ಮಾತು

0
305
Tap to know MORE!

ಇಷ್ಟು ದೊಡ್ಡ ಭೂಮಿಯಲ್ಲಿ ಜನ್ಮತಾಳಿ ಬಾಳಿಬದುಕುತ್ತಿರುವ ಜೀವಕೋಟಿಗಳಲ್ಲಿ ಅತ್ಯಂತ ಅದೃಷ್ಟಶಾಲಿಯೆಂದರೆ ನಾವು ಮನುಷ್ಯರು ಮಾತ್ರ.

ಮನುಷ್ಯನನ್ನು ಹೊರತು ಪಡಿಸಿ ಬೇರೆಲ್ಲಾ ಜೀವಿಗಳಿಗೆ ಅಹಾರ,ನಿದ್ರೆ,ಮೈಥುನ ಈ‌ಮೂರು ಮಾತ್ರ ಮೂಲಭೂತ ಅಗತ್ಯಗಳು, ಪ್ರಾಣಿಗಳು ಅದರ ಪೂರೈಕೆ ಗಾಗಿ ಮಾತ್ರ ತುಡಿಯುತ್ತವೆ,ಹೊಡೆದಾಡಿ ಮಡಿಯುತ್ತವೆ.
ಆದರೆ ಮನುಷ್ಯ ಈ ಮೂಲಭೂತ ಅವಶ್ಯಕತೆಗಳಿಗೆ ನೈತಿಕ,ಧಾರ್ಮಿಕ ,ಸಾಮಾಜಿಕ ಆವರಣವನ್ನು ತೊಡಿಸುವ ಮೂಲಕ ಅವುಗಳನ್ನು ಗೌರವಯುತವಾಗಿ ಬರಮಾಡಿಕೊಂಡಿದ್ದಾನೆ ,ಹೀಗಾಗಿ ಮನುಷ್ಯನು ಬೇರೆಲ್ಲಾ ಪ್ರಾಣಿಗಳಿಗಿಂತ ಭಿನ್ನ.

ಈ ವ್ಯತ್ಯಾಸಗಳ ಜೊತೆಗೆ ಆತನ ಇನ್ನೆರಡು ಗುಣಗಳೆಂದರೆ ಆತ ಆಲೋಚಿಸಬಲ್ಲ ಮತ್ತು ತನ್ನ ಅಭಿಪ್ರಾಯವನ್ನು ಮಾತುಗಳಲ್ಲಿ ವ್ಯಕ್ತಪಡಿಸಬಲ್ಲ.

ಹಾಗಾಗಿ “ಮಾತು” ಮನುಷ್ಯನ ಆಲೋಚನೆಗಳು ವ್ಯವಸ್ತಿತವಾಗಿ ಹೊರಬಂದ ಶಬ್ದಸಂಕೇತಗಳು. ಈ ಮಾತುಗಳು ಒಂದು ಕ್ರಮದಲ್ಲಿ ಹೊರಬಂದಾಗ ಮಾತ್ರ ಅವು ಅರ್ಥ ವಾಗುತ್ತವೆ ಮತ್ತು ಮಾತಿನುದ್ದೇಶ ಈಡೇರುತ್ತದೆ, ಈ ಮಾತುಗಳು ಯಾವಾಗ ಆರಂಭವಾಯಿತೆಂಬ ಮಾತು ನನಗಿಲ್ಲಿ ಮುಖ್ಯವಲ್ಲ. ಅವಶ್ಯಕತೆಯೇ ಅವಿಷ್ಕಾರದ ತಾಯಿಯೆಂಬ ಹಾಗೆ ,ಮಾತು ನಾಗರಿಕ ಸಮಾಜದಲ್ಲಿ ಯಾವುದೋ ಕಾಲಘಟ್ಟದಲ್ಲಿ ಅನಿವಾರ್ಯ ವಾಗಿಹುಟ್ಟಿತು . ಇದನ್ನು ಹುಟ್ಟಿಗೆ ಕಾರಣನಾದ ಆದಿಬಂಧುವನ್ನು ಜಗತ್ತು ಮರೆತಿದೆ,ಅದು ಸಹಜ. ಆದರೆ ಇಂದು ನಾವು ನೆನಪಿಡಬೇಕಾದ ಸಂಗತಿಯೆಂದರೆ,ನಾವು ಆಡುವ ಮಾತು ನಮಗೆ ಮಾನ್ಯತೆಯನ್ನೋ, ಸಂದಿಗ್ದತೆಯನ್ನೋ,ಗೌರವವನ್ನೋ,ಅಪಾಯವನ್ನೋ ತಂದೊಡ್ಡಬಹುದು .ಹಾಗಾಗಿಯೇ ನಮ್ಮ ಹಿರಿಯರು ಮಾತಿನಿಂದಲೇ ಮೃತ್ಯು, ಮಾತಿನಿಂದಲೆ ಮುತ್ತು ಅಂದರು. ಮಾತು ಹುಟ್ಟುವುದು ನಾಭಿಮೂಲದಲ್ಲಿಯೆಂದರೂ ಮಾತು ಪ್ರಕಟವಾಗುವುದು ನಾಲಗೆಯ ಮೂಲಕ. ಹಾಗಾಗಿ ನಮ್ಮ ಹಿರಿಯರು ನಾಲಗೆಯನ್ನ ಹದ್ದುಬಸ್ತಿನಲ್ಲಿಡಲು ಹೇಳಿದರು “ಆಚಾರವಿಲ್ಲದ ನಾಲಗೆ ನಿನ್ನ ನೀಚಬುದ್ದಿಯ ಬಿಡು ನಾಲಗೆ,ವಿಚಾರವಿಲ್ಲದೆ ಪರರ ಧೂಷಿಸುವುದಕೆ,ಚಾಚಿಕೊಂಡಿರುವಂತ ನಾಲಗೆ” ಯೆಂದು ನಾಲಗೆಯ ತೊಂದರೆಯನ್ನ ಎತ್ತಿಹೇಳಿದ್ದಾರೆ.

“ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು”ಯೆಂಬ ಮಾತನ್ನು ಗಮನಿಸೋಣ.ಮುತ್ತಿಗೆ ಬೆಲೆ ಬರುವುದು ಅದರ ಅಖಂಡತೆಯಲ್ಲಿ ,ಅದು ಭಿನ್ನವಾದರೆಬೆಲೆಯಿಲ್ಲ.ಹಾಗೆಯೇ ಮಾತು ಕೂಡಾ ಭಿನ್ನವಾಗಬಾರದು .ಅದರ ಶ್ರೇಷ್ಠತೆಯಿರೋದು ಕೂಡಾ ಅದರ ಪಾರದರ್ಶಕ ತೆಯಲ್ಲಿ.
ನಮ್ಮ ಬಾಯಿತಪ್ಪಿಯೋ, ಗೊತ್ತಿಲ್ಲದೆಯೊ ನಮ್ಮ‌ಬಾಯಿಂದ ಬರುವ ಒಂದು ತಪ್ಪು ಮಾತು ಮತ್ತೊಬ್ಬರ ಬದುಕನ್ನೇ ನಾಶಮಾಡಬಹುದು.ಹಾಗಾಗಿ ನಾವು ತಪ್ಪು ಮಾತಾಡಿದಾಗ ಅಪದ್ದಗಳನ್ನು ಆಡಿದಾಗ,ದೇವರ ಸುದ್ದಿ ಮಾತಾಡಿದಾಗ “ಒಳ್ತು”ಅನ್ನುತ್ತೇವೆ ,ಕಾರಣ ಮತ್ತೊಬ್ಬರಿಗೆ ನಮ್ಮಿಂದ ಅನ್ಯಾಯವಾಗಬಾರದು.ಕೇಡಾಗಬಾರದೆಂಬ ಕಾರಣಕ್ಕೆ .
ನಮ್ಮ ಮಾತುಗಳು ಪರಿಶುದ್ದವಾಗಿರಬೇಕು , ಶಬ್ದವನ್ನು ಸರಸ್ವತಿಯ ವರ ,ಅದು ಬೆಳ್ಳಗಿರುತ್ತದೆ ಅಂತಾರೆ, ಹಾಗಾಗಿ ಸರಸ್ವತಿಯ ವಾಹನ ಬಿಳಿಯಹಂಸ,ಆಕೆಯು ಶ್ವೇತ ವಸನಧಾರಿ,ಅದೇ ರೀತಿಯಲ್ಲಿ ಇಂತಹ ನಿರ್ಮಲ ಮನಸ್ಸಿನವರನ್ನು, ಪರಿಶುದ್ದರನ್ನು ನಾವು ಪರಮಹಂಸರೆಂದು ಕರೆದು ಗೌರವಿಸುತ್ತೇವೆ.

ಇದೆಲ್ಲದರ ಅರ್ಥ ನಾವಾಡುವ ಮಾತು ಮತ್ತೊಬ್ಬರನ್ನ ಆಧರಿಸಬೇಕು,
ಅದಕ್ಕಾಗಿಯೇಬಸವಣ್ಣ ಹೀಗೆ ಹೇಳುತ್ತಾನೆ
“ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು.”
ಇಲ್ಲಿ ಕೊಡುವ ಸಾದೃಶ್ಯಗಳು ಪ್ರತಿಯೊಂದೂ ವಸ್ತುವೂ ಅಮೂಲ್ಯವಾದ ಮುತ್ತು,ಸ್ಪಟಿಕ,ಮಾಣಿಕ್ಯಗಳು.ಇವುಗಳ ಮತ್ತೊಂದು ಲಕ್ಷಣವೇ ಪಾರದರ್ಶಕತೆ. ಈ ಗುಣದಿಂದಾಗಿಯೇ ಅವುಗಳಿಗೆ ಅತ್ಯಂತ ಹೆಚ್ಚುಆದರ,ಬಣ್ಣನೆ. ಈ ಗುಣವಿದ್ದರೆ ಕಡೆಗೆ ಭಗವಂತನೂ ತಲೆದೂಗುತ್ತಾನೆ. ಇದಕ್ಕೆ ತಪ್ಪಿದರೆ ದೇವರು ಮೆಚ್ಚಲಾರ.ಹಾಗಾಗಿ ನಮ್ಮ‌ಮಾತು ಪಾರದರ್ಶಕ ವಾಗಿರಬೇಕು,ಒಳಗೊಂದು ಹೊರಗೊಂದು ಇದ್ದರೆ ಅದು ತಟವಟವೆಂದು ಜನತಿರಸ್ಕಾರಕ್ಕೊಳಗಾಗುತ್ತದೆ.
ಬೇಂದ್ರೆಯವರು ಹೇಳುವ ಮಾತು ನೋಡಿ”ಮಾತುಮಾತು ಮಥಿಸಿ ಬಂದ ನಾದದ ನವನೀತ”
ಮಾತಿಗೆಅರ್ಥವಿದ್ದರೆ,ತರ್ಕಶುದ್ದವಾಗಿದ್ದರೆ,ಈ ಮಾತಿಗೆ ತೂಕ ಬರುತ್ತದೆ. ಹೀಗೆ ಮಾತು ಮಥಿಸಲ್ಪಟ್ಟು ಪುಟಕ್ಕಿಟ್ಟ ಶುದ್ದ ಚಿನ್ನವಾಗಿ ಹೊರ ಬರಬೇಕು. ಆಗ ಅದಕ್ಕೊಂದು ಮೌಲ್ಯ.

ಹಾಗಾಗಿ ಮಾತನಾಡಲು ಬಂದವರೆಲ್ಲಾ ಮಾತನಾಡಬಾರದು.
ಪಂಪನ ಭೀಷ್ಮ ಇದಕ್ಕೊಂದು ಚಂದದ ಉದಾಹರಣೆ, ಕುರುಕ್ಷೇತ್ರ ಯುದ್ದದಲ್ಲಿ ಭೀಷ್ಮನ ಸೇನಾಪತಿ ಪಟ್ಟವನ್ನು ವಿರೋಧಿಸಿ ಕರ್ಣ ಶಸ್ತ್ರತ್ಯಾಗವನ್ನು ಮಾಡಿದ, ನಂತರ ಭೀಷ್ಮ ನಾಡುವ ಮಾತು ಮಾತನ್ನು ಯಾವ ಸಮಯದಲ್ಲಿ ಯಾರು,ಹೇಗೆ ಆಡಬೇಕು ಯೆಂಬುದಕ್ಕೆ ಸುಂದರ ಉದಾಹರಣೆ.

ನಾವು ಆಡುವ ಮಾತು ಹೇಗೆ ನಮ್ಮ ಯೋಗ್ಯತೆಯನ್ನು ತೋರಿಸುತ್ತದೆಂಬುದಕ್ಕೆ ಅಲ್ಲಿಯೇ ಕರ್ಣನೂ ಕೆಟ್ಟ ಮಾದರಿಯಾಗುತ್ತಾನೆ‌.
ಹಾಗಾಗಿ ನಾವಾಡುವ ಮಾತು ನಮಗೆ ದಾರಿದೀವಿಗೆಯಾಗ ಬೇಕು.ಮಾತಿನ ಮೂಲಕ ನಮಗೊಂದು ಯೋಗ್ಯತೆ ಪ್ರಾಪ್ತ ವಾಗಬೇಕು.ಸಮಾಜದಲ್ಲಿ ನಾಕುಜನ‌ತಲೆದೂಗಬೇಕು.ಇದಕ್ಕೆ ಕೊಂಚ ಪರಿಣತಿ ಬೇಕು.ನಮಗೆ ಉತ್ತಮರ ಸಹವಾಸ ಬೇಕು. ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಾವು ಹೆಚ್ಚುಹೆಚ್ಚು ಓದಬೇಕು ದೇಶ ಪರ್ಯಟನೆ ಮಾಡಬೇಕು
,ಯಾರು ಯಾರು ಮಾತಿನ ಮಹತ್ವ ಬಲ್ಲರೋ ಅವರನ್ನರಿಯಬೇಕು .ಅವರೊಡನೆ ವಿಚಾರವಿನಿಮಯ ‌ಮಾಡಬೇಕು.

ಜೂಲಿಯಸ್ ಸೀಸರನ ಹತ್ಯೆಯ ನಂತರ ರೋಮನ್ನರನ್ನುದ್ದೇಶಿಸಿ ಮಾತನಾಡಿದ ಬ್ರೂಟಸ್ ಅದುವರೆಗೆ ಜನರಲ್ಲಿದ್ದ ಸೀಸರನ‌ ಮೇಲಿನ ಗೌರವವನ್ನುನಾಶಪಡಿಸುವುದು‌ಒಂದು ವಿಧವಾದರೆ ನಂತರ ಅಂಟೋನಿಯೋ ಅವವೇ ಮಾತುಗಳು ಮೂಲಕ ಅದೇ ನಾಗರಿಕರಲ್ಲಿ ಸೀಸರನ‌ ಮೇಲೆ ಗೌರವವನ್ನು ಪುನಃ ಪ್ರತಿಷ್ಠಾಪನೆ ಮಾಡುವುದು ಮಾತಿಗಿರುವ ಹೆಚ್ಚಿನ ಶಕ್ತಿಯನ್ನು ತೋರಿಸುತ್ತದೆ .

ಹಾಗಾಗಿ ನಾವು ಮೂಲೋಕ ಗೆಲ್ಲವ ಮಾತನ್ನು ಅಭ್ಯಾಸ ಮಾಡಬೇಕು. ಇದನ್ನು ಅರಿತ ನಮ್ಮ ಹಿರಿಯರು ಯಾರಿಗೆ ತಮ್ಮ ನಾಲಗೆಯ ಮೇಲೆ ಹತೋಟಿಯಿರುತ್ತದೋ ಆತ ಜಗತ್ತನ್ನೇ ಗೆಲ್ಲುತ್ತಾನೆ ಎನ್ನುತ್ತಾರೆ,ನಮ್ಮ‌ಕಣ್ಣು ಸದಾಒಳಿತನ್ನೇನೋಡಲಿ.ಕಿವಿಗಳು ಸದಾ ಒಳಿತನ್ನೇ ಕೇಳಲಿ, ನಾಲಗೆ ಸದಾ ಒಳಿತನ್ನೇ ಆಡಲಿ,ಹೀಗಾದಾಗ ಸಾಮಾನ್ಯ ಮನುಷ್ಯನೂ ಅಚ್ಯುತನಪ್ಪ,ಹರನಪ್ಪ, ಲೋಕದಲಿ ನಿಶ್ಚಿಂತನಪ್ಪ ಜನವಾಗುತ್ತಾನೆ, ಅತನಿಗೆ‌ಗೌರವಪ್ರಾಪ್ತಿಯಾಗುತ್ತದೆ, ಅವನ‌ ಮಾತಿಗಾಗಿ ಜನ ಕಾತರಿಸಿ ಕಾಯುತ್ತಾರೆ.

ಅಂತವನ‌ ಮಾತು ಮನೆಯನ್ನು ಬೆಳಗುತ್ತದೆ ಮನವನ್ನುಬೆಳಗುತ್ತದೆ.ರಸಿಕನಾಡಿದ ಮಾತು ಶಶಿಯುದಿಸಿದಂತಿರುತ್ತದೆ. ಮಾತು ಬಲ್ಲವನಿಗೆ ರೋಗವಿರುವುದಿಲ್ಲವೆಂಬ‌ ಮಾತಿದೆ,ಇಲ್ಲಿ ಹೇಳಿದ ರೋಗವೆಂದರೆದೈಹಿಕಬಾಧೆಯಲ್ಲ. ಬದಲಿಗೆ ಮಾತುಬಲ್ಲವನು ಸಮಾಜದಲ್ಲಿ ನಾಲ್ಕು ಜನರಿಂದ ಮನ್ನಣೆಗೆ ಪಾತ್ರನಾಗುತ್ತಾನೆ,ಈ ಮನ್ನಣೆಯೇ ಆತನನ್ನು ಉನ್ನತಿಗೇರಿಸುತ್ತದೆ.
ಹಾಗಾಗಿ ಬನ್ನಿ ಇಂತಹ ಚಂದದ ಮಾತನ್ನಾಡುವ ಮೂಲಕ ಬದುಕಿನ ಚಂದವನ್ನು ಹೆಚ್ಚಿಸೋಣ.

ಹರೀಶ್ ಟಿ.ಜಿ.

LEAVE A REPLY

Please enter your comment!
Please enter your name here