ಮನದ ಮುಂದೆ ಸುಳಿವ ಬಂಗಾರದ ಜಿಂಕೆ

0
247
Tap to know MORE!

ಜೀವ ವಿಕಾಸಕ್ಕೆ ಮೂಲಕಾರಣ ‌ವನ್ನು ಸರಳವಾಗಿ ಹೇಳುವುದಾದರೆ’ಆಸೆ’ . ಅದನ್ನು ನಂತರದಲ್ಲಿ ವೈಜ್ಞಾನಿಕ ಪರಿಭಾಷೆಯಲ್ಲಿ ಅಸ್ತಿತ್ವಕ್ಕಾಗಿ ಹೋರಾಟವೆಂದರು, ಈ ಅಸ್ತಿತ್ವದ ಅಥವಾ ಉಳಿವಿನ ಬಯಕೆಯೇ ಯಿಲ್ಲದಿದ್ದಲ್ಲಿ ಬದಲಾವಣೆಯಾಗುತ್ತಿತ್ತೆ ? ಮಾನವನಾಗಬಹುದಾದ ಹಂತದಲ್ಲಿ ಕೊಂಡಿ ಕಳಚಿಕೊಂಡ ಗೊರಿಲ್ಲಾ, ಚಿಂಪಾಂಜಿಗಳಿಗೆ ಈ ಅಸ್ತಿತ್ವದ ಪ್ರಶ್ನೆ ಅಷ್ಟೊಂದು ಎದುರಾಗಲಿಲ್ಲವಾದ್ದರಿಂದ ಅವು ವಿಕಾಸದ ಯಾವುದೋ ಹಂತದಲ್ಲಿ ಲಿಂಕ್ ಮಿಸ್ ಮಾಡಿಕೊಂಡವು ಅನ್ನಿಸುತ್ತದೆ.
ಇಲ್ಲಿಂದಲೇ ಆರಂಭವಾದ ಈ ಬಯಕೆ,ಆಸೆಗಳು ಹೋಮೋಸೇಪಿಯನ್ ಪ್ರವರ್ಗದ ಜೀವಿಯನ್ನು ಇಂದಿನ ನಾಗರಿಕ ಮಾನವನನ್ನಾಗಿಸಿದ್ದು.
ಆದರೆ ಈ ಆಸೆ,ಬಯಕೆ,ಆಮಿಷ ಗಳು ಬೇರೆಬೇರೆ ಆಯಾಮದಲ್ಲಿ ಬೇರೆಬೇರೆ ಅರ್ಥವನ್ನು ಹೊಳೆಯಿಸುತ್ತವೆ , ನಾನು ಇಲ್ಲಿ ಪಂಚೇಂದ್ರಿಯಗಳ ಬಯಕೆಗಳೆಂಬ ನೆಲೆಯ ಆಸೆಯನ್ನು ಹೇಳದೆ ನಮ್ಮ ಮನಸ್ಸನ್ನ ಕಾಡುವ ಚಂಚಲಗೊಳಿಸುವ ಮಾಯೆಯ ಬಗ್ಗೆ ಹೇಳುತ್ತೇನೆ .
ವಚನಕಾರ ಅಲ್ಲಮ “ಮನದ ಮುಂದಣ ಆಸೆಯೇ ಮಾಯೆ” ಎನ್ನುತ್ತಾನೆ, ಇಲ್ಲಿ ನಮಗೆ ಸ್ಪಷ್ಟವಾಗುವ ಅಂಶವೆಂದರೆ ಇಲ್ಲಿ ಆಸೆಯು ಲೌಕಿಕ ನೆಲೆಗಿಂತ ಭಿನ್ನವಾಗಿ ವರ್ತಿಸುತ್ತದೆ.ಇದನ್ನೆ ಅಲ್ಲಮ ಮಾಯೆಯೆನ್ನುತ್ತಾನೆ. ಲೌಕಿಕದ ಆಸೆಗಳಾದ ತಿನ್ನುವ, ಕುಡಿಯುವ, ಆಲಿಸುವ, ಆಘ್ರಾಣಿಸ ಬೇಕೆಂಬ ಬಯಕೆಗಳು ನಮಗೆ ಸತ್ಯವಾಗಿ ಗೋಚರಿಸುತ್ತವೆ,ಅವನ್ನು ನಾವು ತೃಪ್ತಿ ಪಡಿಸುವ ದಾರಿಯಿದೆ ,ಮತ್ತು ಈ ಆಸೆಗಳು ನಮ್ಮನ್ನು ಆಯಾಸಗೊಳಿಸುವುದಿಲ್ಲ.ಆದರೆ “ಮಾಯೆ” ಯೆಂಬ ಹೆಸರಿನಲ್ಲಿ ಕಂಗೊಳಿಸುವ ಆಸೆ ಬರೀ ಸುಳ್ಳು ಸುಳ್ಳೆ ನಮ್ಮ ಕಣ್ಣೆದುರು ಕಂಡಂತಾಗಿ,ನಾವು ಅದಕ್ಕೆ ಹಂಬಲಿಸಿ ಗಾಳಿಯೊಡನೆ ಗುದ್ದಾಡುವಂತಹ,ನೆರಳಿನೊಡನೆ ಬೇಟಕ್ಕೆಳೆಸುವಂತಹ ವ್ಯರ್ಥಾಯಾಸವನ್ನು ತಂದೊಡ್ಡುತ್ತದೆ.
ಇದರ ಇನ್ನೊಂದು ಮರಾ ಮೋಸವೆಂದರೆ ಇದು ಸುಳ್ಳೆಂಬ ಸಂಗತಿಯನ್ನು ಮನಸ್ಸು ಒಪ್ಪಿಕೊಳ್ಳುವುದೆಯಿಲ್ಲ, ಇಂತಹ ಮನಸ್ಥಿತಿಯನ್ನು ಕುರಿತು ದಾಸರು ಲೇವಡಿ‌ ಮಾಡಿದ್ದಾರೆ”ಕನ್ನಡಿಯ ಗಂಟಿಗೆ ಕನಸು ಕಂಡ ಕಳ್ಳ :ಕನ್ನವಿಕ್ಕಲವನ ವಶವಪ್ಪುದೇ ” ಆದರೆ ನಮಗೀ ಮಾತು ಪಥ್ಯವಾಗುವುದಿಲ್ಲ.ಕಾರಣ ಆ ಕಾಲದಲ್ಲಿ ವ್ಯಕ್ತಿಯ ಮನಸ್ಥಿತಿ.
ಇದನ್ನು ಈ ಪರಿಚಿತ ಚಿತ್ರದ ಮೂಲಕ ವಿವರಿಸೋಣ. ಮರಳುಗಾಡಿನಲ್ಲಿ ಪಯಣವನ್ನು ಮಾಡೀಮಾಡೀ ಬಳಲಿ ,ಬೆಂಡಾಗಿ ವಿಪರೀತ ನೀರಡಿಕೆಯಾದ ವ್ಯಕ್ತಿಗೆ ದೂರದಲ್ಲಿ ಬಿಸಿಲಿಗೆ ಮಿರುಗುವ ಬಿಸಿಯಾದ ಮರಳು ನೀರ ತೆರೆಯಂತೆ ಕಾಣಿಸುತ್ತದೆ. ಆತ ದೈಹಿಕವಾಗಿ ತೀರಾ ಬಳಲಿದ್ದಾನೆ ಮತ್ತು ಆತನ ಮನಸ್ಸು ನೀರನ್ನು ಬಯಸಿದೆ. ಹೀಗೆ ದೇಹ ಮತ್ತು ಮನಸ್ಸು ಎರಡರ ನೆಲೆಯಲ್ಲೂ ನೀರನ್ನೇ ಬಯಸುತ್ತಿರುವವನ‌ ಮನದ ಮುಂದೆ ಸೂರ್ಯನ ಪ್ರಖರ ‌ಬಿಸಿಲು ಮತ್ತು ಇದರ ಪರಿಣಾಮವಾಗಿ ಹೊಳೆವ ಮರಳು ಬಸವಳಿದ ಮನದೆದಿರು ನೀರಾಗಿ ಕಂಗೊಳಿಸಿ ಆತನ‌ ಮನವನ್ನು ಚಂಚಲಗೊಳಿಸುತ್ತದೆ.ಅದು ನೀರಲ್ಲವೆಂದು ಮನಸ್ಸು ಒಪ್ಪುವುದೇಯಿಲ್ಲ, ಬದುಕಿನಾಸೆಯಿಂದ ಅದರತ್ತ ತೆವಳುತ್ತಾನೆ ,ಈತ ಸನಿಹವಾದಷ್ಟೂ ಅದು ದೂರದಿಗಂತದತ್ತ ಹೋಗುತ್ತದೆ,
ಇದನ್ನು “ಮೃಗಜಲ” ‘ಬಿಸಿಲ ಕುದುರೆ”ಮರೀಚಿಕೆ’ಯೆನ್ನುತ್ತಾರೆ,ನಮ್ಮಪುರಾಣದಲ್ಲಿ,ಇತಿಹಾಸದಲ್ಲಿ‌ಈ ಮರೀಚಿಕೆಯ ಬೆನ್ನು ಹತ್ತಿದವರ ಬಹಳಷ್ಟು ಉದಾಹರಣೆಗಳಿವೆ, ಇವರೇನು ಅಜ್ಞಾನಿಗಳಲ್ಲ, ಬಹಳ ಮಾನನೀಯರು,ಗಂಭೀರರು,ಉದಾರಿ ಗಳು ಪರಾಕ್ರಮಿಗಳೇ ಮೊದಲಾದವರು ಇದರ ಬೆನ್ನ ಹಿಂದೆ ಹೋಗಿ ನಮಗೆ ಕತೆಯಾಗಿದ್ದಾರೆ ,ಬದುಕಿನಲ್ಲಿ ತುಂಬಾ ನೋವನ್ನು ಉಂಡಿದ್ದಾರೆ .ಈ ಬಯಕೆ, ಆಸೆ ನಮ್ಮೆದುರು ಬರುವ ಬಗೆಯನ್ನ ನಮ್ಮ ಹಿರಿಯರು, ಕವಿಗಳು,ದಾರ್ಶನಿಕರು “ಸುಳಿಯುವುದು” ಯೆಂದಿದ್ದಾರೆ.ಅಂದರೆ ತನ್ನ ಯಾವುದೋ ಉದ್ದೇಶದ ಈಡೇರಿಕೆಗಾಗಿ ಅಸೆಯು ನಮ್ಮೆದುರು ತನ್ನ ಲಾವಣ್ಯವನ್ನು ಪ್ರದರ್ಶಿಸಿ ,ನಮ್ಮನ್ನು ಮರುಳುಗೊಳಿಸಿ ತನ್ನ ಕಾರ್ಯ ಸಾಧನೆ ಮಾಡಿಕೊಳ್ಳುವುದನ್ನು ಈ “ಸುಳಿವ” ಪದ ಸೂಚಿಸುತ್ತದೆ.ದುರಂತವೆಂದರೆ ಅದು ಸುಳಿಯುತ್ತಿದೆ ಯೆಂಬುದು ನಮ್ಮ ಅರಿವಿಗೆ ಬರವುದಿಲ್ಲ.ಅಥವಾ ಬೇರೆಯವರು ಎಚ್ಚರಿಸಿದರೂ ನಮ್ಮ ಮನವು ಒಪ್ಪಿಕೊಳ್ಳುವುದಿಲ್ಲ,ಕಾರಣ ನಾವು ಕನಸಿನಲ್ಲಿ ಕಂಡ ಹಣ್ಣಿಗೆ ಆಸೆ ಪಡುವಂತವರು‌ ಮತ್ತು ಸಿಗಬಹುದಾದ ಹಣ್ಣು, ನೀಡಬಹುದಾದ ಸುಖವನ್ನು ನೆನೆನೆನೆದು ಹಣ್ಣಿಗಾಗಿ ಬಿಡದೆ ಹಂಬಲಿಸುವವರು .
ರಾಮಾಯಣದ ಸೀತೆಯನ್ನೇ ನೋಡಿ. ಆಕೆ ಪತಿಯ ಮಾತಿಗೆ ಬೆಂಬಲವಾಗಿ ಸರ್ವ ಆಸೆಯನ್ನೂ ವರ್ಜಿಸಿ ಅರಣ್ಯವಾಸವನ್ನು ಒಪ್ಪಿಕೊಂಡವಳು,ಆಸೆಯೆಂಬುದು ಶಿವಶರಣರಿಗಲ್ಲವೆಂಬ ಮಾತಿಗೆ ಉದಾಹರಣೆ ಯೆಂಬಂತೆ ಕಂಗೊಳಿಸಿದವಳು‌ ಅಂತಹ ಶ್ರೇಷ್ಟ ಹೆಣ್ಣುಮಗಳ ಕಣ್ಣೆದಿರು ಬಂಗಾರದ ಜಿಂಕೆಯೊಂದು ಕಂಗೊಳಿಸಿ ಆಕೆಯ ಮನವನ್ನು ಚಂಚಲಗೊಳಿಸಿ,ಯಾವತ್ತೂ ಉಸುರದ ಬಯಕೆಯನ್ನ ರಾಮನಲ್ಲಿ ಆಗ್ರಹಪೂರ್ವಕವಾಗಿ ಉಸುರಿದಳಲ್ಲ!!ರಾಮನ ಯಾವ ಮಾತನ್ನೂ ಮೀರದವಳು ಅಂದು ಮೀರಿದಳಲ್ಲ!!ಬಂಗಾರದ ಜಿಂಕೆ ಸುಳ್ಳಿರಬಹುದೆಂದು ಆಕೆಗೆ ಒಂದು ಕ್ಷಣವೂ ಅನ್ನಿಸಲೇಯಿಲ್ಲ ವೆಂಬುದನ್ನು ನೋಡುವಾಗ ಅಲ್ಲಮನ ಮಾತು ಸತ್ಯವೆನ್ನಿಸುತ್ತದೆ.
ಆ,ಜಿಂಕೆ ಸೀತೆಯೆದುರು ನಿಲ್ಲುತ್ತದೆ,ನಲಿಯುತ್ತದೆ,ಕಾಲು ಬಡಿಯುತ್ತದೆ ಬಾಲ ಕುಣಿಸುತ್ತದೆ, ಕಣ್ಣು ಹೊಳೆಯಿಸುತ್ತದೆ, ಮಾಯವಾಗುತ್ತದೆ,ಗಿಡದ ಹಿಂದೆ ಕಾಣುತ್ತದೆ…ಇದನ್ನೆ ಅಲ್ಲಮ ಹೇಳುವುದು “ಮನದ ಮುಂದಣ ಆಸೆಯೆ ಮಾಯೆ”
ಈ ಮಾಯಾ ಜಿಂಕೆಯನ್ನು ಸೀತೆ ಅದೆಷ್ಟು ಸತ್ಯವೆಂದು ಬಗೆಯುತ್ತಾಳೆಂದರೆ ,ಅದನ್ನು ಹಿಡಿದೇ ತರುವಂತೆ ರಾಮನನ್ನು ಒಪ್ಪಿಸುತ್ತಾಳೆ.
ನಂತರದ ದುರಂತಗಳಿಗೆ‌ ಈ ಘಟನೆನೆಪವಾಗುತ್ತದೆ .ಬುದ್ದಗುರು ಹೇಳುವ ಆಸೆಯೇ ದುಃಖಕ್ಕೆ ಮೂಲವೆಂದರೆ ಇದೇತಾನೆ.
ಮಹಾಭಾರತದಲ್ಲಿ ಧರ್ಮರಾಯನ ಬಳಿಗೆ ನಾರದ ಬರುತ್ತಾರೆ, ರಾಜನ‌ಕರ್ತವ್ಯ ಹೇಳಿ ಯಾವುದೇ ಕಾರಣಕ್ಕೂ ಜೂಜಿನ ವ್ಯಸನಕ್ಕಿಳಿಯದಂತೆ ಎಚ್ಚರಿಸಿ ಹೋದ ಮಾರನೆ ದಿನವೇ ಧರ್ಮರಾಯ ಹಸ್ತಿನಾಪುರಕ್ಕೆ ಹೋಗಿ ಜೂಜಾಡಿ ಸರ್ವವನ್ನೂ ಕಳಕೊಳ್ಳುವುದಲ್ಲದೆ, ,ಮನಕ್ಕೂ ಮಂಕು ಕವಿದು ಶಕುನಿಯ ಮಾತಿಗೆ ತಲೆದೂಗಿ ತನ್ನ ಪತ್ನಿಯನ್ನೂ ಒತ್ತೆಯಿಡುತ್ತಾನೆ.ಮನದ ಮುಂದೆ ಸುಳಿವ ಆಸೆ
ಧರ್ಮರಾಯನೆಂಬ ಪ್ರಾಜ್ಞನನ್ನೇ ಹೇಗೆ ಸೋಲಿನತ್ತ ಸೆಳೆದೊಯ್ದಿತು ಯೆಂಬುದನ್ನ ನೋಡಿದಾಗ ಇದರ ಅಗಾಧಶಕ್ತಿ ಅರಿವಿಗೆ ಬರುತ್ತದೆ.
ಹಾಗಾಗಿ ನಾವು ನಮ್ಮ‌ನಮ್ಮ‌ಮನವನ್ನು ಇಂತಹ ಶಕ್ತಿಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಹೆಣ್ಣು,ಹೊನ್ನು ,ಮಣ್ಣು,ಅಧಿಕಾರ ಗಳೆಂಬ ಆಸೆಗಳು ನಮ್ಮನ್ನು ಸೆಳೆಯದಂತೆ ಜಾಗೃತರಾಗಬೇಕು.
ನದಿಯ ಸೆಳವಿಗೆ ಸಿಕ್ಕ ಮರದ ತುಂಡು ಮುಳುಗೇಳುವಂತೆ ಗೊತ್ತು ಗುರಿಯಿಲ್ಲದೆ ನೀರು ಸೆಳೆದತ್ತ ಸಾಗುವಂತೆ,.‌ತನ್ನ ಸ್ನೇಹದಲಿ ಮನೆಯ ಮಾಡಿದ ತೆರಣಿಯ ಹುಳು,ತನ್ನ ನೂಲು ತನ್ನನೆ ಸುತ್ತೀ ಸುತ್ತೀ ಸಾವ ತೆರನಂತೆ ,ಮನ ಬಂದುದ ಬಯಸೀ ಬಯಸೀ ಬೇವುತ್ತಿರುವೆವು.ಹಾಗಾಗಿ ನಮ್ಮ ಮನಸ್ಸಿನ ಮನಸ್ಸನ್ನು ನಿಲ್ಲಿಸಿ “ನಿಮ್ಮತ್ತ ತೋರಾ ಚನ್ನಮಲ್ಲಿಕಾರ್ಜುನ” ಯೆಂಬ ಶರಣಭಾವವನ್ನು ಮನದಲ್ಲಿ ತಳೆದು, ಈ ಮನಸ್ಸಿನಿದಿರು ಸುಳಿವ ಬಂಗಾರದ ಜಿಂಕೆ ಗಳನ್ನು ನಿವಾರಿಸಿ ಕೊಳ್ಳಬೇಕು

ಹರೀಶ್. ಟಿ.ಜಿ

LEAVE A REPLY

Please enter your comment!
Please enter your name here