ಮಂಗಳೂರಿನಲ್ಲಿ ಶೀಘ್ರವೇ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪನೆ : ವೇದವ್ಯಾಸ ಕಾಮತ್

0
166
Tap to know MORE!

ಮಂಗಳೂರು: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ‌ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮಂಗಳೂರಿನಲ್ಲಿ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪಿಸಲಾಗವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ನಗರದಲ್ಲಿರುವ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ 4 ಮಂದಿಗೆ ಈ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ. ಮಂಗಳೂರಿನಲ್ಲಿ ಪ್ಲಾಸ್ಮಾ ಸಂಗ್ರಹ ಕೇಂದ್ರ ಇಲ್ಲದಿರುವುದರಿಂದ ಬೆಂಗಳೂರಿನ ಎಚ್‌ಸಿಜಿ ಪ್ಲಾಸ್ಮಾ ಬ್ಯಾಂಕ್‌ನಿಂದ ಪ್ಲಾಸ್ಮಾ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲದಿನಗಳ ಹಿಂದೆ ವೃದ್ಧೆಯೊಬ್ಬರಿಗೆ ಪ್ಲಾಸ್ಮಾ ತಂದು ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಟ್ಕಳ ಮೂಲದ 85 ವರ್ಷ ಪ್ರಾಯದ ವೃದ್ಧರೊಬ್ಬರ ಚಿಕಿತ್ಸೆಗೆ ಅಗತ್ಯವಿದ್ದ ಪ್ಲಾಸ್ಮಾವನ್ನು ಕರೊನಾದಿಂದ ಗುಣಹೊಂದಿದ ಅನಿವಾಸಿ ಉದ್ಯಮಿ ಬಜ್ಪೆಯ ಹೈದರ್ ಅಲಿ ಮತ್ತು ಸುರತ್ಕಲ್ ಇಡ್ಯಾದ ವಕೀಲ ಜೀಶಾನ್ ಅಲಿ ದಾನ ಮಾಡಿದ್ದರು.

ರಾಜ್ಯದ ಏಕೈಕ ಪ್ಲಾಸ್ಮಾ ಸಂಗ್ರಹ ಕೇಂದ್ರವಾಗಿರುವ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನಿಂದ ಈಗಾಗಲೇ ವಿವಿಧ ಜಿಲ್ಲೆಗಳಿಗೆ ಪ್ಲಾಸ್ಮಾ ರವಾನಿಸಲಾಗುತ್ತಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಸಂಗ್ರಹಕ್ಕೆ ವ್ಯವಸ್ಥೆ ಇದೆಯಾದರೂ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೂ ಸಾಕಷ್ಟು ಸಂಖ್ಯೆಯ ‘ಪ್ಲಾಸ್ಮಾ’ ದಾನಿಗಳಿದ್ದಾರೆ. ಆದರೆ ಪ್ಲಾಸ್ಮಾ ಸಂಗ್ರಹ ಕೇಂದ್ರವಿರದ ಕಾರಣ ದಾನ ಮಾಡುವವರು ಬೆಂಗಳೂರಿಗೆ ಹೋಗಬೇಕಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಫ್ಲಾಸ್ಮಾ ಥೆರಪಿ ಬಳಸಿ ವೈದ್ಯಕೀಯ ಸಂಶೋಧನೆ ನಡೆಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಪ್ಲಾಸ್ಮಾ ಕೇಂದ್ರ ಸ್ಥಾಪಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿ ಶೀಘ್ರ ಪ್ಲಾಸ್ಮಾ ಥೆರಪಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here