ಅ.31 ರಿಂದ ಮೂರು ದಿನ ರಾಜ್ಯದ ಹಲವೆಡೆ ಮಳೆ

0
90

ಬೆಂಗಳೂರು, ಅ 28: ಕರ್ನಾಟಕದ ವಿವಿಧೆಡೆ ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು,ಕೊಡಗು, ಶಿವಮೊಗ್ಗದಲ್ಲಿ ಅಕ್ಟೋಬರ್ 31ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ತಿಂಗಳ ಆರಂಭದಲ್ಲಿ ಆರ್ಭಟಿಸಿದ್ದ ಮಳೆರಾಯ, ರಾಜ್ಯದಲ್ಲಿ ತಿಂಗಳಾಂತ್ಯಕ್ಕೆ ಮತ್ತೆ ಮರಳಲಿದೆ. ಉತ್ತರ ಕರ್ನಾಟಕದಲ್ಲಿ ಅನಾಹುತ ಉಂಟು ಮಾಡಿದ್ದ ಚಿತ್ತಾ ಮಳೆ ದಕ್ಷಿಣಕ್ಕೆ ಚಿತ್ತೈಸಿಸಿ ಭಾರಿ ವರ್ಷಧಾರೆಗೆ ದಾರಿ ಮಾಡಿಕೊಟ್ಟಿತ್ತು.

ಈ ಬಾರಿ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರವು ತಮಿಳುನಾಡು ಹಾಗೂ ಕೇರಳದತ್ತ ಸಾಗಲಿದೆ. ಇದರಿಂದಾಗಿ ಈ ಎರಡೂ ರಾಜ್ಯಗಳ ಗಡಿಗಳಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಬರುವ ಶುಕ್ರವಾರ ಹಾಗೂ ಶನಿವಾರ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಕೆಲವೆಡೆ ಮಳೆಯಾಗಲಿದೆ.

ಅ.30ರಿಂದ ನಿರೀಕ್ಷಿಸಲಾಗಿರುವ ಮಳೆಯು ಕರಾವಳಿ ಹಾಗೂ ಮಲೆನಾಡು ಒಳಗೊಂಡಿರುವ ದಕ್ಷಿಣ ಒಳನಾಡಿಗೆ ಸೀಮಿತವಾಗಲಿದೆ. ಆದರೆ, ಹಿಂದಿನಷ್ಟು ಬಿರುಸು ಮಳೆ ಬಾರದಿದ್ದರೂ, ಸಾಧಾರಣ ಪ್ರಮಾಣದ ವರ್ಷಧಾರೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆ ಕಾಟ ಇರದು. ಆ ಜಿಲ್ಲೆಗಳ ಸೀಮಿತ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಮಳೆ ಮಾತ್ರ ಆಗಲಿದ್ದು, ಒಣ ಹವೆ ಮುಂದುವರಿಯಲಿದೆ.

LEAVE A REPLY

Please enter your comment!
Please enter your name here