹೌದು, ಆತ ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಡಯರ್ ಮತ್ತು ಮೈಕಲ್ ಒಡ್ವೇರ್ ಹತ್ಯೆಗೆ ನಿರ್ಧರಿಸಿದ್ದ. ತನ್ನ ದೇಶದ ಜನರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತದಿಂದ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿ ತನ್ನದಲ್ಲದ ನೆಲದಲ್ಲಿ, ತನ್ನ ದೇಶವಾಸಿಗಳ ಸಾವಿಗೆ ದ್ವೇಷ ತೀರಿಸಿಕೊಂಡು, ಸಂತೋಷದಿಂದ ನಗು ನಗುತ್ತಾ ಪ್ರಾಣತ್ಯಾಗ ಮಾಡಿದ ಮಹಾವೀರ ಸರ್ದಾರ್ ಉದಮ್ ಸಿಂಗ್..!

ಜಲಿಯನ್ವಾಲಾ ಬಾಗ್ ಹತ್ಯಾಕಾಂಡವನ್ನು ಭಾರತ ಯಾವತ್ತು ಮರೆಯಲು ಸಾದ್ಯವಿಲ್ಲ. ಆ ದಿನ ಇಡೀ ಪಂಜಾಬ್ “ಬೈಸಾಕಿ” ಹಬ್ಬದ ಆಚರಣೆಯಲ್ಲಿತ್ತು. ಅವತ್ತು ಸುಮಾರು ಹತ್ತು ಸಾವಿರ ಮಂದಿ ಜಲಿಯನ್ವಾಲಾ ಬಾಗ್ನ ಸ್ವರ್ಣಮಂದಿರಲ್ಲಿ ಸೇರಿದ್ದರು. ಈ ವಿಷಯ ತಿಳಿದು ಅಲ್ಲಿಗೆ ಬಂದಿದ್ದ ಜನರಲ್ ಡಯರ್ ತನ್ನ ರಾಕ್ಷಸ ಸೈನ್ಯಕ್ಕೆ ‘ಫೈಯರ್ʼ ಅನ್ನುವ ಆಜ್ಞೆ ಕೊಟ್ಟಿದ್ದ. ಅಂದು ಸತ್ತವರ ಸಂಖ್ಯೆ ಸರಕಾರಿ ದಾಖಲೆಗಳ ಪ್ರಕಾರ 1000 ಕ್ಕೂ ಹೆಚ್ಚು. ಆದರೆ ಅಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂದು ಹೇಳಲಾಗುತ್ತದೆ ‌.ಕೆಲವರು ಗುಂಡೇಟಿಗೆ ಬಲಿಯಾದರು, ಕೆಲವರು ಅಲ್ಲೇ ಇದ್ದ ಬಾವಿಗೆ ಹಾರಿ ಸತ್ತರು, ಇನ್ನು ಹಲವರು ಕಾಲ್ತುಳಿತಕ್ಕೆ ಬಲಿಯಾದರು. ಪುರುಷರು, ಮಹಿಳೆಯರು, ಮಕ್ಕಳು, ವೃದ್ದರು ಎಂಬ ಯಾವ ಕರುಣೆಯೂ ಇಲ್ಲದೆ ಅಮಾಯಕರನ್ನು ಬ್ರಿಟಿಷರು ನಿರ್ದಾಕ್ಷಿಣ್ಯವಾಗಿ ಕೊಂದು ಮುಗಿಸಿದ್ದರು.

ಈ ಕ್ರೌರ್ಯಕ್ಕೆ ಭಾರತವಲ್ಲದೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಈ ಹತ್ಯಾಕಾಂಡ ಭಾರತದಲ್ಲಿ ಹಲವು ಕ್ರಾಂತಿಕಾರಿಗಳ ಉಗಮಕ್ಕೆ ಕಾರಣವಾಯಿತು. ಅಂತವರಲ್ಲಿ ಒಬ್ಬ ಸರ್ದಾರ್ ಉದಮ್ ಸಿಂಗ್. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಈತನ ತಂದೆ ಸರ್ದಾರ್ ತೆಹಲ್ ಸಿಂಗ್ ಉದಮ್ ಬಾಲ್ಯದಲ್ಲಿದ್ದಾಗಲೇ ತೀರಿಕೊಂಡಿದ್ದರು. ಹೀಗಾಗಿ ಅವರ ಕುಟುಂಬ ಪಂಜಾಬ್ನಿಂದ ಅಮೃತಸರಕ್ಕೆ ಬಂದು ನೆಲೆಸಿತ್ತು.

ಹತ್ಯಾಕಾಂಡಕ್ಕೆ ಪ್ರತೀಕಾರದ ಶಪಥ ಮಾಡಿದ್ದ ಉದಮ್, ಅಮೇರಿಕಾಕ್ಕೆ ಹೋಗಿ ಅಲ್ಲಿ ಗದಾರ್ ಪಾರ್ಟಿಯಲ್ಲಿ ಸಕ್ರಿಯವಾಗಿ, ಭಾರತದ ಸ್ವತಂತ್ರ್ಯ ಸಂಗ್ರಾಮಕ್ಕೆ ಅಲ್ಲಿಂದಲೇ ಸಹಾಯ ಮಾಡುತ್ತಾನೆ. ಅದೇ ಸಮಯಕ್ಕೆ ಭಗತ್ ಸಿಂಗ್ ಜೊತೆ ಸಂಪರ್ಕ ಸಾಧಿಸುತ್ತಾನೆ. ಭಗತ್‌‌ ಉದಮ್ನನ್ನು ಭಾರತಕ್ಕೆ ಬರಲು ಹೇಳುತ್ತಾನೆ. ಹಾಗಾಗಿ ಉದಮ್ ತನ್ನ ಸಹಚರರೊಂದಿಗೆ ಅಪಾರ ಪ್ರಮಾಣದ ಆಯುಧಗಳೊಂದಿಗೆ ಭಾರತಕ್ಕೆ ಬರುತ್ತಾನೆ. ಪರವಾನಿಗೆ ಇಲ್ಲದ ಬಂದೂಕು ಹೊಂದಿದ ಪ್ರಕರಣದಲ್ಲಿ ಜೈಲು ಸೇರುತ್ತಾನೆ. 5 ವರ್ಷದ ಸೆರೆವಾಸ ಅನುಭವಿಸಿ ಹೊರಬರುವ ಹೊತ್ತಿಗೆ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಈ ಮೂವರನ್ನು ಬ್ರಿಟಿಷರು ಗಲ್ಲಿಗೇರಿಸಿರುತ್ತಾರೆ.

1931 ರಲ್ಲಿ ಜೈಲಿನಿಂದ ಹೊರಬಂದ ಉದಮ್ ಸಿಂಗ್ ಕಾಶ್ಮೀರದ ಮೂಲಕ ಜರ್ಮನಿ ತಲುಪುತ್ತಾನೆ. ಅಲ್ಲಿಂದ ʼರಾಮ್ ಮೊಹಮ್ಮದ್ ಸಿಂಗ್ ಅಜಾದ್ʼ ಅನ್ನುವ ಹೆಸರಿನ ದಾಖಲೆ ಸೃಷ್ಟಿಸಿಕೊಂಡು ಬ್ರಿಟನ್ ತಲುಪುತ್ತಾನೆ. ಅಂಬೇಡ್ಕರ್ ಅವರಿಂದ ಬ್ರಿಟನ್ನಲ್ಲಿ ಹೇಗೆ ಬದುಕಬೇಕೆಂದು ಕಲಿತ. ಅಲ್ಲಿ ಆತ ಹತ್ಯಾಕಾಂಡದ ರೂವಾರಿ ಜನರಲ್‌ ಡಯರ್ ಮತ್ತು ಮೈಕಲ್ ಒಡ್ವೇರ್ ಇಬ್ಬರನ್ನೂ ಕೊಲ್ಲಲು ನಿರ್ಧರಿಸಿದ್ದ. ಆದರೆ ಅಷ್ಟೊತ್ತಿಗಾಗಲೇ ಜನರಲ್ ಡಯರ್ ಸಾವೀಗೀಡಾಗಿದ್ದ. ಬದುಕಿದ್ದವನು ಸಿಖ್ ನರಮೇಧಕ್ಕೆ ಕರೆ ಕೊಟ್ಟಿದ್ದ ಮೈಕಲ್ ಒಡ್ವೇರ್ ಮಾತ್ರ. ಅವನು ನಿವೃತ್ತಿ ಪಡೆದು ಇಂಗ್ಲೆಂಡ್ನಲ್ಲಿ ನೆಲೆಸಿದ್ದ. ಭಾರತೀಯರನ್ನು ಕೊಂದಿದ್ದ ಆ ರಾಕ್ಷಸನನ್ನು ಅಲ್ಲಿನ ಜನ ದೇವರಂತೆ ಕಾಣುತ್ತಿದ್ದರು!

ಅಂದು 1940, ಮಾರ್ಚ್‌ 13ನೇ ತಾರೀಖು. ಲಂಡನ್ನ “ಕ್ಯಾಕ್ಸ್ಟನ್” ಹಾಲ್ನಲ್ಲಿ ಭವ್ಯ ಸಮರಂಭವೊಂದರಲ್ಲಿ ಮೈಕೆಲ್ ಒಡ್ವೇರ್ ಪಾಲ್ಗೊಂಡಿದ್ದ. ಕ್ಷಣಾರ್ಧದಲ್ಲಿ ಗುಂಡಿನ ಸದ್ದು ಕೇಳಿತ್ತು. ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಸತ್ತುಬಿದ್ದಿದ್ದ. ಗುಂಡು ಹೊಡೆದ ಉದಮ್ ಯಾವುದೇ ಅಳುಕ್ಕಿಲ್ಲದೆ ನಿಂತಿದ್ದ. ಅವನನ್ನು ಪೋಲಿಸರು ಬಂಧಿಸಿ ಸೆಂಟ್ರಲ್ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದರು. ಆಗ ಉದಮ್ ತನ್ನ ಪ್ರತಿಕಾರದ ಬಗ್ಗೆ ಹೇಳಿ ಸಂತಸಪಟ್ಟಿದ್ದ. ನಿರೀಕ್ಷೆಯಂತೆಯೇ ಉದಮ್ ಗೆ ಗಲ್ಲುಶಿಕ್ಷೆ ಜಾರಿಯಾಗಿತ್ತು. 1940ರ ಜುಲೈ 31 ರಂದು ಉದಮ್ನನ್ನು ಗಲ್ಲಿಗೇರಿಸಲಾಯಿತು. ತನ್ನ ದೇಶದ ಜನರ ಸಾವಿಗೆ ಪ್ರತೀಕಾರ ತೀರಿಸಲೆಂದೇ ಜೀವನವನ್ನು ಮುಡಿಪಾಗಿಟ್ಟ ಸ್ವಾತಂತ್ರ್ಯ ಸೇನಾನಿ, ಅಪ್ರತಿಮ ದೇಶಭಕ್ತ ಉದಮ್ ಸಿಂಗ್ ಸದಾ ನೆನಪಿನಲ್ಲಿ ಉಳಿಯುತ್ತಾರೆ.

ಸುರೇಶ್ ರಾಜ್
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here