ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಮಧ್ಯಪ್ರದೇಶದ ಉಜ್ಜಯಿನಿಯ ಯೋಗೇಶ್ ಮಾಲ್ವಿಯಾ ದ್ರೋಣಾಚಾರ್ಯ ಪ್ರಶಸ್ತಿಯನ್ನು ಗೆದ್ದ ನಂತರ, ರಾಜ್ಯವು ಮಲ್ಲಕಂಬ ಕೇಂದ್ರವಾಗಿ ಬದಲಾಗಿದೆ. ಅದಲ್ಲದೆ, ಮುಂದಿನ ವರ್ಷ (2021) ಟೋಕಿಯೊ ಒಲಿಂಪಿಕ್ಸ್ನಲ್ಲಿ ರಾಜ್ಯದ ಮಲ್ಲಕಂಬ ಪಟುಗಳು ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಲ್ಲಕಂಬವು ಪ್ರದರ್ಶನ ಕ್ರೀಡೆಯಾಗಿ ಕಾಣಿಸಿಕೊಳ್ಳಲಿದೆ.
ಟೋಕಿಯೊದಲ್ಲಿ ಮಲ್ಲಕಂಬ ಪ್ರದರ್ಶಿಸಲು, ಮಧ್ಯಪ್ರದೇಶ ಸೇರಿದಂತೆ ದೇಶಾದ್ಯಂತದ ಸುಮಾರು 46 ಉನ್ನತ ಆಟಗಾರರು ಭಾಗವಾಗಲಿದ್ದಾರೆ ಎಂದು ಮಲ್ಲಕಂಬ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರಮೇಶ್ ಇಂಡೋಲಿಯಾ ಹೇಳಿದರು.
“ರಾಜ್ಯವು ಈ ಸಾಂಪ್ರದಾಯಿಕ ಕ್ರೀಡೆಯಲ್ಲಿ ದೊಡ್ಡ ಛಾಪು ಮೂಡಿಸಿದೆ. ಯೋಗೇಶ್ ಮಾಲ್ವಿಯಾ ಅವರು ಮಲ್ಲಕಂಬದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಮೊದಲಿಗರಾಗಿದ್ದಾರೆ ಮತ್ತು ಅವರು ಮಧ್ಯಪ್ರದೇಶದವರು” ಎಂದು ಅವರು ಹೇಳಿದರು.
ಯೋಗೇಶ್ ಮಾಲ್ವಿಯಾ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯೋಜಿಸಿದ್ದ ವರ್ಚುವಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ರಮೇಶ್ ಇಂಡೋಲಿಯಾ ಭೋಪಾಲ್ನಲ್ಲಿದ್ದರು.
ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಅವರು ಮಾತನಾಡುತ್ತಾ, “ನಾವು ದೇಶಾದ್ಯಂತದ 25 ರಾಜ್ಯಗಳ ಉನ್ನತ ಪಟುಗಳ ತಂಡವನ್ನು ಶೀಘ್ರದಲ್ಲೇ ಆಯ್ಕೆ ಮಾಡುತ್ತೇವೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಕಳೆದ ಹಲವು ವರ್ಷಗಳಿಂದ ಮಲ್ಲಕಂಬದಲ್ಲಿ ಮುನ್ನಡೆ ಸಾಧಿಸಿದೆ” ಎಂದರು.
ಪ್ರದರ್ಶನ ಕ್ರೀಡೆಯೆಂದರೆ, ಒಲಿಂಪಿಕ್ಸ್ನಲ್ಲಿ ಉತ್ತೇಜಿಸಲು ಆಡುವ ಒಂದು ಕ್ರೀಡೆಯಾಗಿದೆ. 1912 ರ ಆವೃತ್ತಿಯಲ್ಲಿ ಒಲಿಂಪಿಕ್ಸ್ನಲ್ಲಿ ಪ್ರದರ್ಶನ ಕ್ರೀಡೆಗಳನ್ನು ಪರಿಚಯಿಸಲಾಯಿತು. ಕೆಲವು ಕ್ರೀಡೆಗಳು ಒಲಿಂಪಿಕ್ಸ್ನಲ್ಲಿ ಅಧಿಕೃತ ಕ್ರೀಡೆಗಳಾಗಿ ಸೇರ್ಪಡೆಗೊಳ್ಳುವಷ್ಟು ಜನಪ್ರಿಯವಾಗಿದ್ದವು. ಪ್ರದರ್ಶನ ಕ್ರೀಡೆಗಳಲ್ಲಿ ಗೆದ್ದ ಪದಕಗಳನ್ನು ದೇಶದ ಅಧಿಕೃತ ಪದಕಗಳಲ್ಲಿ ಲೆಕ್ಕಹಾಕಲಾಗುವುದಿಲ್ಲ.