ಭಾರತದಲ್ಲಿ 24.7 ಕೋಟಿ ಮಕ್ಕಳ ಶಿಕ್ಷಣದ ಮೇಲೆ ಲಾಕ್ಡೌನ್ ಪರಿಣಾಮ ಬೀರಿದೆ : ಯುನಿಸೆಫ್

0
176
Tap to know MORE!

ಭಾರತದಲ್ಲಿ ಕೊರೋನಾ ಸಾಂಕ್ರಾಮಿಕದ ಭೀತಿಯಿಂದ ಜಾರಿಯಲ್ಲಿದ್ದ ಲಾಕ್‌ಡೌನ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ದಾಖಲಾದ ಸುಮಾರು 24 ಕೋಟಿ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಯುನಿಸೆಫ್ ಸಿದ್ಧಪಡಿಸಿದ ವರದಿಯೊಂದು ತಿಳಿಸಿದೆ.

ಅದರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಪಡೆಯುತ್ತಿರುವ 2.8 ಕೋಟಿ ಮಕ್ಕಳೂ ಸೇರಿದ್ದಾರೆ.

ವರದಿಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ಪರಿಣಾಮದಿಂದ ದಕ್ಷಿಣ ಏಷ್ಯಾದ ಕನಿಷ್ಠ 600 ದಶಲಕ್ಷ ( ಸುಮಾರು 60 ಕೋಟಿ) ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರಿದೆ. ಮಗುವಿನ ಶಿಕ್ಷಣ ಮತ್ತು ಕಲಿಕೆಯ ಬಗ್ಗೆ ಭಾರತದ ದೃಷ್ಟಿಕೋನದಲ್ಲಿ ಬಹಿರಂಗಪಡಿಸಿದ ಯುಎನ್ ವರದಿ, “ಭಾರತದಲ್ಲಿ, ಶಾಲೆಗಳು ಮುಚ್ಚಿರುವುದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ದಾಖಲಾದ 24.7 ಕೋಟಿ ಮಕ್ಕಳ ಮೇಲೆ ಪರಿಣಾಮ ಬೀರಿವೆ. ಇದು ಪೂರ್ವಭಾವಿ ವ್ಯಾಸಂಗ ಮಾಡುತ್ತಿದ್ದ ಸುಮಾರು 2.8 ಕೋಟಿ ಮಕ್ಕಳ ಮೇಲೆಯೂ ಬಹುದೊಡ್ಡ ಪರಿಣಾಮ ಬೀರಿದೆ. ಇದು ಕೊವಿಡ್-19 ಬಿಕ್ಕಟ್ಟಿನ ಮೊದಲು ಶಾಲೆಯಿಂದ ಹೊರಗುಳಿದಿದ್ದ 60 ಲಕ್ಷಕ್ಕೂ ಅಧಿಕ ಮಕ್ಕಳಿಗಿಂತ ಹೆಚ್ಚುವರಿಯಾಗಿರುತ್ತದೆ “.

ಆದರೆ, ವೆಬ್ ಪೋರ್ಟಲ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಟಿವಿ ಚಾನೆಲ್‌ಗಳು, ರೇಡಿಯೋ ಮತ್ತು ಮಕ್ಕಳನ್ನು ತಲುಪಲು ಪಾಡ್‌ಕಾಸ್ಟ್‌ಗಳು, ದೀಕ್ಷಾ ಪ್ಲಾಟ್‌ಫಾರ್ಮ್, ಸ್ವಯಂ ಪ್ರಭಾ ಟಿವಿ ಚಾನೆಲ್‌ಗಳು, ಇ-ಪಾಠಶಾಲ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ರಾಷ್ಟ್ರೀಯ ಭಂಡಾರ ಮುಂತಾದ ಅನೇಕ ಇ-ಪ್ಲಾಟ್‌ಫಾರ್ಮ್‌ಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಮುಂದುವರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಾಡಿದ ಪ್ರಯತ್ನಗಳನ್ನು ಈ ವರದಿಯು ಎತ್ತಿ ತೋರಿಸಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ, ಇತ್ತೀಚೆಗೆ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಲಿಕೆಗೆ ಮಾರ್ಗದರ್ಶನ ನೀಡಲು, ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕೆಲವು ಚಟುವಟಿಕೆಗಳೊಂದಿಗೆ ಸಿದ್ಧಪಡಿಸಿದೆ.

ಮುಖ್ಯವಾಗಿ, ಯುನಿಸೆಫ್ ವರದಿಯು ಭಾರತದಲ್ಲಿ ಸುಮಾರು ಕಾಲು ಭಾಗದಷ್ಟು ಕುಟುಂಬಗಳಿಗೆ (ಶೇಕಡಾ 24) ಮಾತ್ರ ಇಂಟರ್ನೆಟ್ ಸಂಪರ್ಕ ಹೊಂದಿವೆ ಎಂದು ಸೂಚಿಸಿದೆ.
ಹೆಚ್ಚಿನ ಸಂಖ್ಯೆಯ ಮಕ್ಕಳು ದೂರದ ಊರುಗಳಲ್ಲಿ ಕಲಿಕೆಯ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು, ಮಕ್ಕಳ ರಕ್ಷಣೆ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸೇವೆಯಾದ ‘ಚೈಲ್ಡ್‌ಲೈನ್’ ಮಾರ್ಚ್ 20 ರಿಂದ ಏಪ್ರಿಲ್ 10 ರವರೆಗೆ 21 ದಿನಗಳಲ್ಲಿ 4,60,000 ಕರೆಗಳನ್ನು ಸ್ವೀಕರಿಸಿದೆ. ಇದು ಅವರ ನಿಯಮಿತ ಕರೆಗಳಿಗಿಂತ ಶೇಕಡಾ 50 ರಷ್ಟು ಹೆಚ್ಚಾಗಿದೆ.

LEAVE A REPLY

Please enter your comment!
Please enter your name here