ಮಂಗಳೂರು ವಿವಿಯಲ್ಲಿ 41 ನೇ ಸಂಸ್ಥಾಪನಾ ದಿನಾಚರಣೆ | ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ ಅಶ್ವತ್ಥ್‌ನಾರಾಯಣ್

0
230
Tap to know MORE!

ಮಂಗಳೂರು ಡಿ.19: ನವಭಾರತದ ಕಲ್ಪನೆ ನಿಜವಾಗಲು ನೂತನ ಶಿಕ್ಷಣ ಪದ್ಧತಿಯಿಂದ ಮಾತ್ರ ಸಾಧ್ಯ. ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಪದ್ಧತಿಯ ಪರಿಣಾಮಕಾರಿ ಯೋಜನೆಗೆ ಸರ್ಕಾರ ಸರ್ವಪ್ರಯತ್ನ ಮಾಡಲಿದೆ, ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ. ಅಶ್ವಥ್‌ ನಾರಾಯಣ ಸಿ ಎನ್‌ ಅಭಿಪ್ರಾಯಪಟ್ಟರು.

ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 41 ನೇ ಸಂಸ್ಥಾಪನಾ ದಿನಾಚರಣೆಯನ್ನು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಆನ್‌ಲೈನ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು 34 ವರ್ಷಗಳ ಜಾರಿಗೆ ಬಂದಿರುವ ಶಿಕ್ಷಣ ಸರ್ವರಂಗದಲ್ಲೂ ಪ್ರಗತಿಗೆ ಸಹಾಯಕವಾಗಲಿದೆ, ಎಂದರು. ಇದೇ ವೇಳೆ ಅವರು ಸಿಂಡಿಕೇಟ್‌ ಸದಸ್ಯ ಪ್ರೊ. ಕರುಣಾಕರ್‌ ಎ. ಕೋಟೇಕಾರ್‌ ಅವರ “ರಾಷ್ಟ್ರೀಯ ಶಿಕ್ಷಣ ನೀತಿ- 2020” ವೀಡಿಯೋ ಸರಣಿ ಲೋಕಾರ್ಪಣೆ ಮಾಡಿ ಶುಭಕೋರಿದರು.

ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿಗೆ ಕುಲಸಚಿವರ ಭೇಟಿ | ಬೋಧಕ-ಬೋಧಕೇತರ ಸಿಬ್ಬಂದಿಗಳೊಂದಿಗೆ ಸಭೆ

ಇದೇ ವೇಳೆ ತಮ್ಮ ವೀಡಿಯೋ ಸರಣಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಕರುಣಾಕರ್‌ ಎ. ಕೋಟೇಕಾರ್‌, ನಮ್ಮ ಶಿಕ್ಷಣ ಪದ್ಧತಿಯಲ್ಲಿರುವ ದೋಷದಿಂದಲೇ ನಮ್ಮಲ್ಲಿ ವಿದ್ಯಾವಂತರಿಗೇ ನಮ್ಮ ದೇಶದ ಬೆಲೆ ತಿಳಿಯುತ್ತಿಲ್ಲ. ನೂತನ ಶಿಕ್ಷಣ ಪದ್ಧತಿ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ನೆರವಾಗಲಿದೆ. “ಮಕ್ಕಳ ಮೆದುಳಿನ 85% ಬೆಳವಣಿಗೆ 6-8 ವರ್ಷಗಳ ನಡುವೆ ನಡೆಯುತ್ತದೆ. ಇದಕ್ಕಾಗಿ ಮೌಲ್ಯಯುತ ಆರಂಭಿಕ ಶಿಕ್ಷಣ, ನವೀಕೃತ ಪಠ್ಯಕ್ರಮ, ಗುಣಮಟ್ಟದ ಸಂಶೋಧನೆ, ಕಲೆ, ಮಾನವಿಕ, ಸಾಮಾಜಿಕ ವಿಜ್ಞಾನ ಮತ್ತು ಸಾಂಧರ್ಭಿಕ ಕೋರ್ಸ್‌ಗಳಿಗೆ ಹೆಚ್ಚಿನ ಮೌಲ್ಯವಿರಲಿದೆ,”ಎಂದರು.

ಪ್ರೊ. ಕರುಣಾಕರ್‌ ಎ. ಕೋಟೇಕಾರ್‌ ಅವರ “ರಾಷ್ಟ್ರೀಯ ಶಿಕ್ಷಣ ನೀತಿ- 2020” ವೀಡಿಯೋ ಸರಣಿಯಲ್ಲಿ ನೂತನ ಶಿಕ್ಷಣ ಪದ್ಧತಿ -2019 ವನ್ನು ಕನ್ನಡದಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. NEP- 2020 Awareness and Implementation (https://mangaloreuniversity.ac.in/nep) ಎಂಬ ಯೂ ಟ್ಯೂಬ್‌ ಚಾನೆಲ್‌ ಮೂಲಕ ಈಗಾಗಲೇ 5 ಗಂಟೆ ಅವಧಿಯ 27 ವೀಡಿಯೋಗಳನ್ನು ರಚಿಸಲಾಗಿದೆ. ನೂತನ ಶಿಕ್ಷಣ ಪದ್ಧತಿಯನ್ನು ಸರಳಗೊಳಿಸಿ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂಸ್ಥಾಪನಾ ಭಾಷಣ ನೆರವೇರಿಸಿದ ಕಾರ್ಯಕ್ರಮದ ಮುಖ್ಯ ಅತಿಥಿ ಕೈಗಾ ಅಣು ವಿದ್ಯುತ್‌ ಸ್ಥಾವರದ ನಿರ್ದೇಶಕ ಆರ್‌. ಸತ್ಯನಾರಾಯಣ, ಬಹುಶಿಸ್ತಿನ ಶಿಕ್ಷಣ ವಿಧಾನ ಮತ್ತು ಸಮಾಜ- ಹಳೆ ವಿದ್ಯಾರ್ಥಿಗಳ ಕೊಡುಗೆ ಮಂಗಳೂರು ವಿಶ್ವವಿದ್ಯಾನಿಲಯ ತನ್ನ ವಿಶನ್‌ -2030 ನ್ನು ಸಾಧಿಸಲು ನೆರವಾಗಲಿದೆ, ಎಂದರು. “ಅಲ್ಪಾವಧಿಯ ಕೋರ್ಸ್‌ಗಳಿಗೆ ಮನ್ನಣೆ, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯ ಒದಗಿಸುವಿಕೆ, ಉದ್ಯಮ- ಸರಕಾರದ ಜೊತೆಗಿನ ಸಂಬಂಧ, ಜಾಗತಿಕ ದೃಷ್ಟಿಕೋನ, ವಿಶ್ವವಿದ್ಯಾನಿಲಯಗಳನ್ನು ಜೀವನದುದ್ದಕ್ಕೂ ಬೇಕಾಗುವ ಶಿಕ್ಷಣ ಒದಗಿಸುವ ತಾಣಗಳಾಗಿಸುವುದು ಮುಖ್ಯ,” ಎಂದು ಅಭಿಪ್ರಾಯಪಟ್ಟರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಸಮಾಜದ ಸಹಕಾರದೊಂದಿಗೆ ವಿಶ್ವವಿದ್ಯಾನಿಲಯ ಇನ್ನಷ್ಟು ಸಾಧಿಸುವ ಸಾಮರ್ಥ್ಯ ಹೊಂದಿದೆ ಎಂದರು. ಪರಿಸರ ಸ್ನೇಹಿ, ಪೇಪರ್‌ ರಹಿತ ಕ್ಯಾಂಪಸ್‌ ನಮ್ಮ ಆದ್ಯತೆ. ವಿವಿ ಹಳ್ಳಿಯೆಡೆಗೆ ಸಾಗಬೇಕೆಂಬ ದೃಷ್ಟಿಯಿಂದ ಈಗಾಗಲೇ 5 ಹಳ್ಳಿಗಳನ್ನು ಮತ್ತು 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ನೂತನ ಶಿಕ್ಷಣ ಪದ್ಧತಿ ಕುರಿತು ಕರಡು ರಚಿಸಲು 9 ಸಿಂಡಿಕೇಟ್‌ ಉಪಸಮಿತಿಗಳನ್ನು ರಚಿಸಿ ಜಾರಿಗೆ ಸಿದ್ಧತೆ ನಡೆದಿದೆ. ಅತ್ಯಾಧುನಿಕ ಪರೀಕ್ಷಾಂಗ ಭವನ ಬರುವ ಜೂನ್‌ ವೇಳೆಗೆ ಉದ್ಘಾಟನೆಯಾಗಲಿದೆ. “ನ್ಯಾಕ್‌ ತಂಡದ ಭೇಟಿಗೆ ಬೇಕಾದ ತಯಾರಿ, ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಭೋಜನ, 400 ಮೀ. ಸಿಂಥೆಟಿಕ್‌ ಟ್ರ್ಯಾಕ್‌, ಈಜುಕೊಳ, ಅಂಬೇಡ್ಕರ್‌ ಸಂಶೋಧನಾ ಕೇಂದ್ರ, ಬೆಳಪುವಿನಲ್ಲಿ 5 ಸ್ನಾತಕೋತ್ತರ ವಿಭಾಗಗಳ ಸ್ಥಾಪನೆ, ಡಾ. ವಿ ಎಸ್‌ ಆಚಾರ್ಯ ಸೆಂಟರ್‌ ಫಾರ್‌ ಕೋಸ್ಟಲ್‌ ಡೆವೆಲಪ್‌ಮೆಂಟ್‌ ಸೇರಿದಂತೆ ಹಲವು ಅಧ್ಯಯನ ಕೇಂದ್ರಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿವೆ. ವಿದ್ಯಾರ್ಥಿ ಅದಾಲತ್‌ ಆರಂಭಿಸುವ ಯೋಜನೆಯೂ ಇದೆ,” ಎಂದರು.

ಇದೇ ವೇಳೆ, ಆರ್‌. ಸತ್ಯನಾರಾಯಣ ಮತ್ತು ಪ್ರೊ. ಕರುಣಾಕರ್‌ ಎ. ಕೋಟೇಕಾರ್‌ ಅವರನ್ನು ಸನ್ಮಾನಿಸಲಾಯಿತು. ವಿಶ್ವವಿದ್ಯಾನಿಲಯದ ಕುಲಸಚಿವ ಕೆ ರಾಜು ಮೊಗವೀರ ಸ್ವಾಗತ ಕೋರಿದರು. ಹಣಕಾಸು ಅಧಿಕಾರಿ ಪ್ರೊ. ಬಿ ನಾರಾಯಣ ಧನ್ಯವಾದ ಸಮರ್ಪಿಸಿದರು. ಪ್ರೊ. ರವಿಶಂಕರ್‌ ರಾವ್‌, ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.

ಅಂಬೇಡ್ಕರ್ ಹಿಂದೂ ಸಮಾಜದ ದಾರ್ಶನಿಕ: ಡಾ| ಬಿ.ವಿ.ವಸಂತ ಕುಮಾರ್

LEAVE A REPLY

Please enter your comment!
Please enter your name here