ಮಂಗಳೂರು: ಮಂಗಳೂರು ವಿವಿ ಕೊಣಾಜೆ ಕ್ಯಾಂಪಸ್ ನಲ್ಲಿ 2017ರಲ್ಲಿ ಆರಂಭವಾದ ಪ್ರಥಮ ದರ್ಜೆ ಕಾಲೇಜಿಗೆ ಸರಕಾರದ ಅನುಮೋದನೆ ಲಭಿಸದಿರುವುದು ಹಾಗೂ ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಆ ಕಾಲೇಜನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮುಚ್ಚಲು ತೀರ್ಮಾನಿಸಲಾಗಿದೆ.
2021- 22ನೇ ಅವಧಿಗೆ ಪ್ರವೇಶಾತಿ ಸ್ಥಗಿತಗೊಂಡಿರುವುದು ಅಲ್ಲದೇ ಮೊದಲ ಹಾಗೂ ದ್ವಿತೀಯ ವರ್ಷವನ್ನು ಈಗಾಗಲೇ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಅವರು ಅಪೇಕ್ಷಿಸುವ ಹತ್ತಿರದ ಕಾಲೇಜುಗಳಿಗೆ ವರ್ಗಾವಣೆ ಮಾಡುವ ಕುರಿತು ವಿವಿ ಚಿಂತನೆ ನಡೆಸಿದೆ, ಜತೆಗೆ ಹಂಪನಕಟ್ಟೆಯಲ್ಲಿರುವ ಕಾಲೇಜಿನಲ್ಲಿ ಅವಕಾಶ ನೀಡುವ ಬಗ್ಗೆಯೂ ಮಾತು ಕತೆ ನಡೆಸಲಾಗಿದೆ.
ಕರ್ನಾಟಕ ರಾಜ್ಯ ವಿವಿ ಕಾಯ್ದೆ ಪ್ರಕಾರ ಯಾವುದೇ ವಿವಿ ಗೆ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಅವಕಾಶವಿಲ್ಲ. ಆದರೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೈಗೆಟಕುವ ದರದಲ್ಲಿ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಕೊಣಾಜೆಯಲ್ಲಿ ಪ್ರ.ದ ಕಾಲೇಜು ಸ್ಥಾಪಿಸಲಾಗಿತ್ತು. ಕಳೆದೆರಡು ವರ್ಷಗಳಿಂದ ಇಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ಇದೀಗ ತೃತೀಯ ಶೈಕ್ಷಣಿಕ ವರ್ಷ ಇರುವುದರಿಂದ ವಿವಿ ಡಿಗ್ರಿ ನೀಡಬೇಕಾಗುತ್ತದೆ. ಆದರೆ ಸರಕಾರದ ಅನುಮತಿ ಇಲ್ಲದ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವ ಆಧಾರದಲ್ಲಿ ಡಿಗ್ರಿ ನೀಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಇದರ ಜತೆಗೆ ಸರಕಾರವು ವಿವಿ ಯ ಸೃಜನೆಗೆ ಅವಕಾಶ ನೀಡುವುದಿಲ್ಲ ಮತ್ತು ವಿವಿ ಯ ಆಂತರಿಕ ಖರ್ಚಿನಿಂದಲೇ ವೆಚ್ಚಗಳನ್ನು ನಡೆಸಬೇಕು ಎಂಬ ಶರತ್ತನ್ನು ಹಾಕಿತ್ತು. ವಿವಿ ಯು ಪ್ರತಿ ವರ್ಷ ಸುಮಾರು 1 ಕೋ ರೂ ಅತಿಥಿ ಉಪನ್ಯಾಸಕರ ವೇತನ ಇತ್ಯಾದಿಗಳಿಗೆ ಮೀಸಲಿಡಬೇಕಾಗುತ್ತದೆ. ಕೊರೊನಾ ಕಾರಣದಿಂದ ಆರ್ಥಿಕ ಮಿತವ್ಯಯಕ್ಕೆ ಮುಂದಾಗಿರುವ ವಿವಿ ಕಾಲೇಜನ್ನು ಮುಚ್ಚುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಮುಂದಾಗಿದೆ