ಮಳೆ ರಗಳೆ

0
223
Tap to know MORE!

ಳೆ ಒಬ್ಬೊಬ್ಬರಿಗೂ ಒಂದೊಂದು ಅನುಭವ ನೀಡುತ್ತದೆ. ಮಳೆಯ ನೆನಪೆಂದರೆ ಪ್ರತಿ ಮಳೆಗಾಲಕ್ಕೂ ಅದು ಹೊಸತಾಗಿಯೇ ಕಾಣುತ್ತದೆ. ಸುರಿವ ಮಳೆಯನ್ನ ಸುಮ್ಮನೆ ನೋಡುತ್ತಾ ಕುಳಿತರೆ‌ ಸಾಕು ಮನದೊಳಗೆ ನೆನಪಿನ ಪುಟಗಳು ಒಂದೊಂದಾಗಿ ತೆರೆಯುತ್ತಾ ಹೋಗುತ್ತದೆ.

ಒಂದಷ್ಟು ವರ್ಷಗಳ ಹಿಂದೆ… ಆ ದಿನ ಬೆಳ್ಳಂಬೆಳಗ್ಗೆ ಭಾರೀ ಗಾಳಿಮಳೆ ಸುರಿಯಲಾರಂಭಿಸಿತ್ತು. ನಾನಿನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಹೊರಗೆ ಮಳೆ ಸುರಿಯುತ್ತಿದ್ದಾಗ ಮನೆಯೊಳಗೆ ಬೆಚ್ಚಗೆ ಮಲಗಿದರೆ ಆಹಾ ಸ್ವರ್ಗಸುಖ. ಅಮ್ಮ “ನಯನಾ ಶಾಲೆಗೆ ಹೊತ್ತಾಯ್ತು ಎದ್ದೇಳು” ಎಂದು ಕರೆಯುತ್ತಲೇ ಇದ್ದರು. ಕೊನೆಗೂ ಅಮ್ಮನ ಒತ್ತಾಯಕ್ಕೆ ನಿದ್ದೆಗಣ್ಣಿನಲ್ಲೆ ಎದ್ದು ಶಾಲೆಗೆ ಹೊರಟೆ. ಅಲ್ಲಲ್ಲಿ ತೂತು ಬಿದ್ದ ಕೊಡೆ ಹಿಡಿದು ಶಾಲೆಯ ಕಡೆ ಹೆಜ್ಜೆ ಹಾಕಿದೆ. ನಡೆವ ದಾರಿ ತುಂಬಾ ಕೊಡೆಯಿಂದ ಹೊರೆಗೆ ಸುರಿದಂತೆಯೆ ಮಳೆ ಕೊಡೆಯೊಳಗೂ ಸುರಿಯುತ್ತಿತ್ತು. ಚಪ್ಪಲಿಯಿಂದ ಚಿಮ್ಮುತ್ತಿದ್ದ ಕೆಸರು ಸಮವಸ್ತ್ರಕ್ಕೆ ಹೊಸ ಬಣ್ಣ ಬಳಿಯುತ್ತಿತ್ತು . ಮಲಗಿದ್ದಾಗ ಇನ್ನೂ ಜೋರಾಗಿ ಮಳೆ ಬರಲಿ ಎನ್ನುತ್ತಿದ್ದ ಮನಸ್ಸು ಮಳೆಯಲ್ಲಿ ನಡೆಯುತ್ತಿದ್ದಾಗ ದೇವರೆ ಒಮ್ಮೆ ಮಳೆ ಕಡಿಮೆಯಾಗಲಿ ಎಂದು ಬೇಡಿಕೊಳ್ಳುತ್ತಿತ್ತು ಆದರೆ ನನ್ನ ಬೇಡಿಕೆ ದೇವರಿಗೆ ತಲುಪಲೇ ಇಲ್ಲ. ಹಾಗೋ ಹೀಗೋ ಶಾಲೆಯ ಗೇಟಿನ ಬಳಿ ತಲುಪುತ್ತಿದ್ದಂತೆ ಜೋರಾಗಿ ಬೀಸಿದ ಗಾಳಿಗೆ ತ್ತತ್ತರಿಸಿದ ನನ್ನ ಮುದಿ ಕೊಡೆ ಮುರಿದು ಎತ್ತರಕ್ಕೆ ಹಾರಿತ್ತು. ನಾನು ಹಿಂದೆಯೇ ಓಡಿದೆ…

ಕೊಡೆ ತಿರುಗುತ್ತಲೇ ಹೋಗಿ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದವರೊಬ್ಬರ ಮುಖಕ್ಕೆ ಬಡಿಯಿತು. ಅನಿರೀಕ್ಷಿತವಾದ ಕೊಡೆಯ ದಾಳಿಯಿಂದ ನಿಯಂತ್ರಣ ಕಳೆದುಕೊಂಡ ಸವಾರ ರಸ್ತೆ ಬದಿಗೆ ಬಿದ್ದರು. ಕೋಪದಿಂದ ಮೈಕೊಡವಿಕೊಂಡು ಎದ್ದ ಅವರು ” ಯಾವ ಫಟಿಂಗನ ಕೊಡೆ ಇದು” ಎಂದು ಸುತ್ತಮುತ್ತ ನೋಡುತ್ತಲೇ ಘರ್ಜಿಸಿದರು. ನಾನು “ಅಣ್ಣಾ ಅದು ನನ್ನ ಕೊಡೆ” ಎಂದ ಕೂಡಲೆ ಮತ್ತೆ ಬಾಯಿಗೆ ಬಂದಂತೆ ಚೆನ್ನಾಗಿ ಉಗಿದು ಉಪ್ಪಿನಕಾಯಿ ಹಾಕಿ ಕೊಡೆಯನ್ನ ನನ್ನತ್ತ ಎಸೆದು ಹೋದರು!

ನನ್ನ ಗೆಳೆಯರೆಲ್ಲ ದೂರದಲ್ಲಿ ನಿಂತು ನಗುತ್ತಿದ್ದರು. ನನಗಾಗ ಮಳೆಯ ಮೇಲೆ ಉಗ್ರ ಕೋಪ ಬಂದಿತ್ತು! ಬೈಕ್ ಸವಾರನಿಗಿಂತಲೂ ಹೆಚ್ಚು ಮಳೆಗೇ ಬಯ್ಯುತ್ತ ಮುರಿದ ಕೊಡೆಯನ್ನ‌ ಕಿತ್ತೆಸೆದು ನೆನೆಯುತ್ತಲೆ ಮನೆಯತ್ತ ನಡೆದೆ. ಮನೆ ತಲುಪಿದ ಕೂಡಲೆ ಅಮ್ಮನ ಬೈಗುಳ ಶುರುವಾಯಿತು. “ಅಂತೂ ಈ ಮಳೆಯ ರಗಳೆಯಿಂದಾಗಿ ನಂಗೆ ನೆಮ್ಮದಿಯಿಲ್ಲ” ಎಂದು ಮಳೆಗೆ ಮನದಲ್ಲೇ ಶಾಪ ಹಾಕುತ್ತ ಬೈಗುಳ ಕೇಳುತ್ತ ಜಗಲಿ ಮೇಲೆ ನಿಂತು ಕೊಂಡೆ .

ನಯನ್ ಕುಮಾರ್
ವಿ.ವಿ. ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here