ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದ 80 ವರ್ಷದ ಮಹಿಳೆಯ ಅಂತ್ಯಕ್ರಿಯೆಯನ್ನು ಇಲ್ಲಿನ ಬೋಳೂರಿನಲ್ಲಿ ನಡೆಸಲಾಯಿತು. ಸರ್ಕಾರದ ನಿಯಮಗಳನ್ನು ಪಾಲಿಸದೆ, ಸುಮಾರು 150 ಜನರು, ಸುರಕ್ಷತಾ ಕ್ರಮಗಳನ್ನೂ ಗಾಳಿಗೆ ತೂರಿ, ಅಂತ್ಯಕ್ರಿಯೆಯನ್ನು ನಡೆಸಿದರು.
ಇದೀಗ, ಈ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕು ಹರಡಬಹುದೆಂಬ ಆತಂಕಕ್ಕೆ ಜನರು ಒಳಗಾಗಿದ್ದಾರೆ.
ಕೊರೋನಾ ಸೋಂಕು ಸಮುದಾಯ ಹರಡುವಿಕೆಯ ಹಂತದಲ್ಲಿದೆ ಎಂಬ ಭೀತಿಯಲ್ಲಿರುವ ಸಮಯದಲ್ಲೇ ಈ ಆಘಾತಕಾರಿ ಘಟನೆ ಸಂಭವಿಸಿದೆ. ಇಂತಹ ಘಟನೆ ನಡೆದಿರುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಯವರು ಖಚಿತಪಡಿಸಿದ್ದಾರೆ.
ಅಂತ್ಯಕ್ರಿಯೆಯ ಬಳಿಕ ಕೊರೋನಾ ದೃಢಪಟ್ಟಿರುವ ವರದಿಯನ್ನು ಸ್ವೀಕರಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಸರ್ಕಾರದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿಯ ಅಂತ್ಯಕ್ರಿಯೆಗೂ 20ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವಂತಿಲ್ಲ. ಅದಲ್ಲದೆ, ಕೊರೋನಾ ಪರೀಕ್ಷಾ ವರದಿಯನ್ನು ಸ್ವೀಕರಿಸುವ ಮೊದಲು ಅಂತ್ಯಕ್ರಿಯೆಯನ್ನು ನಡೆಸುವಂತಿಲ್ಲ. ಸೋಂಕು ದೃಢಪಟ್ಟರೆ, ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸರ್ಕಾರವು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತದೆ. ಸೋಂಕು ಇಲ್ಲದಿದ್ದರೆ ಮಾತ್ರ, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.