ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪದವಿ ಅಧ್ಯಯನವನ್ನು ಮುಂದುವರೆಸಲು ಬಯಸುವ ಕೇರಳದ ಕನ್ನಡ ವಿದ್ಯಾರ್ಥಿಗಳಿಗೆ ಅರ್ಹತಾ ಪ್ರಮಾಣಪತ್ರದ ಶುಲ್ಕವನ್ನು ಕಡಿಮೆ ಮಾಡಲು ವಿವಿ ನಿರ್ಧರಿಸಿದೆ. ಅರ್ಹತಾ ಪ್ರಮಾಣಪತ್ರ ಪಡೆಯಲು ಈ ಮೊದಲು 2,200 ರೂ. ಇತ್ತು. ಕಾಸರಗೋಡಿನ ಅನೇಕ ಕನ್ನಡ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಲ್ಲಿ ಪದವಿ ವಿಭಾಗಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಹೆಚ್ಚುವರಿ ಶುಲ್ಕವನ್ನು ಪಾವತಿಸಲಾಗದ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕಾಲೇಜುಗಳಿಗೆ ಪ್ರವೇಶ ಪಡೆಯದೆ ಹಿಂದಿರುಗುತ್ತಿದ್ದಾರೆ ಎಂದು ಕನ್ಯಾನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ್ ಭಟ್ ಮಾಹಿತಿ ನೀಡಿದರು.
ಹೆಚ್ಚಿನ ಅರ್ಹತಾ ಪ್ರಮಾಣಪತ್ರ ಶುಲ್ಕದಿಂದಾಗಿ, ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದರು. ಗಡಿನಾಡು / ಹೊರನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಕ್ಕಾಗಿ ಮೈಸೂರು ವಿಶ್ವವಿದ್ಯಾಲಯ 250 ರೂ. ಮಾಡಿದ್ದರಿಂದ, ಮಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಕೂಡ ಗಡಿನಾಡು / ಹೊರನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಶುಲ್ಕವನ್ನು 250 ರೂ.ಗೆ ಇಳಿಸಲು ಅನುಮೋದನೆ ನೀಡಿದೆ.
ಇದನ್ನೂ ನೋಡಿ : ಸೆಪ್ಟೆಂಬರ್ 15 ರಿಂದ ಮಂಗಳೂರು ವಿವಿ ಪದವಿ ಪರೀಕ್ಷೆ : ಪ್ರಕಟಣೆ
ಶುಲ್ಕ ಕಡಿತದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಬಯಸುವ ಅನೇಕ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ ಎಸ್ ಯಡಪಡಿತ್ತಾಯ ಹೇಳಿದರು. ಶುಲ್ಕವನ್ನು ಕಡಿಮೆ ಮಾಡುವ ನಿರ್ಧಾರವು ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿ ಅನುಪಾತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.