ಮಾಧುರ್ಯ ,ರುಚಿ, ಸವಿ..

0
220
Tap to know MORE!

ಮಾಧುರ್ಯವೆಂಬುದು ಸುಂದರವಾದ ಪದ.‌ನಮ್ಮ ಬದುಕಿನಲ್ಲಿ ಈ ಪದಕ್ಕೆ ಅವಕಾಶ ಕೊಡುವುದರಿಂದ ನಮಗೊಂದು ವ್ಯಕ್ತಿತ್ವ ದೊರಕುತ್ತದೆ,ಸಮಾಜದಲ್ಲಿ ಮನ್ನಣೆ,ಸ್ಥಾನಮಾನಗಳು ದೊರಕುತ್ತವೆ.
ಈ ಮಾಧುರ್ಯವೆಂಬ ಪದವನ್ನು ಸಂಗೀತ ಕ್ಷೇತ್ರಕ್ಕೆ ಅನ್ವಯಿಸುವ ಪರಿಪಾಠವಿದೆ, ಮಧುರವಾದ ಗಾಯನ .ಮಾಧುರ್ಯ ತುಂಬಿದ ಸಂಗೀತಸಂಜೆ ಕರ್ಣಮಧುರ ಗೀತಗುಚ್ಛ,,,ಇತ್ಯಾದಿ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ ,ಆದರೆ ಇದು ಒಂದು ಆಯಾಮದ ಅರ್ಥ ಮಾತ್ರ.
ಮಾಧುರ್ಯ ಪದಕ್ಕೆ ಸಮಾನಾಂತರವಾಗಿ”ರುಚಿ” “ಸವಿ”ಯೆಂಬ ಪದವನ್ನು ಬಳಸಿದರೆ ಈ ಅರ್ಥ ಇನ್ನೂ ಹೆಚ್ಚು ಸ್ಪಷ್ಟ ವಾಗುತ್ತದೆ. ರುಚಿಯೆಂಬುದು ಬರಿಯ ನಾಲಗೆಗೆ ಸೀಮಿತವಾದುದಲ್ಲ, “ಅಭಿರುಚಿ”ಎಂಬುದನ್ನು ಅವಲಂಬಿಸಿ ನೋಡಿದರೆ ಅದು ಬೇರೆಯೇ ಅರ್ಥ ವನ್ನು ಹೊಳೆಯಿಸುತ್ತದೆ,ಇದರಲ್ಲಿ ಸದಭಿರುಚಿಯ ಮಾತು ಬಂದಾಗ ಇದಕ್ಕೆ ವಿರುದ್ದವಾದ ಮತ್ತೊಂದಿದೆ ಅದನ್ನು ಅನುಸರಿಸಬಾರದೆಂಬ ಅರಿವು ಬರುತ್ತದೆ,ಸದಭಿರುಚಿಯನ್ನು ಹೊಂದಿರುವಾತನಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ,ಅದಿಲ್ಲದಿದ್ದವನಿಗೆ ಮನ್ನಣೆಯಿಲ್ಲ, ಇಲ್ಲಿ ರುಚಿಯನ್ನು Taste ಯೆಂಬರ್ಥದಲ್ಲಿಯೇ ಬಳಸುತ್ತಾರೆ, ಟೇಸ್ಟ್ ಕೂಡಾ ನಾಲಗೆಗೆ ಮಾತ್ರ ಸಂಬಂದಿಸಿದ್ದಲ್ಲ.”ಅವನ ಟೇಸ್ಟ್ ಚನ್ನಾಗಿಲ್ಲ”ವೆನ್ನುವಾಗ ಮತ್ತೆ ಅದು ಅಭಿರುಚಿಯ ಕಡೆಗೇ ನಮ್ಮನ್ನು ಕರೆದುಕೊಂಡು ಬರುತ್ತದೆ.
ರುಚಿಗೆ ಇನ್ನೊಂದು ಅರ್ಥವಿದೆ, ಅದು “ಕಾಂತಿ”. ಸೂರ್ಯನ ಕಾಂತಿ ಹೇಗೆ ಸ್ವಯಂಪ್ರಕಾಶವುಳ್ಳದ್ದೋ ಹಾಗೆಯೇ ನಾವಾಡುವ ಮಾತುಗಳೂ ಕೂಡಾ ಸ್ವಯಂಪ್ರಕಾಶದಿಂದ ಕೂಡಿದ್ದರೆ ಮತ್ತು ಚಂದ್ರನ ಕಾಂತಿಯಂತೆ ತಂಪಾಗಿದ್ದರೆ ಮಾತ್ರ ಆ ಮಾತಿಗೆ ಬೆಲೆ,ಮನ್ನಣೆ.
ಆತ ಸುಂದರ ಮಾತುಗಾರನೆಂಬಾಗ ಆತನ ಮಾತುಗಳು ಮುತ್ತಿನ ಹಾರದಂತೆ ಸುಂದರವಾಗಿ ಪೋಣಿಸಿದಂತೆಯೇ, ಸ್ಫಟಿಕದ ಶಲಾಕೆಯಂತೆ ಪಾರದರ್ಶಕ ವಾಗಿರಬೇಕು,ಮಾಣಿಕ್ಯದ ದೀಪ್ತಿಯಂತೆ ಸ್ವಯಂ ಪ್ರಕಾಶವನ್ನು ಹೊಂದಿರಬೇಕು.
“ಶ್ರೀ ವಿಶದವರ್ಣೇ ಮಧುರಾವೋಚಿತೆ ಸಚಿರ ರುಚಿರ ಪದರಚನೆ ಚಿರಂದೇವೀ ಸರಸ್ವತೀ…”ಮುಂತಾಗಿ ಸರಸ್ವತಿಯನ್ನು ಅರ್ಚಿಸುವಾಗ ಆಕೆ ಸಚಿರ ರುಚಿರ ಪದರಚನೆಗೆ ಪ್ರೇರಕಳು ಎಂಬುದನ್ನು ನೆನೆಯುವಾಗ ನಮಗೆ ” ರುಚಿ”ಮುಖ್ಯವಾಗುತ್ತದೆ.
ಇದೆರಡಕ್ಕೆ ಸಂವಾದಿಯಾಗಿ ಬರುವ ಪದವೇ”ಸವಿ”.ಇದೂ ಕೂಡಾ ರುಚಿಯಂತೆಯೇ ಬೇರೆಬೇರೆ ಸಮನಾಂತರ ನೆಲೆಗಳಿಗೆ ನಮ್ಮನ್ನ ಕರೆದೊಯ್ಯುತ್ತದೆ.
ಹೆಚ್ಚು ಬಳಕೆಯಾಗುವುದು “ನಾಲಗೆಯ ಸವಿ” ಎಂಬ ನೆಲೆಯಲ್ಲಾದರೂ ,ಸವಿಸವಿ ನೆನಪು,ಸವಿಯಾದ ಮಾತು,ಸವಿಯಾದ ಗೆಳೆತನ,ಸವಿನೋಟ,ಸವಿಗಾನ,ಸವಿಯೂಟ,ಸವಿಗನಸು,ಸವಿ ಗಳಿಗೆ, ಸವಿಯಾದ ಸ್ಪರ್ಷ,ಇಲ್ಲೆಲ್ಲಾ ಸವಿಯೆಂಬುದೂ ಕೂಡ ನಮ್ಮ ಪಂಚೇಂದ್ರಿಯಗಳ ಮೂಲಕ ಅರಿವಿಗೆ ಬರುವ ವಿಶೇಷವೆಂಬ ಅಂಶ ತಿಳಿಯುತ್ತದೆ‌
ನಮ್ಮ ದಿನನಿತ್ಯದ ವ್ವಹಾರಗಳಲ್ಲಿ ಈ ರುಚಿಗೆ,ಸವಿಗೆ,ಮಾಧುರ್ಯಕ್ಕೆಅತ್ಯಂತ ಹೆಚ್ಚಿನ ಮಹತ್ವವನ್ನು ನಮ್ಮ ಹಿರಿಯರು ನೀಡಿದ್ದಾರೆ.
ನಾವು ಆಡುವ ಮಾತುಗಳು ನಮ್ಮ ಯೋಗ್ಯತೆಯನ್ನು ಎತ್ತಿತೋರಿಸುತ್ತವಾದ್ದರಿಂದ ಸದಾ ಸುಂದರವಾದುದನ್ನು ಮಾತನಾಡಬೇಕು .
ನಾವು ಕೂರುವ ,ನಿಲ್ಲುವ, ಮಲಗುವ ಭಂಗಿಗಳು ನಮ್ಮ ಮನಸ್ಸನ್ನು,ಭಾವನೆಯನ್ನು ಪ್ರತಿಫಲಿಸುತ್ತವೆ,ಆದ್ದರಿಂದ ನಾವು ಆ ವಿಚಾರಗಳಲ್ಲಿ ಹೆಚ್ಚು ಜಾಗೃತರಾಗಿರಬೇಕು.ಹೀಗೇ ಕುಡಿಯಬೇಕು,ಹೀಗೇ ಉಣ್ಣ ಬೇಕೆಂಬ ಕಟ್ಟುಪಾಡುಗಳನ್ನು ಸಮಾಜವು ಈಕಾರಣಕ್ಕಾಗಿಯೇ ಅನುಸರಿಸಿತು.
ಭಾರತೀಯರ ಊಟವು ಬರಿಯ ಹೊಟ್ಟೆತುಂಬಿಸುವ “ಏನೋಒಂದಲ್ಲ”ಅದರ ಹಿಂದೆ ಶುದ್ದವೈಜ್ಞಾನಿಕತೆಯಿದೆ ,
ಆರೋಗ್ಯವೈದ್ಯ ಶಾಸ್ತ್ರವಿದೆ,
ಅಚ್ಚುಕಟ್ಟುತನವಿದೆ.
ಮಳೆಗಾಲದಲ್ಲಿ ಕೆಸು,ಕೊಡಸೆ,ಕಳಲೆ ಚಗತೆ ತಿನ್ನಬೇಕು,ಆಟಿಯಲ್ಲಿಪಾಲೆ ಮರದ (ಹಾಲೆ)ಕಷಾಯ ಕುಡಿಯಬೇಕು.ಬಾಳೆದಿಂಡಿನ ಪಲ್ಯ ತಿನ್ನ‌ಬೇಕು ಚಳಿಗಾಲದಲ್ಲಿ ಎಳ್ಳು,ಅವರೆ ಕಾಳು ತಿನ್ನಬೇಕು.ಇಂತಹ ನೂರಾರು ನಂಬಿಕೆ, ಆಚರಣೆಗಳ ಹಿಂದಿರುವುದು ನಮ್ಮ ರುಚಿಗೆ ಸಂಬಂಧಿಸಿದ ಶಾಸ್ತ್ರ.
ಸಂಪ್ರದಾಯಸ್ಥ ಮನೆಯ ವಿಶೇಷ ದಿನದ ಊಟವನ್ನು ಗಮನಿಸಿ,ಅದೆಷ್ಟು ರುಚಿ ಮತ್ತು ಮಾಧುರ್ಯ ದಿಂದ ಕೂಡಿದೆಯೆಂಬುದನ್ನೂ ಗಮನಿಸಿ .
ಊಟಕ್ಕೆ ಕುಳಿತ ಯಾರೂ ಹಾಕಿದ್ದನ್ನೆಲ್ಲ ಗಬಗಬನೆ ತಿನ್ನುವುದಿಲ್ಲ. ವೈದಿಕ ಮಂತ್ರೋಚ್ಚಾರಣೆಯ ಜತೆಗೆ ಕೆಲವು ಕ್ರಿಯಾವಿಧಿ ಗಳು ನಡೆಯುವಾಗ “ಎಡೆಶೃಂಗಾರ” ರೂಪದಲ್ಲಿ ಬಾಳೆಯೆಲೆಯ ಮೇಲೆ ಬರುವ ಪದಾರ್ಥಗಳ ಯಾದಿ ಮತ್ತು ಕ್ರಮವನ್ನು ಗಮನಿಸಿ ಎಡಭಾಗದ ಅಗ್ರದಲ್ಲಿ ಉಪ್ಪು,ಉಪ್ಪಿನಕಾಯಿ,ಹೆಸರು,ಕಡಲೆ ಕೋಸಂಬರಿ ,ಅವರೆ ಕಾಳಿನ ಪಲ್ಯ,ಎಳ್ಳಿನ ಚಟ್ನಿ,ಉದ್ದಿನ ಗೊಜ್ಜು,ಹುರುಳಿ ಚಟ್ನಿ,ಗೋದಿಕಡಿಯ ಪಾಯಸ ಅನ್ನ, ತೊಗರಿಯ ತೋವೆ.ತುಪ್ಪ .ಇವು ಸುಮ್ಮನೆ ಪ್ರದರ್ಶನದ ಪದಾರ್ಥಗಳಲ್ಲ.
ಇವು ನವಗ್ರಹದ ಪ್ರತಿನಿಧಿಗಳು. ರವಿಗೆ ಗೋಧಿ, ಚಂದ್ರನಿಗೆ ಅಕ್ಕಿ,ಮಂಗಳನಿಗೆ ತೊಗರಿ.ಬುಧನಿಗೆ ಹೆಸರು,ಗುರುವಿಗೆ ಕಡಲೆ,ಶುಕ್ರನಿಗೆ ಅವರೆ,ಶನಿಗೆ ಎಳ್ಳು,ರಾಹುವಿಗೆ ಉದ್ದು,ಕೇತುವಿಗೆ ಹುರಳಿ,ಇವು ನವಗ್ರಹದ ಪ್ರತಿನಿಧಿಗಳು.ನಮ್ಮ ಊಟದಲ್ಲಿ ಈ ಎಲ್ಲವೂ ಯೋಗ್ಯಪ್ರಮಾಣದಲ್ಲಿ ನಮ್ಮ ಜಠರವನ್ನು ಸೇರಬೇಕೆಂಬ ಸದಾಶಯವನ್ನು ನಮ್ಮ ರುಚಿಯು ನೆರವೇರಿಸುತ್ತದೆ, ಹಾಗಾಗಿ ಊಟದಾರಂಭದಲ್ಲಿ ನಾವು ಇದನ್ನು ಹಿತಮಿತವಾಗಿ ಸೇವಿಸಬೇಕೆಂಬ ಸದಾಶಯವನ್ನು ಹೊತ್ತ ನಮ್ಮ ಹಿರಿಯರು ಶಿಸ್ತಿನ ಹೆಸರಿನಲ್ಲಿ ಇದನ್ನು ತಂದರು.
ಇದರೊಂದಿಗೆ ನಾವು ಇನ್ನೂ ಕೆಲವು ಶಿಸ್ತುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಮುಂಜಾನೆ ಬೇಗನೆ ಯೇಳುವ ಮುಖೇನ ಹೆಚ್ಚು ಉತ್ಸಾಹವನ್ನು ಎದೆಯಲ್ಲಿ ತುಂಬಿಸಿಕೊಳ್ಳಬೇಕು ,ಮುಸ್ಸಂಜೆ ಮಲಗದಿರುವುದು, ಹೊಟ್ಟೆ ಬಿರಿಯೆತಿನ್ನದಿರುವುದು,ಕೆಟ್ಟದ್ದನ್ನ ಯೋಚಿಸದಿರುವುದು, ದಿನದ ಕೆಲ ನಿಮಿಷವಾದರು ಧ್ಯಾನ‌ಮಾಡುವುದು,ಸದಾ ಒಳಿತನ್ನ ಬಯಸುವುದು,ಅಧ್ಯಯನದಲ್ಲಿ ತೊಡಗುವುದು, ಕೆಲವು ಹೊತ್ತು ಸುಮಧುರ ಸಂಗೀತವನ್ನು ಆಲಿಸುವುದು,ಅತ್ತಲಿತ್ತ ಹೋಗದಂತೆ,ಸುತ್ತಿಸುಳಿದು ನೋಡದಂತೆ ಮತ್ತೊಂದ ಬಯಸದಂತೆ ಮನವನ್ನು ನಿಯಂತ್ರಿಸುವ ಯೋಗವೇ ಮುಂತಾದ ಶ್ರೇಷ್ಠ ಸಂಗತಿಗಳಲ್ಲಿ ಮನಸ್ಸನ್ನು ನೆಟ್ಟರೆ ಈ ಬದುಕಿಗೊಂದು ರುಚಿ,ಕಾಂತಿ,ಮಾಧುರ್ಯ ದೊರಕುತ್ತದೆ,ತನ್ಮೂಲಕ ನಮಗೊಂದು ವ್ಯಕ್ತಿತ್ವವೂ ಲಭಿಸುತ್ತದೆ.
ಹಾಗಾಗಲಿ ಎಂದು ಆಶಿಸೋಣ.

ಹರೀಶ್ .ಟಿ. ಜಿ

LEAVE A REPLY

Please enter your comment!
Please enter your name here