ನಾವು ಅಧಿಕಾರಕ್ಕೆ ಬಂದರೆ, ಜನವಿರೋಧಿ ಮಸೂದೆ-ಕಾಯ್ದೆಗಳನ್ನು ಹಿಂಪಡೆಯುತ್ತೇವೆ : ಸಿದ್ದರಾಮಯ್ಯ

0
203
suddivani, kannada news
Tap to know MORE!

ಬೆಂಗಳೂರು ಡಿ.11: ರಾಜ್ಯ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾರ್ಮಿಕ ಕಾನೂನು ತಿದ್ದುಪಡಿಗಳ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದು ‘ನಾವು ಅಧಿಕಾರಕ್ಕೆ ಬಂದರೆ ಮೂರೂ ತಿದ್ದುಪಡಿ ವಿಧೇಯಕಗಳನ್ನು ಹಿಂಪಡೆಯಲಾಗುವುದು’ ಎಂದು ಘೋಷಿಸಿದ್ದಾರೆ.

ಇದೇ ವೇಳೆ ಸ್ವಾತಂತ್ರ್ಯ ಉದ್ಯಾನವನದ ಬಳಿ ಸಾವಿರಾರು ರೈತರ ಸಮ್ಮುಖದಲ್ಲೇ ‘ಭೂಸುಧಾರಣೆ ತಿದ್ದುಪಡಿ ಮಸೂದೆ ರೈತ ವಿರೋಧಿ ಹಾಗೂ ರೈತರ ಪಾಲಿನ ಮರಣ ಶಾಸನ’ ಎಂದು ಆರೋಪಿಸಿ ವಿಧೇಯಕದ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ವಿರೋಧಿ ತಿದ್ದುಪಡಿ ಜಾರಿಗೆ ತಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಧಾನಪರಿಷತ್‌ನಲ್ಲಿ ಇದನ್ನು ಬೆಂಬಲಿಸಿರುವ ಜೆಡಿಎಸ್‌ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಎಚ್‌.ಡಿ. ಕುಮಾರಸ್ವಾಮಿ ತಮ್ಮ ಬೇನಾಮಿ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಕಾಯಿದೆ ಬೆಂಬಲಿಸಿದ್ದಾರೆ. ಮಣ್ಣಿನ ಮಕ್ಕಳು ಎಂದು ಹೇಳುವ ನಿಮಗೆ ಒಂದೇ ನಾಲಿಗೆ ಇರಬೇಕು. ಮಣ್ಣಿನ ಮಕ್ಕಳು ಎಂದು ಹೇಳಿ ರೈತರ ಬೆನ್ನಿಗೆ ಚೂರಿ ಹಾಕಲು ನಾಚಿಕೆ ಆಗಲ್ಲವೇ’ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು.

ರೈತರ ಹೋರಾಟ ಇಲ್ಲಿಗೆ ನಿಲ್ಲಬಾರದು. ರಾಜ್ಯಾದ್ಯಂತ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ನಡೆಸಬೇಕು. ಒಂದೋ ನಿಮ್ಮ ಜೊತೆಗೆ ನಾವು ಬರುತ್ತೇವೆ, ಇಲ್ಲದಿದ್ದರೆ ನಮ್ಮ ಜೊತೆ ನೀವು ಬನ್ನಿ. ಇಬ್ಬರೂ ಸೇರಿ ಹೋರಾಟ ಮಾಡೋಣ ಎಂದು ರೈತರಿಗೆ ಕರೆ ನೀಡಿದರು.

LEAVE A REPLY

Please enter your comment!
Please enter your name here