ಮಂಗಳೂರು ವಿವಿ : ಆನ್ಲೈನ್-ಆಫ್‌ಲೈನ್ ತರಗತಿಗಳ ಆಯ್ಕೆ ವಿದ್ಯಾರ್ಥಿಗಳಿಗೆ ಬಿಟ್ಟದ್ದು

0
84

ಮಂಗಳೂರು ಅ.29: ನವೆಂಬರ್ 17 ರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ, ಮಂಗಳೂರು ವಿವಿ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿಗಳನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟಿದೆ.

ಆನ್ಲೈನ್-ಆಫ್‌ಲೈನ್ ಆಯ್ಕೆಗೆ ಅವಕಾಶ

“ಸ್ಥಳೀಯ ಕೋವಿಡ್ -19 ಪರಿಸ್ಥಿತಿ ಮತ್ತು ರಾಜ್ಯ ಸರ್ಕಾರ ಮತ್ತು ಯುಜಿಸಿಯ ನಿರ್ದೇಶನಗಳನ್ನು ಪರಿಶೀಲಿಸಿದ ನಂತರ, ಕಾಲೇಜುಗಳು ಪ್ರಾರಂಭವಾಗುವ ದಿನಾಂಕಗಳನ್ನು ವಿಶ್ವವಿದ್ಯಾಲಯವು ಅಧಿಕೃತವಾಗಿ ಪ್ರಕಟಿಸಲಿದೆ. ಸದ್ಯಕ್ಕೆ ವಿದ್ಯಾರ್ಥಿಗಳ ಹಾಜರಾತಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳ ಆಯ್ಕೆಯನ್ನು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ನೀಡಲಾಗುತ್ತದೆ” ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದ್ದಾರೆ.

ಕಾಲೇಜುಗಳ ಪುನರಾರಂಭಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯವು ಎರಡು ಮಾದರಿಗಳಲ್ಲಿ ತರಗತಿಗಳನ್ನು ನಡೆಸಲು ಸಜ್ಜಾಗಿದೆ. ಕಾಲೇಜುಗಳು ತಮಗೆ ಸೂಕ್ತವಾದ ಮಾದರಿಯನ್ನು ನಿರ್ಧರಿಸಬಹುದು. ಅವರು ಪರ್ಯಾಯ ದಿನಗಳಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್ ತರಗತಿಗಳನ್ನು ನಡೆಸಬಹುದು ಅಥವಾ ಕಾಲೇಜುಗಳಲ್ಲಿ ನಡೆಯುವ ಆಫ್‌ಲೈನ್ ತರಗತಿಗಳನ್ನು ವರ್ಚುವಲ್ ಮತ್ತು ಲೈವ್ ಸ್ಟ್ರೀಮ್ ತರಗತಿಗಳಾಗಿ ಪರಿವರ್ತಿಸಬಹುದು.

ಮಾರ್ಗಸೂಚಿಗಳ ಪಾಲನೆ ಕಡ್ಡಾಯ

ಆಫ್‌ಲೈನ್ ತರಗತಿಗಳನ್ನು ನಡೆಸುವಾಗ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿದೆ ಎಂದು ಅವರು ಹೇಳಿದರು. ಅದರಂತೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಪ್ರತಿ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು.

ಹೆಚ್ಚುವರಿ ತರಗತಿಗಳು

ಇದರ ಪರಿಣಾಮವಾಗಿ, ಹೆಚ್ಚುವರಿ ತರಗತಿಗಳನ್ನು ಶಿಕ್ಷಕರು ನಡೆಸಬೇಕಾಗುತ್ತದೆ ಮತ್ತು ಇದು ಉಪನ್ಯಾಸಕರ ಮೇಲೆ ಒತ್ತಡ ಹೆಚ್ಚಾಗಬಹುದು. ಒತ್ತಡವನ್ನು ತೆಗೆದುಹಾಕಲು, ಆನ್‌ಲೈನ್ ತರಗತಿಗಳನ್ನು ಕೇವಲ ಪರ್ಯಾಯ ದಿನಗಳಲ್ಲಿ ನಡೆಸಬಹುದು.

ಶೇ.50 ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಆದ್ಯತೆ ನೀಡಿದರೆ, ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ಒಂದೇ ಸಮಯದಲ್ಲಿ ನಡೆಸಬಹುದು. ತರಗತಿಗಳ ವೀಡಿಯೊವನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗುತ್ತದೆ. ಒಂದು ವೇಳೆ, ತಾಂತ್ರಿಕ ದೋಷದಿಂದಾಗಿ ವಿದ್ಯಾರ್ಥಿಯು ಲೈವ್ – ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಅವನು / ಅವಳು ಬಳಿಕ ವೀಡಿಯೊವನ್ನು ವೀಕ್ಷಿಸಬಹುದು ಎಂದು ಯಡಿಪಡಿತ್ತಾಯರು ವಿವರಿಸಿದರು.

ನವೆಂಬರ್ 15 ರ ಒಳಗೆ ಅಂತಿಮ ಪರೀಕ್ಷೆ ಫಲಿತಾಂಶ

ಮಂಗಳೂರು ವಿಶ್ವವಿದ್ಯಾಲಯವು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶಗಳನ್ನು ನವೆಂಬರ್ 15 ರೊಳಗೆ ಘೋಷಿಸಲು ಪ್ರಯತ್ನಿಸುತ್ತಿದೆ ಮತ್ತು ಮೊದಲ ವರ್ಷದ ಸ್ನಾತಕೋತ್ತರ ಕೋರ್ಸ್‌ಗಳನ್ನು ಡಿಸೆಂಬರ್ 1 ರೊಳಗೆ ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. “ನಾವು ಎಲ್ಲಾ ಪ್ರವೇಶ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲು ಮತ್ತು ಪ್ರಥಮ ವರ್ಷದ ಕೋರ್ಸ್‌ಗಳನ್ನು ಡಿಸೆಂಬರ್ ಮೊದಲ ವಾರದೊಳಗೆ ಪ್ರಾರಂಭಿಸಲು ಯೋಜಿಸುತ್ತಿದ್ದೇವೆ” ಅವರು ಹೇಳಿದರು.

ಈಗಾಗಲೇ, ಎರಡನೇ ಮತ್ತು ಮೂರನೇ ವರ್ಷದ ಪದವಿ ತರಗತಿಗಳು ಆನ್‌ಲೈನ್‌ನಲ್ಲಿ ಪ್ರಾರಂಭವಾಗಿವೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದು ವಿಳಂಬವಾಗುವುದರೊಂದಿಗೆ, ಪರೀಕ್ಷೆಯ ಕ್ಯಾಲೆಂಡರ್ ಅನ್ನೂ ಬದಲಾಯಿಸುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here